ಹಾಸನ, ಜ.4-ಮುಂದಿನ ಬಜೆಟ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ರೈತರ ಹಿತ ಕಾಯುವ ನಿಟ್ಟಿನಲ್ಲಿ ನೀರಾವರಿ ಯೋಜನೆಗಳು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮಾರಗೊಂಡನಹಳ್ಳಿಯ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ಕೃಷಿ ಉತ್ಪನ್ನಗಳು ಹೆಚ್ಚಾಗಬೇಕು. ಅದಕ್ಕೆ ಬೆಂಬಲ ಬೆಲೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಾರಿಯ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಅಂಶಗಳನ್ನು ಸೇರಿಸುವ ಕುರಿತಂತೆ ಮುಂದಿನ ದಿನಗಳಲ್ಲಿ ಸಭೆಗಳನ್ನು ನಡೆಸಿ ತಜ್ಞರ ಅಭಿಪ್ರಾಯಗಳನ್ನು ಒಗ್ಗೂಡಿಸಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದರು. ದೆಹಲಿಗೆ ಬರುವಂತೆ ಪ್ರಧಾನಿ ಹೇಳಿದ್ದಾರೆ. ಸದ್ಯದಲ್ಲೇ ದೆಹಲಿಗೆ ತೆರಳಿ ನೆರೆ ಪರಿಹಾರ ಮತ್ತು ಮಂತ್ರಿ ಮಂಡಲದ ಬಗ್ಗೆ ಚರ್ಚಿಸಲಾಗುವುದು ಎಂದರು.