ಪ್ರವಾಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ  ಅಪ್ರಾಪ್ತೆ ಶವವಾಗಿ ಪತ್ತೆ
ಹಾಸನ

ಪ್ರವಾಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ  ಅಪ್ರಾಪ್ತೆ ಶವವಾಗಿ ಪತ್ತೆ

June 24, 2018

ಹಾಸನ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿ ಕೆಲ ದಿನಗಳಿಂದ ನಾಪತ್ತೆ ಯಾಗಿದ್ದ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ಸಂಬಂಧ ನಾಲ್ವರು ಯುವಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತಿದ್ದಾರೆ.

ತಾಲೂಕಿನ ಮಲ್ಲದೇವರಪುರದ ಮಾಧುರ್ಯ ಸಾವನ್ನಪ್ಪಿ ರುವ ವಿದ್ಯಾರ್ಥಿನಿಯಾಗಿದ್ದು, ಸ್ನೇಹಿತರಾದ ಕೆ.ಆರ್. ನಗರದ ಅರುಣ್‍ಕುಮಾರ್, ಚಾಮರಾಜನಗರದ ಮಹೇಶ್, ಹಾಸನದ ಶರತ್ ರಾಜ್, ರಾಜೇಶ್ ಬಂಧಿತ ಯುವಕರಾಗಿದ್ದಾರೆ.

ವಿವರ: ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮಾಧುರ್ಯ, ತನ್ನ ಮತ್ತೊಬ್ಬ ಸ್ನೇಹಿತೆ ಹಾಗೂ ನಾಲ್ವರು ಯುವಕರೊಂದಿಗೆ ಜೂನ್ 16ರಂದು ಹಾಸ್ಟೆಲ್ ಬಿಟ್ಟು ಮೈಸೂರಿಗೆ ತೆರಳಿದ್ದು, 17ರಂದು ರಾತ್ರಿ ಹಾಸನಕ್ಕೆ ಮರಳಿದ್ದಳು. ಅಂದು ಮತ್ತೆ ರಾತ್ರಿ ರಾಜೇಶ್ ಎಂಬಾತನೊಂದಿಗೆ ಕಾರಿನಲ್ಲಿ ಹೋರಹೋಗಿ 18ರಂದು ಹಾಸ್ಟೆಲ್‍ಗೆ ಮರಳಿದ್ದಳು ಎನ್ನಲಾಗಿದೆ. ಆದರೆ 19ರಂದು ಎಂದಿನಂತೆ ತರಗತಿಗೆ ಹೋದವಳು, ಮರಳಿ ಹಾಸ್ಟೆಲ್‍ಗೆ ವಾಪಸ್ಸಾಗಿರಲಿಲ್ಲ. ಆದರೆ ಇಂದು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲಿಸಿದರು. ಪೋಷಕರ ದೂರಿನ ಮೇರೆಗೆ ನಗರ ಮಹಿಳಾ ಠಾಣೆ ಪೊಲೀಸರು, ಮೃತಳ ನಾಲ್ವರು ಸ್ನೇಹಿತರನ್ನು ವಶಕ್ಕೆ ಪಡೆದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Translate »