ನಾಳೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ
ಮೈಸೂರು

ನಾಳೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ

September 2, 2018

ಮೈಸೂರು: ಶುಕ್ರವಾರ ನಡೆದ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕಾ ಕಾರ್ಯವು ಮೈಸೂರಿನ ಪಡುವಾರಹಳ್ಳಿ ಬಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹೊಸ ಕಟ್ಟಡದಲ್ಲಿ ಸೆಪ್ಟೆಂಬರ್ 3 ರಂದು ನಡೆಯಲಿದೆ.

ಅಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿಗಳು, ಚುನಾವಣಾ ವೀಕ್ಷಕರು ಮತ್ತು ಎಲ್ಲಾ 13 ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂಗಳ ಸೀಲು ತೆಗೆದು ಇವಿಎಂಗಳನ್ನು ಹೊರಗೆ ತೆಗೆಯುವರು. ಪ್ರತೀ ಚುನಾವಣಾಧಿಕಾರಿಗಳ ವ್ಯಾಪ್ತಿಗೆ 5ರಂತೆ ಒಟ್ಟು 65 ಟೇಬಲ್‍ಗೆ ವ್ಯವಸ್ಥೆ ಮಾಡಿದ್ದು, ಪ್ರತೀ ಟೇಬಲ್‍ಗೆ ಮೂವರು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಮತ ಎಣಿಕೆಗೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಿ ಮತ್ತು ಡಿ ಗ್ರೂಪ್ ನೌಕರರೂ ಸೇರಿ ಒಟ್ಟು ಸುಮಾರು 1000 ಮಂದಿಯನ್ನು ಬಳಸಿಕೊಳ್ಳಲಾಗುತ್ತಿದೆ.

ಮಧ್ಯಾಹ್ನದ ವೇಳೆಗೆ ಫಲಿತಾಂಶ: ಬೆಳಿಗ್ಗೆ 8 ಗಂಟೆಗೆ ಎಣಿಕಾ ಕಾರ್ಯ ಆರಂಭವಾಗುವುದರಿಂದ ಮಧ್ಯಾಹ್ನದ ವೇಳೆಗೆ ಎಲ್ಲಾ 65 ವಾರ್ಡ್‍ಗಳ ಪೂರ್ಣ ಪ್ರಮಾಣದ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದೆ.

ಸಿದ್ಧತೆ ಪೂರ್ಣ: ಮತ ಎಣಿಕೆಗಾಗಿ ಮಹಾರಾಣಿ ವಾಣಿಜ್ಯ ಕಾಲೇಜು ಕಟ್ಟಡದಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಪ್ರವೇಶ ದ್ವಾರದಲ್ಲಿ ಮೆಟಲ್ ಡೋರ್ ಡಿಟೆಕ್ಟರ್ ಅಳವಡಿಸಿ, ಯಾವ ಯಾವ ವಾರ್ಡ್‍ಗಳ ಮತ ಎಣಿಕೆ ಯಾವ ಕೊಠಡಿಯಲ್ಲಿ ನಡೆಯಲಿದೆ ಎಂಬ ಮಾಹಿತಿಯೊಂದಿಗೆ ವಿವರವುಳ್ಳ ಫಲಕ ಹಾಕಲಾಗಿದೆ. ಕುಡಿಯುವ ನೀರು, ಉಪಹಾರ, ಊಟ, ಮಾಧ್ಯಮ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ.

ಅಭ್ಯರ್ಥಿಗಳಿಗೆ ತರಬೇತಿ: ಮತ ಎಣಿಕೆ ವೇಳೆ ಅನುಸರಿಸಬೇಕಾದ ಕ್ರಮ, ಪಾತ್ರ ಹಾಗೂ ಇನ್ನಿತರ ಮಾಹಿತಿಗಳ ಬಗ್ಗೆ ಇಂದು ಮತ ಎಣಿಕಾ ಕೇಂದ್ರದಲ್ಲಿ ಪಾಲಿಕೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಇಂದು ವೀಕ್ಷಕರು ಹಾಗೂ ಚುನಾವಣಾಧಿಕಾರಿಗಳು ತರಬೇತಿ ನೀಡಿ ಕೆಲ ಸಲಹೆ, ಮಾರ್ಗದರ್ಶನ ನೀಡಿದರು.

ಸಿಬ್ಬಂದಿಗೆ ತರಬೇತಿ: ಮತ ಎಣಿಕಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ನಾಳೆ (ಸೆ.2) ಬೆಳಿಗ್ಗೆ 10.30 ಗಂಟೆಗೆ ತರಬೇತಿ ನೀಡಲಾಗುವುದು.

ಭದ್ರತೆ, ಕಟ್ಟೆಚ್ಚರ: ಮತ ಎಣಿಕಾ ಕೇಂದ್ರದ ಕಟ್ಟಡದಲ್ಲಿರುವ 5 ಸ್ಟ್ರಾಂಗ್ ರೂಂಗಳ ಬಳಿ ಶಸ್ತ್ರ ಸಜ್ಜಿತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರಕ್ಕೆ ದಿನದ 24 ಗಂಟೆಗಳಲ್ಲಿ ಓರ್ವ ಇನ್ಸ್‍ಪೆಕ್ಟರ್, ಇಬ್ಬರು ಸಬ್ ಇನ್ಸ್‍ಪೆಕ್ಟರ್, 100 ಸಿಬ್ಬಂದಿ, 2 ಕೆಎಸ್‍ಆರ್‍ಪಿ ತುಕಡಿಗಳನ್ನು ಭದ್ರತೆಗೆ ನೇಮಿಸಲಾಗಿದೆ. ಎಸಿಪಿ ಮಟ್ಟದ ಅಧಿಕಾರಿಗಳು ಬಂದೋಬಸ್ತ್ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಮುಂಜಾಗ್ರತಾ ಕ್ರಮ: ಮತ ಎಣಿಕೆ ಹಿನ್ನೆಲೆಯಲ್ಲಿ ಕೇಂದ್ರದ ಸುತ್ತಲಿನ 100 ಮೀಟರ್ ಪ್ರದೇಶದಲ್ಲಿ ಸೆ.3ರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಸೆಕ್ಷನ್ 144 ರೀತ್ಯಾ ನಿಷೇಧಾಜ್ಞೆ ಜಾರಿ ಮಾಡಿ, ಸುತ್ತಲಿನ ರಸ್ತೆಗಳ ಸಂಚಾರವನ್ನು ಬ್ಯಾರಿಕೇಡ್‍ನಿಂದ ಬಂದ್ ಮಾಡಲಾಗುವುದು.

ವಾಹನ ಸಂಚಾರಕ್ಕೆ ನಿರ್ಬಂಧ

ಮೈಸೂರು: ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ಕಾಲೇಜು ಕಟ್ಟಡದಲ್ಲಿ ನಾಳೆ(ಸೆ.3) ನಗರ ಪಾಲಿಕೆ ಚುನಾವಣೆ ಮತ ಎಣಿಕೆ ನಡೆಯಲಿರುವ ಹಿನ್ನೆಲೆಯಲ್ಲಿ, ಮತ ಎಣಿಕಾ ಕೇಂದ್ರದ ಸುತ್ತಮುತ್ತಲಿನ ರಸ್ತೆ ವಾಹನ ಸಂಚಾರ ನಿರ್ಬಂಧಿಸಿ, ಬದಲಿ ಮಾರ್ಗವನ್ನು ಸೂಚಿಸಲಾಗಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಮತ ಎಣಿಕೆ ಕೇಂದ್ರಕ್ಕೆ ಬರುವ ಸಿಬ್ಬಂದಿ, ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಮೈಸೂರು-ಹುಣಸೂರು ರಸ್ತೆಯಲ್ಲಿ ಪಡುವಾರಹಳ್ಳಿ ಜಂಕ್ಷನ್‍ನಿಂದ ಪೂರ್ವಕ್ಕೆ ಕಲಾಮಂದಿರ ಜಂಕ್ಷನ್‍ವರೆಗೆ ಎರಡು ಬದಿಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವಾಲ್ಮೀಕಿ ರಸ್ತೆಯಲ್ಲಿ ಹುಣಸೂರು ರಸ್ತೆ ಜಂಕ್ಷನ್‍ನಿಂದ ಉತ್ತರಕ್ಕೆ ಕಾಳಿದಾಸ ರಸ್ತೆ ಜಂಕ್ಷನ್ ವರೆಗೆ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಲ್ಮೀಕಿ ರಸ್ತೆಯಲ್ಲಿ ಕಾಳಿದಾಸ ರಸ್ತೆ ಜಂಕ್ಷನ್‍ನಿಂದ ದಕ್ಷಿಣಕ್ಕೆ ಹುಣಸೂರು ರಸ್ತೆ ಜಂಕ್ಷನ್‍ವರೆಗೆ (ಪತ್ರಿಕಾ ಮಾಧ್ಯಮದವರು, ಚುನಾವಣಾ ಅಭ್ಯರ್ಥಿಗಳು, ಪಕ್ಷದ ಏಜೆಂಟರುಗಳು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿ ವಾಹನಗಳನ್ನು ಹೊರತು ಪಡಿಸಿ) ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಆದಿಪಂಪ ರಸ್ತೆಯಲ್ಲಿ ಮಾತೃಮಂಡಳಿ ವೃತ್ತದಿಂದ ವಾಲ್ಮೀಕಿ ರಸ್ತೆ ಜಂಕ್ಷನ್‍ವರೆಗೆ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಹುಣಸೂರು ರಸ್ತೆಯಲ್ಲಿ ಸೆಂಟ್ ಜೋಸೆಫ್ ಕಾನ್ವೆಂಟ್ ವೃತ್ತನಿಂದ ಪೂರ್ವಕ್ಕೆ ಪಡುವಾರಹಳ್ಳಿ ಜಂಕ್ಷನ್‍ವರೆಗೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಕಾಳಿದಾಸ ರಸ್ತೆಯಲ್ಲಿ ವಾಲ್ಮೀಕಿ ರಸ್ತೆ ಜಂಕ್ಷನ್‍ನಿಂದ ಪಶ್ಚಿಮಕ್ಕೆ(ಹಳೆ ಒಂಟಿಕೊಪ್ಪಲು) ಮಾತೃಮಂಡಳಿ ವೃತ್ತದವರೆಗೆ ಪೂರ್ವದಿಂದ ಪಶ್ಚಿಮಕ್ಕೆ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು, ಇದೇ ಭಾಗದ ರಸ್ತೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ವಾಹನ ನಿಲುಗಡೆ ಸ್ಥಳ: ಮತ ಎಣಿಕೆ ಕೇಂದ್ರಕ್ಕೆ ಬರುವ ಮಾಧ್ಯಮದವರು, ಚುನಾವಣಾ ಅಭ್ಯರ್ಥಿಗಳು, ಪಕ್ಷದ ಏಜೆಂಟರ್‍ಗಳು, ಮತ ಎಣಿಕಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿ ಮತ ಎಣಿಕೆ ಕೇಂದ್ರಕ್ಕೆ ಇದೇ ಮಾರ್ಗದಲ್ಲಿ ಸಂಚರಿಸಬೇಕು. ಕೆಆರ್‍ಎಸ್ ರಸ್ತೆಯಿಂದ ವಾಲ್ಮೀಕಿ ರಸ್ತೆ-ಆದಿಪಂಪ ರಸ್ತೆ ಜಂಕ್ಷನ್‍ನಲ್ಲಿ ಬಲ ತಿರುವು ಪಡೆದು ಆದಿಪಂಪ ರಸ್ತೆ ಮೂಲಕ ನಾರಾಯಣ ಸ್ವಾಮಿ ಬ್ಲಾಕ್ ರಸ್ತೆಗೆ ಎಡತಿರುವು ಪಡೆದು ಪಡುವಾರಹಳ್ಳಿ ಮಹದೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಮೈಧಾನ ತಲುಪಿ, ವಾಹನಗಳನ್ನು ನಿಲುಗಡೆ ಮಾಡಿ ಮತ ಎಣಿಕೆ ಕೇಂದ್ರದ ಕಡೆ ಸಾಗಬೇಕು. ಸಾರ್ವಜನಿಕ ವಾಹನಗಳಿಗೆ ಕಲಾಮಂದಿರ ಆವರಣ, ಮೈಸೂರು ವಿವಿ ಮಾನಸ ಗಂಗೋತ್ರಿ ಆವರಣದ ಮೈದಾನ. ಕುಕ್ಕರಹಳ್ಳಿ ಕೆರೆಯ ಪೂರ್ವ ಭಾಗದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆ ಕೇಂದ್ರವಾದ ಪಡುವಾರಹಳ್ಳಿ ಮಹಾರಾಣಿ ವಾಣಿಜ್ಯ ಕಾಲೇಜು ಸುತ್ತಮುತ್ತ ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಮತ ಎಣಿಕೆ ಕಾರ್ಯ ಮುಗಿಯವವರೆಗೂ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿಗಳು ಹಾಗೂ ವಿವಿಧ ರಾಜಕೀಯ ಪಕ್ಷದ ಕಾರ್ಯಕರ್ತರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

Translate »