ಆನೆ ಲದ್ದಿಯಿಂದ ತಯಾರಾಗಿದೆ ಅಂಚೆ ಲಕೋಟೆ!! ಇದು ಕೇವಲ ಸಂಗ್ರಹಕ್ಕೆ ಮಾತ್ರ ಲಭ್ಯ
ಮೈಸೂರು

ಆನೆ ಲದ್ದಿಯಿಂದ ತಯಾರಾಗಿದೆ ಅಂಚೆ ಲಕೋಟೆ!! ಇದು ಕೇವಲ ಸಂಗ್ರಹಕ್ಕೆ ಮಾತ್ರ ಲಭ್ಯ

August 13, 2018

ಮೈಸೂರು:  ಆನೆ ಲದ್ದಿಯಿಂದ ತಯಾರಾದ ಕಾಗದಕ್ಕೆ ಸಿಕ್ಕಿದೆ ಅಂಚೆ ಲಕೋಟೆ ಸ್ಪರ್ಶ! ಹೌದು, ಆನೆ ಸಂತತಿ ಸಂರಕ್ಷಣೆಯ ಸಂದೇಶ ಸಾರಲು ಆನೆಯ ಲದ್ದಿಯಲ್ಲಿರುವ ನಾರಿನಿಂದ ತಯಾರು ಮಾಡಿರುವ ಕಾಗದದಲ್ಲಿ ಅಂಚೆ ಲಕೋಟೆ ಹೊರತರಲಾಗಿದೆ.

ಅರಣ್ಯ ಇಲಾಖೆ ಹಾಗೂ ಭಾರತೀಯ ಅಂಚೆ ಇಲಾಖೆ ಜಂಟಿ ಆಶ್ರಯದಲ್ಲಿ ವಿಶ್ವ ಆನೆ ದಿನದ ಅಂಗವಾಗಿ ಹೊರತಂದಿರುವ ಈ ವಿಶೇಷ ಅಂಚೆ ಲಕೋಟೆಯನ್ನು ಭಾನುವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲಕೋಟೆಯನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆಗೊಳಿಸಿದರು. ಆನೆಗಳ ಸಂರಕ್ಷಣೆ ಹಾಗೂ ಆನೆ ಮತ್ತು ಮಾನವನ ನಡುವಿನ ಸಂಘರ್ಷಕ್ಕೆ ಎಡೆ ಮಾಡಬಾರದೆಂಬ ಸಂದೇಶ ರವಾನಿಸಲು ಈ ವಿಶೇಷ ಅಂಚೆ ಲಕೋಟೆ ಹೊರತರಲಾಗಿದೆ. ಈ ಲಕೋಟೆಯನ್ನು ಶೇಖರಿಸಿಕೊಳ್ಳಲು ಅವಕಾಶವಿದ್ದು, ಅಂಚೆ ಸಂವಹನ ವ್ಯಾಪ್ತಿಗೆ ಬರುವುದಿಲ್ಲ.

ಮಾಧ್ಯಮದವರೊಂದಿಗೆ ಮಾತನಾಡಿದ ಪಿಸಿಸಿಎಫ್ (ವನ್ಯಜೀವಿ) ಜಯರಾಮ್, ಇಂದು (ಆ.12) ವಿಶ್ವ ಆನೆ ದಿನವಾಗಿದ್ದು, ಈ ದಿನದ ಸ್ಮರಣೆಗಾಗಿ ವಿಶೇಷ ಲಕೋಟೆ ಹೊರತರಲಾಗಿದೆ. ಆನೆ ಲದ್ದಿಯ ನಾರಿನಿಂದ ತಯಾರು ಮಾಡಲಾದ ಕಾಗದವನ್ನು ಕೇರಳದಿಂದ ಆಮದು ಮಾಡಿಕೊಂಡು ಈ ವಿಶೇಷ ಲಕೋಟೆ ಹೊರತರಲಾಗಿದೆ. ಎರಡು ಇಲಾಖೆಗಳು ತಲಾ ಒಂದು ಸಾವಿರ ಲಕೋಟೆಯನ್ನು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.

ವೆಚ್ಚ 88 ರೂ., ಮಾರಾಟ 25 ರೂ.: ಈ ವಿಶೇಷ ಲಕೋಟೆಯೊಂದಕ್ಕೆ 88 ರೂ. ವೆಚ್ಚವಾಗಲಿದೆ. ಇದು ಸ್ಮರಣೆಗಾಗಿ ಹೊರತಂದಿರುವ ಲಕೋಟೆಯಾಗಿದ್ದು, ಒಂದು ಲಕೋಟೆಗೆ 25 ರೂ.ನಂತೆ ಶುಲ್ಕ ನಿಗದಿ ಮಾಡಲಾಗಿದೆ. ಅಂಚೆ ಇಲಾಖೆ ಹಾಗೂ ಅರಣ್ಯ ಇಲಾಖೆಯಲ್ಲಿ ಈ ಲಕೋಟೆ ಖರೀದಿಸಿ ಸಂಗ್ರಹಿಸಿಕೊಳ್ಳಬಹುದು ಎಂದರು.

