ಕೊಡಗಹಳ್ಳಿಯಲ್ಲಿ ಭಕ್ತಿಭಾವದ ಶ್ರೀ ಬೀರೇಶ್ವರ ಸ್ವಾಮಿಯ ರಂಗದ ಹಬ್ಬ
ಮಂಡ್ಯ

ಕೊಡಗಹಳ್ಳಿಯಲ್ಲಿ ಭಕ್ತಿಭಾವದ ಶ್ರೀ ಬೀರೇಶ್ವರ ಸ್ವಾಮಿಯ ರಂಗದ ಹಬ್ಬ

April 29, 2019

ಕೆ.ಆರ್.ಪೇಟೆ: ತಾಲೂಕಿನ ಸಂತೇ ಬಾಚಹಳ್ಳಿ ಹೋಬಳಿಯ ಕೊಡಗಹಳ್ಳಿ ಗ್ರಾಮದಲ್ಲಿ ಶ್ರೀ ಬೀರೇಶ್ವರ ಸ್ವಾಮಿಯ ರಂಗದ ಹಬ್ಬವು ಸಡಗರ ಸಂಭ್ರಮದಿಂದ ನಡೆಯಿತು.

ಹಬ್ಬದ ಅಂಗವಾಗಿ ಗಂಗಾಸ್ನಾನ ಮತ್ತು ಪೂಜಾ ಕಾರ್ಯಗಳನ್ನು ಮುಗಿಸಿ ಬೆಳಗಿನ ಜಾವದಲ್ಲಿ ಕೊಡಗಹಳ್ಳಿ ಗ್ರಾಮಕ್ಕೆ ಬೀರಪ್ಪ ದೇವರನ್ನು ಬರಮಾಡಿಕೊಂಡು ದೇವಾಲಯ ಮುಂದೆ ಪ್ರತಿ ಷ್ಠಾಪಿಸಿ ನಂತರ ಸುತ್ತಮುತ್ತಲಿನ ಏಳು ಹಳ್ಳಿಯ ಗ್ರಾಮದ ದೇವತೆಗಳಾದ ಚಿಕ್ಕ ಕ್ಯಾತನಹಳ್ಳಿಯ ಸಿಂಗಮ್ಮದೇವಿ, ಹುಬ್ಬನಹಳ್ಳಿಯ ಸತ್ತಿಗಪ್ಪ, ಆದಿಹಳ್ಳಿಯ ದಿಡ್ಡಮ್ಮ, ದೊಡ್ಡಯ್ಯ, ಚಿಕ್ಕಯ್ಯ ಮತ್ತು ಬೀರಪ್ಪ ದೇವರುಗಳನ್ನು ಗ್ರಾಮಕ್ಕೆ ನಂದಿ ಕುಣಿತ, ವೀರಗಾಸೆ, ವಾದ್ಯ ಗೋಷ್ಠಿಯ ಮೂಲಕ ಕರೆತಂದು, ಭಕ್ತಾದಿಗಳು ಸಾಮೂಹಿಕ ಪೂಜೆ ಸಲ್ಲಿಸಿದರು. ರಂಗ ಕುಣಿತ, ತಂಬಿಟ್ಟಿನ ಆರತಿ, ಬಾಯಿ ಬೀಗ, ಮುಡಿ ಸೇವೆ ಗಳನ್ನು ನೆರವೇರಿಸಿದ ಭಕ್ತಾದಿಗಳು ಮತ್ತು ಗ್ರಾಮಸ್ಥರು, ನಾಡಿಗೆ ಮಳೆ, ಬೆಳೆಯಾಗಿ ಗ್ರಾಮಸ್ಥರಿಗೆ ಮತ್ತು ರಾಸುಗಳಿಗೆ ಯಾವುದೇ ರೀತಿಯ ತೊಂದರೆಗಳು ಬಾರದಿರಲಿ ಎಂದು ಪ್ರಾರ್ಥಿಸಿದರು. ದೇವಸ್ಥಾನದ ಸುತ್ತ ಮುತ್ತೆಲ್ಲಾ ತಳಿರು ತೋರಣಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಈ ಜಾತ್ರಾ ಮಹೋತ್ಸವಕ್ಕೆ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಭಕ್ತಾದಿಗಳು ಬಂದು ಉಘೆ ಉಘೇ ಬೀರಪ್ಪ ಎಂದು ಘೋಷಣೆಗಳನ್ನು ಕೂಗುತ್ತಾ ದೇವರ ಕೃಪೆಗೆ ಪಾತ್ರರಾದರು.

Translate »