ಸಾಲ ಮನ್ನಾ ಸಂಬಂಧ ಭಿನ್ನ ಅಭಿಪ್ರಾಯಗಳು
ಮೈಸೂರು

ಸಾಲ ಮನ್ನಾ ಸಂಬಂಧ ಭಿನ್ನ ಅಭಿಪ್ರಾಯಗಳು

May 31, 2018

ಬೆಂಗಳೂರು:  ರೈತರ ಸಂಪೂರ್ಣ ಕೃಷಿ ಸಾಲ ಮನ್ನಾಕ್ಕೆ ಇಂದು ವಿಧಾನಸೌಧದಲ್ಲಿ ಕರೆದಿದ್ದ ರೈತರ ಸಭೆಯಲ್ಲಿ ವಿಭಿನ್ನ ಅಭಿಪ್ರಾಯ ವ್ಯಕ್ತವಾಯಿತು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, ಸಾಲ ಮನ್ನಾಕ್ಕೆ ನಮ್ಮ ವಿರೋಧವಿಲ್ಲ ಎಂದು ಸಭೆಗೆ ಸ್ಪಷ್ಟ ಪಡಿಸಿದರು. ಕೊಳವೆಬಾವಿ, ಟ್ರ್ಯಾಕ್ಟರ್ ಸೇರಿದಂತೆ ಇತರ ಸಾಲಗಳ ಬಗ್ಗೆ ಇನ್ನೆರಡು ಮೂರು ದಿನಗಳಲ್ಲಿ ಚರ್ಚಿಸಿ 2ನೇ ಫೇಸ್‍ನಲ್ಲಿ ಮನ್ನಾ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.ಸರ್ಕಾರ ರೈತರ ಸಮಸ್ಯೆ ಪರಿಹಾರಕ್ಕೆ ಬದ್ಧವಾಗಿದೆ, ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಒಂದೇ ಹಂತದಲ್ಲಿ ಸಂಪೂರ್ಣವಾಗಿ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಹಂತ ಹಂತವಾಗಿ ಸಾಲ ಮನ್ನಾ ಮಾಡಲಾಗುವುದು, 15 ದಿನಗಳಲ್ಲಿ ಮೊದಲ ಹಂತದ ಸಾಲ ಮನ್ನಾ ಆಗಲಿದೆ ಎಂದರು.

ಬಿಜೆಪಿ ಪ್ರತಿನಿಧಿ ಗೋವಿಂದ ಕಾರಜೋಳ ಮಾತನಾಡಿ, ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮಂಗಳೂರಿಗೆ ತೆರಳಿದ್ದಾರೆ, ಸಭೆಯಲ್ಲಿ ಪಕ್ಷದ ಪರವಾಗಿ ಭಾಗವಹಿಸುವಂತೆ ಸೂಚಿಸಿದ್ದರಿಂದ ಬಂದಿದ್ದು, ರೈತರ ಸಾಲ ಮನ್ನಾ ಮಾಡಿ, ಕೃಷ್ಣಾ ಮೇಲ್ದಂಡೆಯ ಉಳಿದ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದರು.
ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಕೃಷಿ ಸಾಲ ಮನ್ನಾಕ್ಕೆ ಕೇಂದ್ರದ ಮೇಲೆ ಒತ್ತಡ ತರಬೇಕು, ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಮನ್ನಾ ಮಾಡಬೇಕು, ರೈತರ ಸಾಲ ಮನ್ನಾಕ್ಕಾಗಿ ಸಂಸತ್‍ನಲ್ಲಿ ಖಾಸಗಿ ಬಿಲ್ ಮಂಡನೆ ಮಾಡಬೇಕು ಎಂದು ರೈತ ನಾಯಕರು ಆಗ್ರಹಿಸಿದರು.

ಸಾಲ ಮನ್ನಾ ಮಾಡಿ, ರೈತರು ಮುಂದೆ ಸಾಲ ಮಾಡದೆ ಕೃಷಿ ಮಾಡುವ ಯೋಜನೆ ಜಾರಿಗೆ ತರಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು. ಕೇಂದ್ರ ಸರ್ಕಾರವೂ ರೈತರ ಬಗ್ಗೆ ಕಾಳಜಿ ವಹಿಸಿ ಹಣಕಾಸಿನ ನೆರವು ನೀಡಬೇಕು. ಕೇರಳದಲ್ಲಿರುವ ರೈತರ ಋಣ ಮುಕ್ತ ಯೋಜನೆಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು. ಖಾಸಗಿಯಾಗಿ ರೈತರು ಸಾಲ ಮಾಡಿದ್ದಾರೆ. ಅಂತಹ ರೈತರನ್ನು ಗುರುತಿಸಿ ಅವರನ್ನು ಸಾಲಮುಕ್ತಗೊಳಿಸಬೇಕು ಎಂದು ಬೈಯಾರೆಡಿ ್ಡಹೇಳಿದರು.

ಸಾಲ ಮನ್ನಾ ವೋಟಿನ ರಾಜಕೀಯ ಆಗಬಾರದು ಎಂದು ಶಿವಮೊಗ್ಗದ ರೈತ ಮುಖಂಡ ಬಸವರಾಜಪ್ಪ ಸರ್ಕಾರಕ್ಕೆ ಮನವಿ ಮಾಡಿದರು. ರೈತರಿಗೆ ಕೊಡುವುದು ಗೊತ್ತೆ ವಿನಃ ಇಸಿದುಕೊಳ್ಳುವುದು ಅಲ್ಲ, ಸಾಲ ಮನ್ನಾ ಮಾಡುವುದು ಶಾಶ್ವತ ಪರಿಹಾರ ಅಲ್ಲ, ಬೆಂಬಲ ಬೆಲೆ ಸೇರಿದಂತೆ ಸಕಾಲಕ್ಕೆ ರೈತರ ನೆರವಿಗೆ ಸರ್ಕಾರ ಬರಬೇಕು. ಇನ್ನುಳಿದಂತೆ ಮಾರುತಿ ಮಾನ್ಪಡೆ ಸೇರಿದಂತೆ ಇತರ ನಾಯಕರು ರೈತರ ಸಾಲ ಮನ್ನಾ ಬಗ್ಗೆ ಮಾತನಾಡಿದರು.

Translate »