ದುಬಾರೆ ಶಿಬಿರದ ಆನೆ ಲದ್ದಿ: ದುಬಾರೆ ಆನೆ ಶಿಬಿರದಲ್ಲಿ 35 ಆನೆಗಳಿದ್ದು, ಈ ಆನೆಗಳ ಲದ್ದಿ ಬಳಸಿಕೊಂಡು ಕಾಗದ ತಯಾರು ಮಾಡಲು ಖಾಸಗಿ ಕಾಗದ ಕಾರ್ಖಾನೆಯೊಂದಕ್ಕೆ ಅನುಮತಿ ನೀಡಲಾಗಿದೆ. ಇದು ಆರಂಭಿಕ ಹಂತವಾಗಿದ್ದು, ಕಾರ್ಖಾನೆ ಹೆಚ್ಚಿನ ಬೇಡಿಕೆ ಇಟ್ಟರೆ ಇಲಾಖಾ ವ್ಯಾಪ್ತಿಯಲ್ಲಿರುವ 4 ಮುಖ್ಯ ಆನೆ ಶಿಬಿರಗಳಿಂದ ಲದ್ದಿ ಪೂರೈಕೆ ಮಾಡಲು ಕ್ರಮ ವಹಿಸಲಾಗುವುದು. ಎಲ್ಲಾ ಮುಖ್ಯ ಆನೆ ಶಿಬಿರಗಳಿಂದ ಒಟ್ಟು 140 ಆನೆಗಳಿವೆ ಜಯರಾಮ್ ಹೇಳಿದರು.

ಏಷ್ಯಾದ ಆನೆಗಳು ದಿನವೊಂದಕ್ಕೆ 16 ಸಲ ಲದ್ದಿ ವಿಸರ್ಜಿನೆ (ಒಂದು ಆನೆ) ಮಾಡಲಿವೆ. ನಮ್ಮ ಶಿಬಿರಗಳಲ್ಲೇ ಆನೆಗಳು ಎಲ್ಲ ಸಮಯವನ್ನು ಕಳೆಯುವುದಿಲ್ಲ. ಅವುಗಳು ಹೆಚ್ಚಿನ ಆಹಾರ ಸ್ವೀಕರಿಸಲಿ ಎಂಬ ಕಾರಣಕ್ಕೆ ಅರಣ್ಯದಲ್ಲಿ ಅಡ್ಡಾಡಲು ಬಿಡುವ ಹಿನ್ನೆಲೆಯಲ್ಲಿ ಆನೆಯೊಂದು ದಿನಕ್ಕೆ ವಿಸರ್ಜಿಸುವ ಎಲ್ಲಾ ಲದ್ದಿಯನ್ನೂ ಶೇಖರಣೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಆನೆಗಳು ಒಂದೊಂದು ಋತುವಿನಲ್ಲಿ ಒಂದೊಂದು ಬಗೆಯ ಆಹಾರ ಸ್ವೀಕರಿಸುವ ಹಿನ್ನೆಲೆಯಲ್ಲಿ ಋತುವಿನಿಂದ ಋತುವಿಗೆ ಲದ್ದಿಯಲ್ಲಿ ದೊರೆಯುವ ನಾರಿನಾಂಶದ ಪ್ರಮಾಣದಲ್ಲೂ ಹೆಚ್ಚು ಕಡಿಮೆ ಆಗಲಿದೆ ಎಂದು ವಿವರಿಸಿದರು.

ಅತಿ ಹೆಚ್ಚು ಆನೆಗಳಿರುವುದು ರಾಜ್ಯದಲ್ಲಿ: ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಆನೆಗಳನ್ನು ಹೊಂದಿರುವ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ತಮಿಳುನಾಡು ಹಾಗೂ ಕೇರಳ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನದಲ್ಲಿ ಇರಬಹುದು. ಇಲ್ಲವೇ ಅದಲು ಬದಲು ಸಹ ಆಗಬಹುದು. ಒಟ್ಟಾರೆ ಕರ್ನಾಟಕ ಹೆಚ್ಚು ಆನೆಗಳನ್ನು ಹೊಂದುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ಜಯರಾಮ್ ತಿಳಿಸಿದರು.

