ಮೂಲಸೌಕರ್ಯಕ್ಕಾಗಿ 200 ಕೋಟಿಗೆ ಪ್ರಸ್ತಾವನೆ ಸಲ್ಲಿಸಿ
ಮೈಸೂರು

ಮೂಲಸೌಕರ್ಯಕ್ಕಾಗಿ 200 ಕೋಟಿಗೆ ಪ್ರಸ್ತಾವನೆ ಸಲ್ಲಿಸಿ

January 4, 2020

ಮೈಸೂರು, ಜ.3(ಎಸ್‍ಬಿಡಿ)-ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ 200 ಕೋಟಿ ರೂ. ಯೋಜನೆ ರೂಪಿಸಿ, ವಾರದೊಳಗೆ ಸರ್ಕಾ ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ನಗರಪಾಲಿಕೆ ಆಯುಕ್ತ ರಿಗೆ ನಿರ್ದೇಶನ ನೀಡಿದ್ದಾರೆ.

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಯಡಿ ಮಂಜೂರಾಗಿರುವ ಅನುದಾನ ಬಳಕೆ ಸಂಬಂಧ ಶುಕ್ರವಾರ ಜಿಲ್ಲಾ ಪಂಚಾಯ್ತಿಯ ಡಿ. ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಸಭೆ ಯಲ್ಲಿ ಹೀಗೆ ನಿರ್ದೇಶಿಸಿದ ಸೋಮಣ್ಣ, ಕುಡಿ ಯುವ ನೀರು, ಒಳಚರಂಡಿ, ರಸ್ತೆ, ಉದ್ಯಾನ ಹಾಗೂ ಬೀದಿ ದೀಪ ವ್ಯವಸ್ಥೆಗೆ ಆದ್ಯತೆ ನೀಡಿ, ಮೇಯರ್, ಎಲ್ಲಾ ಕ್ಷೇತ್ರದ ಶಾಸಕರು ಹಾಗೂ ಕಾರ್ಪೊ ರೇಟರ್‍ಗಳೊಂದಿಗೆ ಸಮನ್ವಯತೆಯಿಂದ ಚರ್ಚಿಸಿ, ಯೋಜನೆ ರೂಪಿಸಬೇಕೆಂದು ಸೂಚಿಸಿದರು.

ನಗರಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಮಾತ ನಾಡಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಯಡಿ ಮಂಜೂರಾಗಿರುವ 150 ಕೋಟಿ ರೂ. ಗಳಲ್ಲಿ, 50.76 ಕೋಟಿ ರೂ.ಗಳನ್ನು ನರ್ಮ್ ಕುಡಿ ಯುವ ನೀರು ಯೋಜನೆ ಬಾಕಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಕ್ರಿಯಾ ಯೋಜನೆ ರೂಪಿಸಲು 99.24 ಕೋಟಿ ರೂ. ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಕರ್ನಾ ಟಕ ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಅಧಿಕಾರಿ ಪ್ರಸನ್ನಮೂರ್ತಿ, ಅಮೃತ್ ಯೋಜನೆಗೆ ಪಾಲಿಕೆ ವಂತಿಕೆ 26 ಕೋಟಿ ರೂ. ಬಾಕಿ ಇರುವ ಬಗ್ಗೆ ಪ್ರಸ್ತಾಪಿಸಿದರು.

ಈ ಎಲ್ಲಾ ಮಾಹಿತಿ ತಿಳಿದ ಸಚಿವ ವಿ.ಸೋಮಣ್ಣ, ಉಳಿದ 70-80 ಕೋಟಿ ರೂ. ಹಣದಲ್ಲಿ ಕಣ್ಣಿಗೆ ಕಾಣಿಸುವಂತಹ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಸದ್ಯ ರಾಜ್ಯ ಬಜೆಟ್‍ಗೆ ತಯಾರಿ ನಡೆದಿದೆ. ಈ ಅನುದಾನದಲ್ಲಿ ಲಭ್ಯವಿರುವ ಹಣದ ಜೊತೆಗೆ ಒಟ್ಟು 200 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಯನ್ನು ಸರ್ಕಾರಕ್ಕೆ ಸಲ್ಲಿಸಿ. ರೋಡ್ ಹಿಸ್ಟರಿ, ಜಿಪಿಎಸ್ ವ್ಯವಸ್ಥೆ ಜೊತೆಗೆ ಪಾರದರ್ಶಕತೆ ಇದ್ದರೆ ಮಾತ್ರ ಬಜೆಟ್‍ಗೆ ಸೇರ್ಪಡೆ ಮಾಡುವಂತೆ ಮುಖ್ಯಮಂತ್ರಿ ಗಳಲ್ಲಿ ಮನವಿ ಮಾಡುತ್ತೇನೆ ಎಂಬ ಷರತ್ತು ಮುಂದಿಟ್ಟರು.

