ಮಹಿಳಾ ಸಾಧಕರ ವಿಚಾರದಲ್ಲಿ ಮಹಿಳೆಯರಿಗೆ ನಿರಾಸಕ್ತಿ
ಮೈಸೂರು

ಮಹಿಳಾ ಸಾಧಕರ ವಿಚಾರದಲ್ಲಿ ಮಹಿಳೆಯರಿಗೆ ನಿರಾಸಕ್ತಿ

July 21, 2018

ಮೈಸೂರು: ಸ್ವಾತಂತ್ರ್ಯ ಬಂದ ನಂತರ ಮಹಿಳೆಯರ ಸಾಮಾಜಿಕ ಸ್ಥಿತಿ-ಗತಿಗಳು ಸಾಕಷ್ಟು ಸುಧಾರಿಸಿದೆ. ಆದರೆ, ಮಹಿಳಾ ಸಾಧಕರ ಕಾರ್ಯಕ್ರಮಗಳಿಗೆ ಮಹಿಳೆಯರೇ ಹೆಚ್ಚು ಭಾಗವಹಿಸುತ್ತಿಲ್ಲ ಎಂದು ಕಾದಂಬರಿಗಾರ್ತಿ ಮಂಗಳಾ ಸತ್ಯನ್ ಬೇಸರ ವ್ಯಕ್ತಪಡಿಸಿದರು.

ಮೈಸೂರು ಅರಮನೆ ಉತ್ತರ ದ್ವಾರದಲ್ಲಿರುವ ಕಸಾಪ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಕಲಾ ಕೂಟದ ಸಹಯೋಗದೊಂದಿಗೆ `ಸಾಹಿತ್ಯ ಸಂಜೆ’ ಶೀರ್ಷಿಕೆಯಡಿ ಆಯೋಜಿಸಿದ್ದ `ಕಾದಂಬರಿಗಾರ್ತಿ ತ್ರಿವೇಣಿ ಬದುಕು-ಬರಹ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ತ್ರಿವೇಣಿ ಅವರ ಬದುಕು-ಬರಹದ ಬಗ್ಗೆ ವಿಚಾರ ಸಂಕಿರಣದಲ್ಲಿ ಮಹಿಳೆಯರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ, ಅವರ ಆದರ್ಶ, ಬರಹಗಳ ಹೂರಣ ಹಾಗೂ ಹೆಣ್ಣಿನ ಬವಣೆ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತು. ಆದರೆ, ಇತ್ತೀಚೆಗೆ ಮಹಿಳೆಯರು ಸಾಹಿತ್ಯ ಕಾರ್ಯಕ್ರಮಗಳಿಗೆ ಬರುವುದು ಕಡಿಮೆಯಾಗಿದೆ ಎಂದರು.

ಕಾದಂಬರಿಗಾರ್ತಿ ತ್ರಿವೇಣಿ ಅವರ ಸಾಧನೆ ಪ್ರಸ್ತುತ ಯುವ ಮಹಿಳಾ ಬರಹಗಾರರಿಗೆ ಸ್ಫೂರ್ತಿ. 1970ರ ದಶಕದಲ್ಲಿ ಕನ್ನಡ ಕಾದಂಬರಿ ಪ್ರಿಯರಿಗೆ ತ್ರಿವೇಣಿ ಅವರ ಬರಹಗಳು ಸೂಜಿಗಲ್ಲಿನಂತೆ ಸೆಳೆದಿದ್ದವು. ಅವರ ಬರಹಗಳಲ್ಲಿ ಕಥಾ ತಿರುಳುಗಳು ಓದುಗರ ಮನಮುಟ್ಟುವಲ್ಲಿ ಯಶಸ್ವಿಯಾಗಿವೆ. ತ್ರಿವೇಣಿ ಅವರನ್ನು ನಾನು ಹತ್ತಿರದಿಂದ ನೋಡಿಲ್ಲ. ಆದರೆ, ಅವರ ಬರಹಗಳು ಜನಮಾನಸದಲ್ಲಿ ವಿಮರ್ಶೆಯಾಗುವುದನ್ನು ಕಂಡು ಅವರ ಬರಹಗಳನ್ನು ಅಧ್ಯಯನ ಮಾಡಲು ಶುರುಮಾಡಿದೆ. ನಂತರ ಅವರ ಬರಹಗಳಿಗೆ ಮಾರು ಹೋದೆ ಎಂದರು.