ಇದೇ ವೇಳೆ ಮಾತನಾಡಿದ ಅಂಚೆ ಇಲಾಖೆಯ ಬೆಂಗಳೂರು ಪೂರ್ವ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸಂದೇಶ್ ಮಹದೇವಪ್ಪ, ಜನಸಾಮಾನ್ಯರಲ್ಲಿ ಆನೆಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆನೆ ದಿನದಂದು ಈ ವಿಶೇಷ ಲಕೋಟೆ ಹೊರತರಲಾಗಿದೆ. ಮಿತ ಸಂಖ್ಯೆಯಲ್ಲಿ ಈ ಲಕೋಟೆಯನ್ನು ಮುದ್ರಣಗೊಳಿಸಲಾಗಿದ್ದು, ನಾಳೆಯಿಂದ ದೇಶದ ಪ್ರಮುಖ ಅಂಚೆ ಕಚೇರಿಯಲ್ಲಿ ಸಾರ್ವಜನಿಕರ ಖರೀದಿಗೆ ಲಭ್ಯವಾಗಲಿವೆ. ಲಕೋಟೆಯಲ್ಲಿ ಮೂರು ಅಳತೆಗಳು ಬರಲಿದ್ದು, ಅದರಲ್ಲಿ ಇದು ಪ್ರಮಾಣಿತ ಅಳತೆಯ ಲಕೋಟೆಯಾಗಿದೆ. ಇದನ್ನು ಸಂಗ್ರಹ ಮತ್ತು ಸ್ಮರಣೆ ಹಿನ್ನೆಲೆಯಲ್ಲಿ ಬಳಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ನಿಗದಿತ ಸಮಯಕ್ಕಿಂತ ತಡವಾಗಿ ಆಗಮಿಸಿದ ಸಿಎಂ ಕುಮಾರಸ್ವಾಮಿಯವರು ಲಕೋಟೆ ಬಿಡುಗಡೆಗೊಳಿಸಿ ಮಾಧ್ಯಮದವರಿಗೂ ಪ್ರತಿಕ್ರಿಯೆ ನೀಡಿದೇ ತರಾತುರಿಯಲ್ಲಿ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದರು. ಸಂಸದ ಆರ್.ಧ್ರುವನಾರಾಯಣ್, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಅರಣ್ಯ ಇಲಾಖೆಯ ಪಿಸಿಸಿಎಫ್ (ಅರಣ್ಯ ಪಡೆ) ಪುನ್ನಟಿ ಶ್ರೀಧರ್, ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾಲಯದ ಕಾರ್ಯನಿರ್ವಾಹಕ ನಿದೇರ್ಶಕ ಅಜಿತ್ ಎಂ.ಕುಲಕರ್ಣಿ, ಡಿಸಿಎಫ್ ಸಿದ್ದರಾಮಪ್ಪ ಚಳ್ಕಾಪುರೆ, ಆರ್‍ಎಫ್‍ಓಗಳಾದ ಎಂ.ಕೆ.ದೇವರಾಜು, ಅನನ್ಯಕುಮಾರ್, ಅಂಚೆ ಇಲಾಖೆಯ ಮೈಸೂರು ವಿಭಾಗದ ಹಿರಿಯ ಅಂಜೆ ಅಧಿಕ್ಷಕ ಎನ್.ಪ್ರಕಾಶ್ ಮತ್ತಿತರರು ಹಾಜರಿದ್ದರು.

ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರಿಗೆ ಮಾತ್ರ ಪ್ರವೇಶ
ಮೈಸೂರು:  ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ಒಳಾವರಣ ಪ್ರವೇಶವನ್ನು ಪ್ರಯಾಣಿಕರನ್ನು ಹೊರತುಪಡಿಸಿ ಸಂದರ್ಶಕರಿಗೆ ನಿರ್ಬಂಧಿಸಲಾಗಿದೆ.
ಆ.15ರ ಸ್ವಾತಂತ್ರ್ಯ ದಿನಾಚರಣೆ ಸಮೀಪ ಇರುವ ಹಿನ್ನೆಲೆಯಲ್ಲಿ ಯಾವುದೇ ವಿಧ್ವಂಸಕ ಕೃತ್ಯ ನಡೆಯದಂತೆ ಎಚ್ಚರ ವಹಿಸಿರುವ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ದೇಶದ ಎಲ್ಲಾ ವಿಮಾನ ನಿಲ್ದಾಣದಲ್ಲಿ ಬೀಗಿ ಭದ್ರತೆ ಕೈಗೊಳ್ಳಲು ಸೂಚನೆ ನೀಡಿದೆ. ಅದರಂತೆ ಮೈಸೂರು ವಿಮಾನ ನಿಲ್ದಾಣದಲ್ಲೂ ಕ್ರಮ ಕೈಗೊಳ್ಳಲಾಗಿದ್ದು, ವಿಮಾನ ನಿಲ್ದಾಣದ ಒಳಾವರಣ ಪ್ರವೇಶವನ್ನು ಸಂದರ್ಶಕರಿಗೆ ನಿರ್ಬಂಧಿಸಲಾಗಿದೆ. ಆ.10ರಿಂದ 20ರವರೆಗೆ ಈ ನಿರ್ಬಂಧ ಅನ್ವಯವಾಗಲಿದ್ದು, ಪ್ರಯಾಣಿಕರ ಪ್ರವೇಶಕ್ಕೆ ನಿಷೇಧವಿಲ್ಲ. ಈ ಮಾಹಿತಿ ಒಳಗೊಂಡ ಫಲಕವನ್ನು ಮೈಸೂರು ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದೆ.

Translate »