ಮಾರುಕಟ್ಟೆ-ಆಸ್ಪತ್ರೆ: ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡವನ್ನು ನವೀಕರಣಗೊಳಿಸು ವುದೋ? ಅಥವಾ ಕೆಡವಿ ಹೊಸದಾಗಿ ಕಟ್ಟಡ ನಿರ್ಮಿಸುವುದೋ? ಎಂಬುದರ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡು ಪ್ರಸ್ತಾವನೆ ಸಲ್ಲಿಸಿ. ಜೊತೆಗೆ ಕೆ.ಆರ್. ಆಸ್ಪತ್ರೆಗೆ ಕಾಯಕಲ್ಪ ನೀಡುವ ಬಗ್ಗೆಯೂ ಮುಖ್ಯ ಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದರು. ಮೈಸೂರು ವಿವಿಯಲ್ಲಿ ಸದ್ಯ ಹಣದ ಕೊರತೆಯಿಲ್ಲ. ಹಾಗಾಗಿ ವಿವಿ ವತಿಯಿಂದ 2-3 ಕಾಲೇಜು ಕಟ್ಟಡಗಳ ನವೀ ಕರಣ ಕೈಗೊಳ್ಳಿ ಎಂದು ಸಲಹೆ ನೀಡಿದರು.

ಸಂಸದ-ಶಾಸಕರು ಗರಂ: ಸಂಸದ ಪ್ರತಾಪ್ ಸಿಂಹ ಮಾತನಾಡಿ, ಜಿಪಿಎಸ್ ವ್ಯವಸ್ಥೆಯಾದರೆ ಒಂದೇ ಕಾಮಗಾರಿಗೆ 2 ಬಾರಿ ಬಿಲ್ ತೆಗೆದು ಕೊಳ್ಳುವಂತಹ ಅಕ್ರಮಗಳನ್ನು ತಡೆಯಬಹುದು. ಸಮರ್ಪಕವಾಗಿ ವಾಣಿಜ್ಯ ತೆರಿಗೆ ಸಂಗ್ರಹಿಸುತ್ತಿಲ್ಲ ಎಂದು ಗರಂ ಆದರು. ಈ ವೇಳೆ ಮೇಯರ್ ಪುಷ್ಪ ಲತಾ ಜಗನ್ನಾಥ್ ಅವರು, ನಗರಪಾಲಿಕೆ ಆಯುಕ್ತ ರನ್ನು ದೂರಿದರು. ಇದಕ್ಕೂ ಮುನ್ನ ಶಾಸಕ ಎಲ್. ನಾಗೇಂದ್ರ, ರಸ್ತೆಗಳೆಲ್ಲಾ ಸ್ಮಶಾನವಾಗಿವೆ. ಜನರಿಗೆ ಉತ್ತರಿಸಲು ಆಗುತ್ತಿಲ್ಲ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಹಣವನ್ನು ಹೊಂದಾಣಿಕೆಗೆ ಬಳಸಿಕೊಂಡರೆ ಯಾವ ಕಾಮಗಾರಿ ನಡೆಸಲು ಸಾಧ್ಯ? ಎಂದು ಏರುಧ್ವನಿಯಲ್ಲೇ ಪ್ರಶ್ನಿಸಿದರು. ಆದ್ಯತೆ ಮೇರೆಗೆ ಕಾಮಗಾರಿಗಳ ಪಟ್ಟಿ ಮಾಡಿ, ಪ್ರಸ್ತಾವನೆ ಸಲ್ಲಿಸಿ. ಎಲ್ಲಾ ಕೆಲಸವೂ ಆಗುತ್ತದೆ ಎಂದು ಸಚಿವ ಸೋಮಣ್ಣ ಎಲ್ಲರನ್ನೂ ಸಮಾಧಾನಪಡಿಸಿದರು.

Translate »