ಕೌಟುಂಬಿಕ ಕಲಹಕ್ಕೆ ಮಹಿಳೆ ಬಲಿ
ಮೈಸೂರು

ಕೌಟುಂಬಿಕ ಕಲಹಕ್ಕೆ ಮಹಿಳೆ ಬಲಿ

June 24, 2018

ಮೈಸೂರು: ಕೌಟುಂಬಿಕ ಕಲಹಕ್ಕೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಮೈಸೂರಿನ ಗಾಯತ್ರಿಪುರಂನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಗಾಯತ್ರಿಪುರಂ ನಿವಾಸಿ ಝರೀನ ತಾಜ್(56) ಸಾವನ್ನಪ್ಪಿದವರು. ಕೌಟುಂಬಿಕ ಕಲಹದಲ್ಲಿ ಉಂಟಾದ ನೂಕಾಟ-ತಳ್ಳಾಟದಲ್ಲಿ ಆಯ ತಪ್ಪಿ ಬಿದ್ದು ಗಾಯಗೊಂಡಿದ್ದ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ 9.30 ಗಂಟೆ ವೇಳೆಗೆ ಕೊನೆಯುಸಿರೆಳೆದಿದ್ದಾರೆ.

ಝರೀನ ತಾಜ್‍ಳ ಸಹೋದರ ಮಹಮದ್ ರಫಿ ಎಂಬುವರ ಪುತ್ರಿ ಮುಸ್ಕಾನರನ್ನು ಒಂದೂವರೆ ವರ್ಷದ ಹಿಂದೆ ಸೈಯ್ಯದ್ ಸಲ್ಮಾನ್‍ಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ತದನಂತರ ಸಲ್ಮಾನ್ ಹಾಗೂ ಆತನ ಮನೆಯವರು ಕಿರುಕುಳ ನೀಡುತ್ತಿದ್ದರಿಂದ ಮಹಿಳಾ ಪೊಲೀಸ್ ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ ಕಳುಹಿಸಲಾಗಿತ್ತು ಎನ್ನಲಾಗಿದೆ.

ಶುಕ್ರವಾರ ಬೆಳಿಗ್ಗೆ ಮಹಮದ್ ರಫಿ ಅವರ ಮನೆಗೆ ಬಂದ ಸೈಯ್ಯದ್ ಸಲ್ಮಾನ್ ಮನೆಯವರು ಕ್ಯಾತೆ ತೆಗೆದು, ಜಗಳ ಆರಂಭಿಸಿದ್ದಾರೆ. ಮಾತಿನ ಚಕಮಕಿ ತಾರಕಕ್ಕೇರಿ ಕೈ-ಕೈ ಮಿಲಾಯಿಸಿದಾಗ ಆ ವೇಳೆ ಝರೀನ ತಾಜ್‍ಳನ್ನು ಬಲವಾಗಿ ತಳ್ಳಿದ ಪರಿಣಾಮ ಆಕೆ ಕೆಳಕ್ಕೆ ಬಿದ್ದು, ಗಾಯಗೊಂಡಿದ್ದರು.

ಪ್ರಕರಣ ದಾಖಲಿಸಿಕೊಂಡಿರುವ ನಜರ್‍ಬಾದ್ ಠಾಣೆ ಪೊಲೀಸರು, ಝರೀನ ತಾಜ್‍ರನ್ನು ತಳ್ಳಿ, ಆಕೆ ಸಾವಿಗೆ ಕಾರಣರಾದ ಸೈಯ್ಯದ್ ಸಲ್ಮಾನ್, ಆಯಿಷಾ, ಸುಲ್ತಾನ್, ಆಯಿಷಾ ಬಾನು ಅವರನ್ನು ಬಂಧಿಸಿದ್ದಾರೆ.

Translate »