ರಾಮಚಂದ್ರ ಸೇರಿ ಐವರಿಗೆ ಸೂಕ್ತ ಸ್ಥಾನಮಾನಕ್ಕೆ ಆಗ್ರಹ
ಚಾಮರಾಜನಗರ

ರಾಮಚಂದ್ರ ಸೇರಿ ಐವರಿಗೆ ಸೂಕ್ತ ಸ್ಥಾನಮಾನಕ್ಕೆ ಆಗ್ರಹ

April 19, 2018

ಚಾಮರಾಜನಗರ:  ಜಿಪಂ ಅಧ್ಯಕ್ಷ ಹಾಗೂ ನಾಯಕ ಜನಾಂಗದ ಮುಖಂಡ ಎಂ.ರಾಮಚಂದ್ರ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿರುವುದರಿಂದ ನಾಯಕ ಜನಾಂಗದ ಐವರಿಗೆ ಬಿಜೆಪಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವಂತೆ ತಾಲೂಕು ನಾಯಕ ಮಹಾಸಭಾ ಒತ್ತಾಯಿಸಿದೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಹಾಸಭಾದ ಅಧ್ಯಕ್ಷ ವಿ.ಶಿವರಾಮು ಮಾತನಾಡಿ, ಒತ್ತಾಯ ಮಾಡಿದರು. ಜಿಪಂ ಅಧ್ಯಕ್ಷರಾಗಿದ್ದ ಎಂ.ರಾಮಚಂದ್ರ ಅವರನ್ನು ವಿಧಾನಸಭಾ ಚುನಾವಣೆಯ ಟಿಕೆಟ್ ನೀಡುವುದಾಗಿ ಬಿಜೆಪಿ ವರಿಷ್ಠರು ಭರವಸೆ ನೀಡಿದ್ದರು. ಹೀಗಾಗಿ ರಾಮಚಂದ್ರ ಅವರು ಕಾಂಗ್ರೆಸ್ ತೊರೆದು ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಟಕೆಟ್ ನೀಡದೆ ಮೋಸ ಮಾಡ ಲಾಗಿದೆ. ಇದರಿಂದ ನಾಯಕ ಸಮಾಜಕ್ಕೆ ಅನ್ಯಾಯವಾಗಿದೆ ಎಂದರು.

ಜಿಲ್ಲೆಯಲ್ಲಿ ಸುಮಾರು 1 ಲಕ್ಷದ 25 ಸಾವಿರ ನಾಯಕ ಸಮುದಾಯದ ಮತದಾರರು ಇದ್ದಾರೆ. ನಮ್ಮ ಸಮುದಾಯವೇ ನಿರ್ಣಾಯಕ ಆಗಿದೆ. ಹೀಗಾಗಿ ಜಿಲ್ಲೆಯ ನಾಯಕ ಸಮಾಜದ 5 ಮಂದಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡುವುದಾಗಿ ತಿಂಗಳ ಅಂತ್ಯದೊಳಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಲೀ ಅಥವಾ ರಾಜ್ಯಾಧ್ಯಕ್ಷರಾಗಲಿ ಘೋಷಿಸಬೇಕು. ಆಗ ಮಾತ್ರ ನಾಯಕ ಸಮಾಜ ಬಿಜೆಪಿಯನ್ನು ಬೆಂಬಲಿಸಲಿದೆ. ಇಲ್ಲದಿದ್ದರೆ, ಪರ್ಯಾಯವಾಗಿ ಚಿಂತಿಸಬೇಕಾ ಗುತ್ತದೆ ಎಂದು ಶಿವರಾಮು ಎಚ್ಚರಿಸಿದರು. ಮಹಾಸಭಾದ ಉಪಾಧ್ಯಕ್ಷ ಮಹದೇಶ್, ನಿರ್ದೇಶಕರಾದ ಮಹೇಂದ್ರ, ಗೋವಿಂದನಾಯಕ, ನಾಗರಾಜು, ಶಂಕರ್, ಆಟೋ ಮಂಜುನಾಥ್ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.

Translate »