ನದಿ ಮೂಲದಿಂದಲೇ ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸಲು ತೀರ್ಮಾನ
ಮೈಸೂರು

ನದಿ ಮೂಲದಿಂದಲೇ ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸಲು ತೀರ್ಮಾನ

May 31, 2018

ಬೆಂಗಳೂರು: ರಾಜ್ಯದ ಎಲ್ಲಾ ಹಳ್ಳಿಗಳಿಗೆ ನದಿ ಪಾತ್ರದಿಂದ ನೀರು ಹರಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಘೋಷಣೆ ಮಾಡಿದ್ದಾರೆ.

ಕೃಷಿ ಸಾಲ ಮನ್ನಾ ಸಂಬಂಧ ರೈತರ ಅಭಿಪ್ರಾಯ ಸಭೆ ನಂತರ ಮಾತನಾಡಿದ ಅವರು, ಈ ಯೋಜನೆಗೆ 30 ರಿಂದ 40 ಸಾವಿರ ಕೋಟಿ ರೂ. ವೆಚ್ಚ ತಗುಲಲಿದೆ ಎಂದರು.

ಈ ನಿರ್ಧಾರವನ್ನು ಏಕಾಏಕಿ ಪ್ರಕಟಿಸುತ್ತಿರುವುದಕ್ಕೆ ಪಕ್ಕದಲ್ಲೇ ಕುಳಿತಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಕ್ಷಮೆ ಯಾಚಿಸಿ, ಗ್ರಾಮೀಣ ಭಾಗದ ಜನತೆಗೆ ಶುದ್ಧ ಕುಡಿಯುವ ನೀರು ಕಲ್ಪಿಸಲು ಈ ಮಹತ್ವದ ಯೋಜನೆ ರೂಪ ತಳೆದಿದೆ.

ಯೋಜನೆ ಅನುಷ್ಠಾನಕ್ಕೆ ಡಾ. ಪರಮೇಶ್ವರ್ ಹಾಗೂ ಕಾಂಗ್ರೆಸ್ ಮುಖಂಡರ ವಿಶ್ವಾಸ ಪಡೆದು ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು.

ಯೋಜನೆಗೆ ತಗಲುವ ಭಾರೀ ಪ್ರಮಾಣದ ಹಣವನ್ನು ನಮ್ಮಿಂದ ಕ್ರೋಢೀಕರಿಸಲು ಸಾಧ್ಯವಿಲ್ಲ, ಸಾಲದ ರೂಪದಲ್ಲೇ ಪಡೆಯಬೇಕು, ಬಡ್ಡಿರಹಿತ ಯಾರು ಸಾಲ ನೀಡುತ್ತಾರೋ ಅಂತಹವರಿಂದ ಹಣ ಪಡೆದು ಯೋಜನೆ ಅನುಷ್ಠಾನಗೊಳಿಸಲಾಗುವುದು. ನದಿ ಮೇಲ್ಮೈ ನೀರು ಒದಗಿಸುವುದರಿಂದ ರೋಗ ರುಜಿನಗಳ ಸಮಸ್ಯೆ ತಪ್ಪುತ್ತದೆ, ಕೊಳವೆ ಬಾವಿ ಅವಲಂಬಿಸುವ ಅಗತ್ಯವಿರುವುದಿಲ್ಲ, ಇದರಿಂದ ಸಾವಿರಾರು ಕೋಟಿ ರೂ. ದುಂದುವೆಚ್ಚ ತಪ್ಪುತ್ತದೆ.

ಫ್ಲೋರೈಡ್ ಅಂಶವುಳ್ಳ ನೀರು ಪೂರೈಕೆಯೂ ನಿಲ್ಲುತ್ತದೆ. ಇದಕ್ಕಾಗಿ ಎಲ್ಲರ ಸಹಕಾರ ಪಡೆದು ನದಿ ಪಾತ್ರದಿಂದ ಸಮೀಪದ ಹಳ್ಳಿಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಮೇಲ್ಮೈ ನೀರು ಒದಗಿಸುವ ಸಂಬಂಧ ಅನೇಕ ಯೋಜನೆಗಳು ನಮ್ಮಲ್ಲಿವೆ, ಅವನ್ನೂ ಪರಿಗಣನೆಗೆ ತೆಗೆದುಕೊಂಡು ಗ್ರಾಮೀಣ ಭಾಗಕ್ಕೆ ಶುದ್ಧ ಕುಡಿಯುವ ನೀರು ಕೊಡುವುದಾಗಿ ರೈತರಿಗೆ ಭರವಸೆ ನೀಡಿದರು.

Translate »