ತ್ರಿವೇಣಿ ಯವರ ಕಾದಂಬರಿಗಳಾದ ಹಣ್ಣೆಲೆ ಚಿಗುರಿದಾಗ(1968), ಬೆಳ್ಳಿಮೋಡ(1970), ಶರಪಂಚರ(1971), ಮುಕ್ತಿ ಹಾಗೂ ಹೂವು ಹಣ್ಣು (1993), ಕಂಕಣ ಕಾದಂಬರಿಗಳು ಚಲನಚಿತ್ರಗಳಾಗಿವೆ. ತ್ರಿವೇಣಿ ಅವರಿಗೆ `ಅವಳ ಮನೆ’ಕಾದಂಬರಿಗೆ 1960ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ. ಆದರೆ, ತಮ್ಮ 35ನೇ ವಯಸಿನಲ್ಲಿ ಸಾಧನೆಯ ಉತ್ತುಂಗದಲ್ಲಿದ್ದಾಗ 10 ತಿಂಗಳ ಹೆಣ್ಣು ಮಗುವನ್ನು ಬಿಟ್ಟು(ಮೀರಾ ಶಂಕರ) ನಿಧನರಾದರು. ಆದರೆ, ಅವರ ಸಾಧನೆಯನ್ನು ಮುಂದಿನ ಪೀಳಿಗೆಯವರು ಸಹ ನೆನಪಿಟ್ಟುಕೊಳ್ಳುತ್ತಾರೆ ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸಾಹಿತ್ಯ ಪ್ರಿಯರಿಗೆ `ತ್ರಿವೇಣಿ ’ ಎಂಬ ಕಾವ್ಯನಾಮದಿಂದಲೇ ಚಿರಪರಿಚಿತ. ಆದರೆ, ಮೂಲ ಹೆಸರು ಅನುಸೂಯ ಶಂಕರ್. ಅನಸೂಯ ಶಂಕರ್(ತ್ರಿವೇಣಿ ) ಅವರು ಮಂಡ್ಯದ ಬಿ.ಎಂ.ಕೃಷ್ಣಸ್ವಾಮಿ ಮತ್ತು ತಂಗಮ್ಮ ದಂಪತಿ ಪುತ್ರಿಯಾಗಿ 1928ರ ಸೆ.1ರಂದು ಜನಿಸಿದರು. ಇವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನೋ ಮಂಡ್ಯದಲ್ಲಿ ಪೂರೈಸಿದರು. ನಂತರ ಮೈಸೂರಿನ ಮಹಾರಾಣಣಿ ಕಾಲೇಜಿನಲ್ಲಿ ಬಿ.ಎ.ಪದವಿ ವ್ಯಾಸಂಗ ಮಾಡಿ, ಮನಃಶಾಸ್ತ್ರದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕ ಶಂಕರ್ ಅವರನ್ನು ಮದುವೆಯಾದರು. ಮನಃಶಾಸ್ತ್ರದ ವಿದ್ಯಾರ್ಥಿಯಾದ ತ್ರಿವೇಣಿ ಅವರು, ಅವರ ರಚಿತ ಎಲ್ಲಾ ಕಾದಂಬರಿಗಳು ಮನಃಶಾಸ್ತ್ರಕ್ಕೆ ಹತ್ತಿರವಾದ ಕಥಾ ವಸ್ತುಗಳಾಗಿವೆ ಎಂದರು.

