ಬೆಮೆಲ್ ಖಾಸಗೀಕರಣ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ ಆರಂಭ
ಮೈಸೂರು

ಬೆಮೆಲ್ ಖಾಸಗೀಕರಣ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ ಆರಂಭ

February 2, 2022

ಮೈಸೂರು,ಫೆ.೧(ಪಿಎಂ)- ಸಾರ್ವ ಜನಿಕ ಉದ್ದಿಮೆಯಾದ ಬೆಮೆಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಅನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ಬೆಮೆಲ್‌ನ ಮೈಸೂರು ಉತ್ಪಾದನಾ ಘಟಕದ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ಹೂಟಗಳ್ಳಿ-ಕೆಆರ್‌ಎಸ್ ರಸ್ತೆಯ ಕಾರ್ಖಾನೆ ಮುಖ್ಯ ದ್ವಾರದಲ್ಲಿ ನೂರಾರು ಕಾರ್ಮಿಕರು ಜಮಾಯಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಬಳಿಕ ಕಾರ್ಮಿಕರು ಕರ್ತವ್ಯಕ್ಕೆ ತೆರಳಿ ದರು. ಇದೇ ರೀತಿ ಫೆ.೫ರವರೆಗೆ ಪ್ರತಿಭಟನೆ ನಡೆಸಲು ಕಾರ್ಮಿಕರು ನಿರ್ಧರಿಸಿದ್ದಾರೆ.
ನಮ್ಮ ಸಂಸ್ಥೆಯು ೧೯೬೪ರಿಂದ ಲಾಭ ದಾಯಕ ಉದ್ದಿಮೆಯಾಗಿ ದೇಶದ ರಕ್ಷಣಾ ವಲಯ ಮಾತ್ರವಲ್ಲದೆ, ವಿವಿಧ ವಲಯಗಳಿಗೆ ಯಂತ್ರೋಪಕರಣ-ವಾಹನಗಳ ಪೂರೈಕೆ ಮಾಡುತ್ತಿದೆ. ಇದ ರಲ್ಲಿ ಸಂಸ್ಥೆಯು ಗಣನೀಯ ಕೊಡುಗೆ ನೀಡುತ್ತಿದೆ. ಆದರೂ ಕೇಂದ್ರ ಸರ್ಕಾರ ಖಾಸಗಿಯವರಿಗೆ ನಮ್ಮ ಸಂಸ್ಥೆಯನ್ನು ಮಾರಾಟ ಮಾಡಲು ಹೊರಟಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿ ಸಿದರು. ಸಾರ್ವಜನಿಕ ಉದ್ದಿಮೆಯಾದ ಬೆಮೆಲ್ ಸಂಸ್ಥೆಯು ೧೯೬೪ರಲ್ಲಿ ಮಾತೃ ಸಂಸ್ಥೆಯಾದ ಹೆಚ್‌ಎಎಲ್‌ನಿಂದ ಬೇರ್ಪಟ್ಟು ರೈಲು ಕೋಚ್‌ಗಳ ಉತ್ಪಾದನೆ ಹಾಗೂ ಬಿಡಿಭಾಗಗಳ ಪೂರೈಕೆಗಾಗಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡಿತು. ನಂತರ ಕೆಜಿಎಫ್, ಮೈಸೂರು ಹಾಗೂ ಕೇರಳದ ಪಾಲಕ್ಕಾಡ್‌ನಲ್ಲಿ ಉತ್ಪಾದನಾ ಘಟಕಗಳನ್ನು ವಿಸ್ತರಿಸಿತು. ರಕ್ಷಣೆ, ರೈಲು, ಮೇಟ್ರೋ, ಗಣ ಗಾರಿಕೆ, ಮೂಲಸೌಕರ್ಯ ಹಾಗೂ ಏರೋಸ್ಪೇಸ್ ವಲಯಗಳಿಗೆ ಅಗತ್ಯವಾದ ಯಂತ್ರ ಮತ್ತು ವಾಹನ ಗಳನ್ನು ಉತ್ಪಾದಿಸುತ್ತಿರುವ ಸಂಸ್ಥೆಯು, ಆ ಮೂಲಕ ಉತ್ಕೃಷ್ಟ ಸೇವೆ ನೀಡುತ್ತಿದೆ. ಸಂಸ್ಥೆಯ ಖಾಸಗೀಕರಣದ ನಿರ್ಧಾರ ದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯ ಬೇಕು ಎಂದು ಒತ್ತಾಯಿಸಿದರು.

ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ತೆರಿಗೆ ಹಾಗೂ ಲಾಭಾಂಶ ರೂಪದಲ್ಲಿ ಸಾವಿ ರಾರು ಕೋಟಿ ರೂ.ಗಳನ್ನು ನೀಡುವುದರ ಜೊತೆಗೆ ಷೇರುದಾರರಿಗೆ ಪ್ರತಿವರ್ಷ ಡಿವಿಡೆಂಟ್ ಪಾವತಿ ಮಾಡುತ್ತಾ ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿದೆ. ಬೆಮೆಲ್ ಮೈಸೂರು ಘಟಕವು ೧೯೮೪ರಲ್ಲಿ ಪ್ರಾರಂಭ ಗೊಂಡು ಸುಮಾರು ೭೦೦ ಎಕರೆ ಪ್ರದೇಶ ದಲ್ಲಿ ಟ್ರಕ್, ಇಂಜಿನ್ ಹಾಗೂ ಏರೋ ಸ್ಪೇಸ್ ಉತ್ಪಾದನಾ ವಿಭಾಗಗಳನ್ನು ಹೊಂದಿದೆ. ಯಾವುದೇ ಕಾರಣಕ್ಕೂ ಸಂಸ್ಥೆಯನ್ನು ಖಾಸಗಿಕರಣ ಮಾಡಬಾರದು ಎಂದು ಆಗ್ರಹಿಸಿದರು. `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಭಾರತ್ ಅರ್ಥ್ ಮೂವರ್ಸ್ ಎಂಪ್ಲಾಯಿಸ್ ಅಸೋಸಿಯೇಷನ್ ಮೈಸೂರು ಅಧ್ಯಕ್ಷ ಹೆಚ್.ವೈ.ಮುನಿರೆಡ್ಡಿ, ಖಾಸಗೀಕರಣಕ್ಕೆ ಕೈ ಹಾಕಿರುವ ಕೇಂದ್ರ ಸರ್ಕಾರದ ನಿಲುವು ಖಂಡನೀಯ. ಇದನ್ನು ವಿರೋಧಿಸಿ ನಮ್ಮ ಸಂಸ್ಥೆಯ ಸುಮಾರು ೮ ಸಾವಿರ ಕಾರ್ಮಿಕರನ್ನು (ಬೆಂಗಳೂರು, ಕೆಜಿಎಫ್, ಮೈಸೂರು ಹಾಗೂ ಕೇರಳದ ಪಾಲಕ್ಕಾಡ್ ಘಟಕಗಳ ಒಟ್ಟು ಕಾರ್ಮಿಕರು) ಪ್ರತಿನಿಧಿಸುವ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯು ೨೦೧೭ರಿಂದ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.

ಬೆಮೆಲ್ ಸಂಸ್ಥೆಯನ್ನು ಕೇಂದ್ರ ಸರ್ಕಾ ರದ ಸ್ವಾಮ್ಯದಲ್ಲಿಯೇ ಉಳಿಸಬೇಕೆಂದು ಕಾನೂನು ಹೋರಾಟಕ್ಕೂ ಮುಂದಾಗಿ ದ್ದೇವೆ. ವಿವಿಧೆಡೆ ಇರುವ ಸಂಸ್ಥೆಯ ಎಲ್ಲಾ ಘಟಕಗಳಲ್ಲಿ ಫೆ.೫ರವರೆಗೆ ಪ್ರತಿದಿನ ಪ್ರತಿಭಟನೆ ನಡೆಸಲಾಗುವುದು. ಅಂತೆಯೇ ಇಂದು ಎಲ್ಲಾ ಘಟಕಗಳ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಿದರು.
ಅಸೋಸಿಯೇಷನ್ ಪ್ರಧಾನ ಕಾರ್ಯ ದರ್ಶಿ ಎಂ.ಡಿ.ರಾಜಶೇಖರಮೂರ್ತಿ, ಉಪಾಧ್ಯಕ್ಷ ಗೋವಿಂದರೆಡ್ಡಿ, ಕಾರ್ಯ ದರ್ಶಿ ಸುರೇಶ್, ಖಜಾಂಚಿ ಎಂ.ಬಿ.ಜಗದೀಶ್ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »