ಕೆಆರ್‌ಎಸ್‌ ಅಣೆಕಟ್ಟೆಗೆ 136 ಹೊಸ ಕ್ರೆಸ್ಟ್‍ಗೇಟ್ ಅಳವಡಿಕೆ
ಮೈಸೂರು

ಕೆಆರ್‌ಎಸ್‌ ಅಣೆಕಟ್ಟೆಗೆ 136 ಹೊಸ ಕ್ರೆಸ್ಟ್‍ಗೇಟ್ ಅಳವಡಿಕೆ

April 28, 2019

ಮೈಸೂರು: ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಮುಂದಾಗಿ, ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ ಪ್ರಸಿದ್ಧ ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಳೇ ಕ್ರೆಸ್ಟ್ ಗೇಟ್ (Crest Gates)ಗಳನ್ನು ಬದಲಾಯಿಸಲು ಕಾವೇರಿ ನೀರಾವರಿ ನಿಗಮ (ಅಓಓ) ಮುಂದಾಗಿದೆ.

ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಗ್ರಾಮದ ಬಳಿ ನಿವಾಸಿಗಳನ್ನು ಸ್ಥಳಾಂತರ ಮಾಡಿ ಪುನರ್ವಸತಿ ಕಲ್ಪಿಸಿದ ನಂತರ ಆ ಸ್ಥಳದಲ್ಲಿ ದಕ್ಷಿಣೋತ್ತರವಾಗಿ 2.62 ಕಿ.ಮೀ. ಉದ್ದದ ಕನ್ನಂಬಾಡಿ ಕಟ್ಟೆಯನ್ನು 1911 ರಿಂದ 1931 ರವರೆಗೆ ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನರಾಗಿದ್ದ ಪ್ರಸಿದ್ಧ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ನೇತೃತ್ವ ದಲ್ಲಿ ನಿರ್ಮಿಸಿದ್ದರು. ಕೃಷ್ಣರಾಜಸಾಗರ (ಕೆಆರ್‍ಎಸ್) ಅಣೆಕಟ್ಟೆಗೆ ವಿವಿಧ ಮಟ್ಟದ ಒಟ್ಟು 153 ಕ್ರೆಸ್ಟ್ ಗೇಟ್‍ಗಳನ್ನು ಅಳವಡಿಸಿ ಜಲಾಶಯ ತುಂಬಿದಾಗ ಹಾಗೂ ವರ್ಷ ವಿಡೀ ಗೇಟ್‍ಗಳ ಮೂಲಕ ಕಾವೇರಿ ನದಿ, ವಿವಿಧ ನಾಲೆಗಳಿಗೆ ನೀರು ಬಿಡಲಾಗುತ್ತಿದೆ. 80 ಅಡಿ ನೀರಿನ ಮಟ್ಟದ 16,103 ಅಡಿ ಮಟ್ಟದ 48,106 ಅಡಿ ಮಟ್ಟದ 40 ಹಾಗೂ 114 ಅಡಿ ಮಟ್ಟದ 48 ಕ್ರೆಸ್ಟ್ ಗೇಟ್‍ಗಳನ್ನು ಅಣೆಕಟ್ಟೆ ನಿರ್ಮಿಸಿದಾಗ ಅಳವಡಿಸಲಾಗಿತ್ತು. ಒಟ್ಟು 153 ಗೇಟ್‍ಗಳ ಪೈಕಿ 80 ಅಡಿ ಮಟ್ಟದ 16 ಗೇಟ್‍ಗಳನ್ನು 2003ರಲ್ಲಿ ಮೊದಲ ಬಾರಿಗೆ ಬದಲಿಸಿ ಹೊಸ ಗೇಟ್ ಗಳನ್ನು ಕಾವೇರಿ ನೀರಾವರಿ ನಿಗಮವು ಅಳವಡಿಸಿತ್ತು.

ಇದೀಗ ಉಳಿದ ಎಲ್ಲಾ 136 ಕ್ರೆಸ್ಟ್ ಗೇಟ್‍ಗಳನ್ನೂ ಬದಲಿಸಲು ಮುಂದಾಗಿದ್ದು, ಅದಕ್ಕಾಗಿ ವಿಶ್ವಬ್ಯಾಂಕ್ ನಿಂದ 96 ಕೋಟಿ ರೂ. ಆರ್ಥಿಕ ನೆರವು ಪಡೆಯಲಾ ಗುತ್ತಿದೆ. 153 ಗೇಟ್‍ಗಳನ್ನು ಬದಲಿಸಿ ಹೊಸದಾಗಿ ಅಳ ವಡಿಸುತ್ತಿರುವುದು ಕೆಆರ್‍ಎಸ್ ಅಣೆಕಟ್ಟೆ ಇತಿಹಾಸದಲ್ಲೇ ಇದೇ ಮೊದಲಾಗಿದೆ. ಅಣೆಕಟ್ಟೆ ಪುನರುಜ್ಜೀವನ ಮತ್ತು ಅಭಿವೃದ್ಧಿ ಯೋಜನೆಯಡಿ ವಿಶ್ವಬ್ಯಾಂಕ್ ಗೇಟ್‍ಗಳನ್ನು ಬದಲಿಸಲು 69 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಟೆಂಡರ್ ಪ್ರಕ್ರಿಯೆ: ಹಳೇ ಗೇಟ್‍ಗಳನ್ನು ತೆಗೆದು, ಅದೇ ಗುಣಮಟ್ಟ ಮತ್ತು ಸಾಮಥ್ರ್ಯದ ಹೊಸ 153 ಗೇಟ್‍ಗಳನ್ನು ಹಾಕಲು ಕಾವೇರಿ ನೀರಾವರಿ ನಿಗಮವು ಟೆಂಡರ್ ಪ್ರಕ್ರಿಯೆ ನಡೆಸಿತ್ತು. ಒಂದು ವಿದೇಶಿ ಕನ್ಸ್‍ಸ್ಟ್ರಕ್ಷನ್ ಕಂಪನಿ ಸೇರಿದಂತೆ ಒಟ್ಟು ಮೂರು ಸಂಸ್ಥೆಗಳು ಬಿಡ್‍ನಲ್ಲಿ ಭಾಗವಹಿಸಿವೆ. ಈಗಾಗಲೇ ತಾಂತ್ರಿಕ ಬಿಡ್ ಮುಗಿದಿದ್ದು, ಹಣಕಾಸು ಬಿಡ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಫೈನಾನ್ಸಿಯಲ್ ಬಿಡ್‍ನಲ್ಲಿ ಯಶಸ್ವಿಯಾದ ಅರ್ಹ ಸಂಸ್ಥೆಗೆ ಕಾರ್ಯಾದೇಶ ನೀಡಲಾಗುವುದು. ಮೇ 2ನೇ ವಾರ ಯೋಜನೆಯ ಕಾಮಗಾರಿಗೆ ಚಾಲನೆ ದೊರೆಯಲಿದೆ.

ತಜ್ಞರ ಸಮಿತಿ: ಯೋಜನೆಯ ವಿನ್ಯಾಸ, ಗುಣಮಟ್ಟ ನಿರ್ವಹಣೆ ಹಾಗೂ ಮೇಲ್ವಿಚಾರಣೆ ಗಾಗಿ ಕರ್ನಾಟಕ ಪವರ್ ಕಾರ್ಪೊರೇಷನ್ ನಿವೃತ್ತ ಮುಖ್ಯ ಇಂಜಿನಿಯರ್ ಶಿವಪ್ರಸಾದ್, ನೀರಾವರಿ ಇಲಾಖೆ ಸೂಪರಿಂಟೆಂಡಿಂಗ್ ಇಂಜಿನಿಯರ್ (ನಿವೃತ್ತ) ವಿಜಯಕುಮಾರ್ ನೇತೃತ್ವದಲ್ಲಿ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಸೂಪರಿಂಟೆಂಡಿಂಗ್ ಇಂಜಿನಿಯರ್, ಚೀಫ್ ಇಂಜಿನಿಯರ್ ಹಾಗೂ ಎಕ್ಸಿಕ್ಯೂಟಿವ್ ಇಂಜಿನಿಯರ್‍ಗಳೂ ಸದಸ್ಯರಾಗಿದ್ದಾರೆ.

ಆಯ್ಲಿಂಗ್, ಗ್ರೀಸಿಂಗ್: ಕಾವೇರಿ ನೀರಾವರಿ ನಿಗಮವು ತುಕ್ಕು ಹಿಡಿದಿರುವ ಕೆಆರ್‍ಎಸ್ ಡ್ಯಾಂನ ಎಲ್ಲಾ 153 ಕ್ರೆಸ್ಟ್ ಗೇಟ್‍ಗಳನ್ನು ಸ್ವಚ್ಛಗೊಳಿಸಿ ಆಯ್ಲಿಂಗ್ ಮತ್ತು ಗ್ರೀಸಿಂಗ್ ಕೆಲಸವನ್ನು ಕಳೆದ ಒಂದು ವಾರದಿಂದ ಮಾಡಿಸುತ್ತಿದೆ. ಪ್ರತೀ ದಿನ 25 ರಿಂದ 30 ಮಂದಿ ತಂತ್ರಜ್ಞರು ಹಾಗೂ ಕೌಶಲ್ಯ ಕೆಲಸಗಾರರು ಆಯ್ಲಿಂಗ್ ಮತ್ತು ಗ್ರೀಸ್ ಹಾಕುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. 124.80 ಅಡಿ ಸಾಮಥ್ರ್ಯದ ಅಣೆಕಟ್ಟೆ ನೀರಿನ ಮಟ್ಟ 89ಕ್ಕೆ ಇಳಿದಿರುವುದರಿಂದ ನಿಗಮವು ತುಕ್ಕು ಹಿಡಿದ ಗೇಟ್‍ಗಳನ್ನು ಸ್ವಚ್ಛಗೊಳಿಸಿ ನಿರ್ವಹಣೆ ಮಾಡುವ ಕೆಲಸವನ್ನು ಕೈಗೆತ್ತಿಕೊಂಡಿದೆ. ಗೇಟ್‍ಗಳನ್ನು ಎತ್ತಿ-ಇಳಿಸುವ ಟ್ರ್ಯಾಲಿಗಳು, ಚೇನ್, ಬೇರಿಂಗ್ ಬಾಲ್‍ಗಳಿಗೆ ಆಯಿಲ್ ಹಾಗೂ ಗ್ರೀಸ್ ಅಪ್ಲೈ ಮಾಡುತ್ತಿದ್ದು, ಕಾವೇರಿ ನೀರಾವರಿ ನಿಗಮದ ಪ್ರಭಾರ ಎಕ್ಸಿಕ್ಯೂಟೀವ್ ಇಂಜಿನಿಯರ್ ರಾಮಕೃಷ್ಣ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಿ. ವಾಸುದೇವ, ಅಸಿಸ್ಟೆಂಟ್ ಇಂಜಿನಿಯರ್ ಕಿಶೋರ್ ಹಾಗೂ ಜೂನಿಯರ್ ಇಂಜಿನಿಯರ್ ರಾಧಾ ಅವರು ಕ್ರೆಸ್ಟ್ ಗೇಟ್‍ಗಳ ನಿರ್ವಹಣಾ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

– ಎಸ್.ಟಿ. ರವಿಕುಮಾರ್

Translate »