ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ವಿಫಲ: ಆರೋಪ
ಕೊಡಗು

ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ವಿಫಲ: ಆರೋಪ

September 18, 2018

ಗೋಣಿಕೊಪ್ಪಲು:  ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಅಬಕಾರಿ ಇಲಾಖೆ ಉತ್ಸುಕತೆ ತೋರುತ್ತಿಲ್ಲ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಗಂಭೀರ ಆರೋಪ ಮಾಡಿದರು. ಪೊನ್ನಂಪೇಟೆ ಸಾಮಥ್ರ್ಯಸೌಧದಲ್ಲಿ ಆಯೋಜಿಸಿದ್ದ ವಿರಾಜಪೇಟೆ ತಾಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಬಕಾರಿ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮಾರಾಟದ ಬಗ್ಗೆ ಜನರು ದೂರು ನೀಡಿದರೂ ಕ್ರಮಕ್ಕೆ ಮುಂದಾಗುವುದಿಲ್ಲ. ಇಲಾಖೆಯ ಚಾಲಕರ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ರಿಂದ ಕೇಳಿ ಬಂದಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಅಬಕಾರಿ ಅಧಿಕಾರಿ ಗಳಿಗೆ ತಾಕೀತು ಮಾಡಿದರು. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ರೋಗಿಗಳಿಗೆ ಅಲ್ಲಿನ ಆಡಳಿತಾಧಿಕಾರಿ ಗಣೇಶ್ ಅವರಿಂದ ಉತ್ತಮ ಸೇವೆ ಸಿಗುತ್ತಿಲ್ಲ ಎಂದು ಸ್ಮಿತಾ ಪ್ರಕಾಶ್ ಆರೋಪಿಸಿದರು. ರೋಗಿಗಳಿಗೆ ಕೇಂದ್ರದಲ್ಲಿ ಇರುವ ಔಷಧಿಗಳನ್ನು ನೀಡದೇ ಔಷಧಿ ಮಾರಾಟ ಮಳಿಗೆಗಳಿಗೆ ಚೀಟಿ ಬರೆಯುತ್ತಿರುವುದರಿಂದ ಜನರಿಗೆ ಸರ್ಕಾರದ ಸವಲತ್ತು ಸಿಗದಂತಾಗಿದೆ. ರೋಗಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಅಪಘಾತ ದಲ್ಲಿ ಬರುವ ಗಾಯಾಳುಗಳಿಗೆ ಚಿಕಿತ್ಸೆ ನೀಡದೆ ಹೊರಗಿನ ಆಸ್ಪತ್ರೆಗಳಿಗೆ ಕಳುಹಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ತಾಲೂಕು ವೈದ್ಯಾಧಿಕಾರಿ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಮಳೆಯಿಂದ ಮನೆ ನಷ್ಟವಾಗಿರುವ ಬಗ್ಗೆ ಕಂದಾಯ ಇಲಾಖೆಗೆ ಗ್ರಾಮ ಪಂಚಾಯ್ತಿ ಪಿಡಿಒಗಳಿಂದ ಮಾಹಿತಿ ಪಡೆದುಕೊಂಡು ಸರ್ಕಾರದ ಪರಿಹಾರ ನೀಡಲು ಮುಂದಾಗುವಂತೆ ಸೂಚಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ನೆಲ್ಲೀರ ಚಲನ್‍ಕುಮಾರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜೆನ್ನೀಸ್, ಇಒ ಜಯಣ್ಣ ಉಪಸ್ಥಿತರಿದ್ದರು.

Translate »