ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್
ಮೈಸೂರು, ಫೆ.1(ಪಿಎಂ)- ಕೇಂದ್ರ ಬಜೆಟ್ ಕೃಷಿ ಕ್ಷೇತ್ರಕ್ಕೆ ನಿರಾಸೆ ತಂದಿದೆ. ಇದರಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ರೈತರ ಆದಾಯ ದ್ವಿಗುಣಗೊಳಿಸಲು ಸ್ಪಷ್ಟ ಕಾರ್ಯಕ್ರಮಗಳೇ ಇಲ್ಲ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಕೃಷಿ ಸಾಲ ನೀತಿ ಬಗ್ಗೆ ಯಾವುದೇ ಯೋಜನೆಗಳಿಲ್ಲ. ರೈತರಿಗೆ ಈ ಬಜೆಟ್ ನಿರಾಸೆ ತಂದಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಟೀಕಿಸಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ತಿದ್ದುಪಡಿ ತಂದು ಪ್ರತಿ ರೈತನ ಕೃಷಿ ಭೂಮಿಗೂ ವಿಮೆ ಅನ್ವಯಿಸುವ ವ್ಯವಸ್ಥೆ ಜಾರಿಯಾಗದಿದ್ದರೆ ಯಾವುದೇ ಪ್ರಯೋಜನವಿಲ್ಲ. ಕೃಷಿ ಕ್ಷೇತ್ರಕ್ಕೆ ನೀಡುತ್ತಿದ್ದ ಸಾಲ ಮೊತ್ತವನ್ನು 12 ಲಕ್ಷ ಕೋಟಿ ರೂ.ನಿಂದ 15 ಲಕ್ಷ ಕೋಟಿ ರೂ.ಗೆ ಈಗ ಏರಿಸಲಾಗಿದೆ. ಆದರೆ ಸಾಲ ನೀತಿ ಬದಲಾವಣೆ ಮಾಡದಿದ್ದರೆ ರೈತರ ಹೆಸರಿನಲ್ಲಿ ಕೃಷಿ ಉಪಕರಣಗಳನ್ನು ತಯಾರು ಮಾಡುವ ಕಂಪನಿಗಳು ಈ ಸವಲತ್ತನ್ನು ಹೆಚ್ಚು ಬಳಸಿಕೊಳ್ಳಲಿವೆಯೇ ಹೊರತು ರೈತರಿಗೆ ಪ್ರಯೋಜನವಾಗದು ಎಂದಿದ್ದಾರೆ. ಶೇ.70ರಷ್ಟು ರೈತರಿರುವ ದೇಶದಲ್ಲಿ ಕೃಷಿಗೆ ಮೀಸಲಿರಿಸಿರುವ ಅನುದಾನ ಏನೇನೂ ಸಾಲದು. ಧನಲಕ್ಷ್ಮಿ ಯೋಜನೆ ಮೂಲಕ ಧಾನ್ಯಗಳ ಮಾರಾಟಕ್ಕೆ ಯೋಜನೆ ರೂಪಿಸಿರುವುದು, ಬರಡು ಭೂಮಿಯಲ್ಲಿ ಸೌರವಿದ್ಯುತ್ ಉತ್ಪಾದನೆಗೆ ಒತ್ತು ನೀಡಿರುವುದು ಒಳ್ಳೆಯ ಯೋಜನೆಗಳಾಗಿವೆ. ಜತೆಗೆ ಕೃಷಿ ಉತ್ಪನ್ನಗಳ ಸಾಗಣೆಗೆ `ಕೃಷಿ ಉಡಾನ್’ ಯೋಜನೆ ಜಾರಿಗೆ ತಂದಿರುವುದು ಸ್ವಾಗತಾರ್ಹ ಎಂದಿದ್ದಾರೆ.