ಕಾದಂಬರಿಗಳು: ಹಣ್ಣೆಲೆ ಚಿಗುರಿದಾಗ, ಬೆಳ್ಳಿಮೋಡ, ಶರಪಂಜರ, ಮುಕ್ತಿ, ಹೂವು ಹಣ್ಣು, ಕಾಶಿಯಾತ್ರೆ, ದೂರದ ಬೆಟ್ಟ, ಬೆಕ್ಕಿನ ಕಣ್ಣು, ಬಾನು ಬೆಳಗಿತು, ಹೃದಯಗೀತೆ,ಕೀಲುಗೊಂಬೆ, ಅಪಸ್ವರ,ಅಪಜಯ, ತಾವರೆಯ ಕೊಳ, ಸೋತು ಗೆದ್ದವಳು, ಕಂಕಣ, ಮುಚ್ಚಿದ ಬಾಗಿಲು, ಮೊದಲ ಹೆಜ್ಜೆ, ಅವಳ ಮನೆ, ವಸಂತಗಾನ, ತೀರ್ಥಯಾತ್ರೆ, ಎರಡು ಮನಸ್ಸು, ಹೆಂಡತಿಯ ಹೆಸರು, ಸಮಸ್ಯೆಯ ಮಗು,ಅವಳ ಮಗಳು (ಈ ಕಾದಂಬರಿಯು ಅರ್ಧವಾಗಿದ್ದಾಗ ತ್ರಿವೇಣಿ ಯವರು ನಿಧನರಾದರು. ಶ್ರೀಮತಿ ಎಮ್.ಸಿ.ಪದ್ಮಾ ಇದನ್ನು ಪೂರ್ಣಗೊಳಿಸಿದ್ದಾರೆ). ಕಥಸಂಕಲನಗಳಾದ ಸಮಸ್ಯೆಯ ಮಗು, ಎರಡು ಮನಸು, ಹೆಂಡತಿಯ ಹೆಸರು ರಚಿಸಿದ್ದಾರೆ. ಇದರಲ್ಲಿ ಅಪಸ್ವರ, ಅಪಜಯ ಸೇರಿದಂತೆ 7 ಸಣ್ಣಕಥೆಗಳನ್ನು `ತ್ರಿವೇಣಿ ಸಪ್ತಕ್’ ಹೆಸರಿನಲ್ಲಿ ಹಿಂದಿಗೆ ಎಸ್.ಎಂ.ರಾಮಸ್ವಾಮಿ ಅನುವಾದಿಸಿದ್ದಾರೆ. ಮೀರಾ ನರ್ವೆಕರ್ ಎಂಬುವರು, ಶರಪಂಜರ ಕಾದಂಬರಿಯನ್ನು `ದಿ ಮ್ಯಾಡ್ ವುಮನ್’ ಎಂಬ ಹೆಸರಿನಲ್ಲಿ ಇಂಗ್ಲಿಷ್‍ಗೆ ಅನುವಾದಿಸಿರುವುದಲ್ಲದೆ, ಅನುವಾದಕಿ ಶರ್ವಾಣೆ ಅವರು `ಬೆಕ್ಕಿನ ಕಣ್ಣು’ ಕಾದಂಬರಿಯನ್ನು ತೆಲುಗಿಗೆ ಅನುವಾದಿಸಿದ್ದಾರೆ. ಅದರಲ್ಲೂ `ಬೆಕ್ಕಿನ ಕಣ್ಣು’ ಕಾದಂಬರಿ ಮಲೆಯಾಳಂನಲ್ಲಿ ಚಲನಚಿತ್ರವಾಯಿತು.

ವೇದಿಕೆಯಲ್ಲಿ ಕುವೆಂಪುನಗರ ಸರ್ಕಾರಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಹೆಚ್.ಪಿ.ಗೀತಾ, ಕಸಾಪ ಜಿಲ್ಲಾದ್ಯಕ್ಷ ಡಾ.ವೈ.ಡಿ.ರಾಜಣ್ಣ, ತ್ರಿವೇಣಿ ಅವರ ಪುತ್ರಿ ಹಾಗೂ ತ್ರಿವೇಣಿ ಶಂಕರ್ ಲಿಟರರಿ ಟ್ರಸ್ಟ್ ಅಧ್ಯಕ್ಷೆ ಮೀರಾ ಶಂಕರ್, ಅನುಷಾ, ಹಿರಿಯ ಸಾಹಿತಿ ಡ.ಜಯಪ್ಪ ಹೊನ್ನಾಳಿ, ರಂಗಕರ್ಮಿ ರಾಜಶೇಖರ ಕದಂಬ, ಸದಸ್ಯರಾದ ಕೆ.ಎಸ್.ನಾಗರಾಜು, ಮೂಗೂರು ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಉಪಸ್ಥಿತರಿದ್ದರು. ಸಾಂಬಶಿವಮೂರ್ತಿ ಪ್ರಾರ್ಥಿಸಿದರು.

ಮೈಸೂರು ಅರಮನೆ ಉತ್ತರ ದ್ವಾರದಲ್ಲಿರುವ ಕಸಾಪ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಕಲಾ ಕೂಟದ ಸಹಯೋಗದೊಂದಿಗೆ `ಸಾಹಿತ್ಯ ಸಂಜೆ’ ಶೀರ್ಷಿಕೆಯಡಿ ಆಯೋಜಿಸಿದ್ದ `ಕಾದಂಬರಿಗಾರ್ತಿ ತ್ರಿವೇಣ ಬದುಕು-ಬರಹ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

Translate »