ಕುಶಾಲನಗರ ಬಳಿ ಮೀನು ಅಂಗಡಿಗೆ ನುಗ್ಗಿ 1.5 ಲಕ್ಷ ದರೋಡೆ
ಕೊಡಗು

ಕುಶಾಲನಗರ ಬಳಿ ಮೀನು ಅಂಗಡಿಗೆ ನುಗ್ಗಿ 1.5 ಲಕ್ಷ ದರೋಡೆ

October 16, 2018

ಅಂಗಡಿ ಮಾಲೀಕ ಸೇರಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಕುಶಾಲನಗರ:  ಮೀನು ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿ 1.5 ಲಕ್ಷ ರೂ. ದರೋಡೆ ಮಾಡಿದ ಘಟನೆ ಇಂದು ಸಂಜೆ ಇಲ್ಲಿಗೆ ಸಮೀಪದ ಗಂಧದ ಕೋಟೆಯಲ್ಲಿ ನಡೆದಿದೆ.

ಗಂಧದಕೋಟೆಯ ಮೀನು ಅಂಗಡಿ ಮಾಲೀಕ ದೀರಾರ್ ಮತ್ತು ನೌಕರ ರಜಾಕ್ ಮೇಲೆ ದರೋಡೆ ಕೋರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಅವರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಸಂಜೆ 7ಗಂಟೆ ಸುಮಾರಿನಲ್ಲಿ ಮಾದಪಟ್ಟಣದ ಸುಬ್ಬು, ಬೈಲ್‍ಕುಪ್ಪೆಯ ಆನಂದ್ ಸೇರಿದಂತೆ ಐವರ ತಂಡ ರಿಜಿಸ್ಟ್ರೇಷನ್ ಆಗದ ಹೊಸ ಆಟೋದಲ್ಲಿ ಮೀನು ಅಂಗಡಿಗೆ ಬಂದಿದ್ದಾರೆ. ಈ ಅಂಗಡಿಯಲ್ಲಿ ನಾಲ್ವರು ನೌಕರರು ಇದ್ದಾರೆ ಎಂದು ಹೇಳಲಾಗಿದ್ದು, ಮೊದಲಿಗೆ ದರೋಡೆ ಕೋರರು ಮೀನು ಖರೀದಿಸುವ ನೆಪದಲ್ಲಿ ಅಂಗಡಿ ಒಳ ಪ್ರವೇಶ ಮಾಡಿದ್ದಾರೆ. ಸರಿಯಾಗಿ ಮೀನು ಕತ್ತರಿಸುತ್ತಿಲ್ಲ ಎಂದು ತಗಾದೆ ತೆಗೆದ ಡಕಾಯಿತರು ಹಠಾತನೆ ಅಂಗಡಿ ಮಾಲೀಕ ದೀರಾರ್ ಮತ್ತು ನೌಕರ ರಜಾಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಮೀನುಗಳನ್ನು ಚೆಲ್ಲಾಡಿ ಗಲ್ಲಾದಲ್ಲಿದ್ದ 1.5 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ.

ಈ ವೇಳೆ ಅಡ್ಡ ಬಂದ ಸಾರ್ವಜನಿಕರಿಗೆ ಮಾರಕಾಸ್ತ್ರ ಗಳನ್ನು ತೋರಿಸಿ ಬೆದರಿಕೆ ಹಾಕಿ ಆಟೋದಲ್ಲಿ ಪರಾರಿಯಾಗಿ ದ್ದಾರೆ. ಈ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡಕಾಯಿತರ ಪತ್ತೆಗಾಗಿ 2 ವಿಶೇಷ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆಗೆ ಇಳಿದಿದ್ದಾರೆ.

Translate »