ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 15,600 ಅತಿಥಿ ಶಿಕ್ಷಕರ ನೇಮಕ: ಮಹೇಶ್
ಮೈಸೂರು

ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 15,600 ಅತಿಥಿ ಶಿಕ್ಷಕರ ನೇಮಕ: ಮಹೇಶ್

July 11, 2018

ಬೆಂಗಳೂರು: ಪ್ರಾಥ ಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ 15,600 ಹುದ್ದೆಗಳಿಗೆ ಅತಿಥಿ ಶಿಕ್ಷಕ ರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ವಿಧಾನಸಭೆಯಲ್ಲಿ ಇಂದು ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಸುಭಾಷ್ ಗುತ್ತೇದಾರ್ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಪ್ರೌಢಶಾಲೆಗಳಲ್ಲಿ 3100 ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಕೊಳ್ಳಲಾಗುವುದು ಎಂದರು. ಒಟ್ಟಾರೆ ಪ್ರಾಥ ಮಿಕ, ಪ್ರೌಢ ಶಾಲೆಗಳಲ್ಲಿ 25,600 ಶಿಕ್ಷಕರ ಹುದ್ದೆ ಖಾಲಿ ಇದ್ದು ಈಗಾಗಲೇ 10,000 ಮಂದಿ ಪದವೀಧರರನ್ನು ಶಿಕ್ಷಕರಾಗಿ ನೇಮಕ ಮಾಡುವ ಪ್ರಕ್ರಿಯೆ ಅಂತಿಮ ಹಂತಲ್ಲಿದ್ದು, ಆಯ್ಕೆಗೊಂಡವರಿಗೆ ಇನ್ನು 10-15 ದಿನದಲ್ಲಿ ಆದೇಶ ತಲುಪಲಿದೆ. ಇದರಿಂದ ಕೊರತೆಯಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹೊಸದಾಗಿ ಎರಡರಿಂದ ಮೂವರು ಶಿಕ್ಷಕರನ್ನು ನಿಯೋಜಿಸಲಾಗುವುದು ಎಂದರು. ರಾಜ್ಯದಲ್ಲಿ 58 ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಕಡಿಮೆ ಇದ್ದು, ವಿದ್ಯಾರ್ಥಿಗಳ ಅಗತ್ಯವಿರುವ ಕಡೆಗಳಿಗೆ ಅಂತಹ ಕಾಲೇಜು ಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಕಾಂಗ್ರೆಸ್‍ನ ಎಸ್.ಟಿ.ಸೋಮಶೇಖರ್ ಕೇಳಿದ ಪ್ರಶ್ನೆ ಸಂದರ್ಭದಲ್ಲಿ ಸಚಿವರು ಉತ್ತರಿಸಿದರು. ಪದವಿ ಪೂರ್ವ ಕಾಲೇಜುಗಳನ್ನು ಸ್ಥಳಾಂತರ ಮಾಡುವಾಗ ಆಡಳಿತ ಹಾಗೂ ವಿರೋಧ ಪಕ್ಷಗಳ ಕ್ಷೇತ್ರಗಳೆಂಬ ಭೇದ-ಭಾವ ಮಾಡುವುದಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸ್ಥಳಾಂತರ ಮಾಡಲಾಗುವುದು ಎಂದರು.

ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ 21 ಶಾಲೆಗಳ ಶಿಕ್ಷಕರಿಗೆ ಗಿರಿಭತ್ಯೆ ನೀಡಲು ಪರಿಶೀಲಿಸಲಾಗುವುದು ಎಂದು ಆರ್. ನರೇಂದ್ರ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಗಿರಿತಾಣಭತ್ಯೆ ಮಂಜೂರು ಮಾಡಲಾಗಿದೆ. ಆದರೆ, ಬೆಟ್ಟದ ತಪ್ಪಲಿನಲ್ಲಿ ಇರುವ ಶಾಲೆಗಳಲ್ಲಿ ಗಿರಿ ಭತ್ಯೆ ಕೊಡಲು ಅವಕಾಶವಿಲ್ಲ. ಕೊಡಗು, ಮಲೆನಾಡು ಗ್ರಾಮೀಣ ಭಾಗದ ಶಾಲಾ ಶಿಕ್ಷಕರಿಗೂ ಗಿರಿ ಭತ್ಯೆ ನೀಡಬೇಕೆಂಬ ಹಲವು ಸದಸ್ಯರ ಸಲಹೆ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

Translate »