ಪ್ರಸಕ್ತ ಶೈಕ್ಷಣಿಕ ವರ್ಷವೇ ಸಾವಿರ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ
ಮೈಸೂರು

ಪ್ರಸಕ್ತ ಶೈಕ್ಷಣಿಕ ವರ್ಷವೇ ಸಾವಿರ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ

May 22, 2019

ಬೆಂಗಳೂರು: ಸಾಹಿತಿಗಳು, ಕನ್ನಡ ಹೋರಾಟಗಾರರ ವಿರೋಧದ ನಡುವೆ ಸರ್ಕಾರ ರಾಜ್ಯಾದ್ಯಂತ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸಲು ಇಂದಿಲ್ಲಿ ಆದೇಶ ಹೊರಡಿಸಿದೆ.

ಆಂಗ್ಲ ಮಾಧ್ಯಮ ಶಾಲೆಯ ಜೊತೆ ಜೊತೆಯಲ್ಲೇ 100 ಪಬ್ಲಿಕ್ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳ ಪ್ರಾರಂಭಕ್ಕೂ ಅಧಿಸೂಚನೆ ಹೊರಡಿಸಿದೆ. ಆಂಗ್ಲ ಶಾಲೆಗಳ ಮಾದರಿಯಲ್ಲೇ ಮಕ್ಕಳಿಗೆ ಪೂರ್ವ ಪ್ರಾಥಮಿಕ (ನರ್ಸರಿ) ಶಾಲೆಯೂ ಈ ವರ್ಷದಿಂದಲೇ ಆರಂಭ ವಾಗಲಿದೆ. ರಾಜ್ಯದ 176 ವಿಧಾನಸಭಾ ಕ್ಷೇತ್ರಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ತಲೆ ಎತ್ತಲಿವೆ.

ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಮಾಧ್ಯಮ ತರಗತಿಗಳ ಜೊತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗುವುದು. ಇದರಿಂದ ಹೆಚ್ಚು ಮಕ್ಕಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸಬಹುದಾಗಿದೆ. ಒಂದು ಶಾಲೆ ಕಡ್ಡಾಯವಾಗಿ ವಿಧಾನಸಭಾ ಕ್ಷೇತ್ರದ ಕೇಂದ್ರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಒಂದೇ ಆವರಣದಲ್ಲಿ ಒಂದರಿಂದ 10ನೇ ತರಗತಿಗಳು ನಡೆಯುತ್ತಿರುವ ಶಾಲೆಗಳಲ್ಲಿ ಪ್ರಥಮ ಆದ್ಯತೆ ನೀಡಲಾಗಿದೆ. 1ರಿಂದ 10ನೇ ತರಗತಿಗಳು ಒಂದೇ ಆವರಣದಲ್ಲಿ ನಡೆದು ಕೊಠಡಿಗಳು

ಲಭ್ಯವಿಲ್ಲದಿದ್ದರೆ ದಾಖಲಾತಿ ಹೆಚ್ಚಿರುವ 1ರಿಂದ 8 ತರಗತಿ ನಡೆಯುವ 100 ಮೀಟರ್‍ನಿಂದ 500 ಮೀಟರ್ ವ್ಯಾಪ್ತಿಯೊಳಗಿನ ಪ್ರೌಢಶಾಲೆಗಳನ್ನು ಆಯ್ಕೆ ಮಾಡುವಂತೆ ಜಿಲ್ಲಾ ಶಿಕ್ಷಣ ಇಲಾಖೆಗೆ ಸೂಚಿಸಿದೆ.

ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಇಂಗ್ಲೀಷ್ ಹಾಗೂ ಗಣಿತ ವಿಷಯಗಳಿಗೆ ಕೇಂದ್ರ ಪಠ್ಯಪುಸ್ತಕ (ಎನ್‍ಸಿಇಆರ್‍ಟಿ)ಗಳನ್ನು ಹಾಗೂ ಪರಿಸರ ಅಧ್ಯಯನ ಮತ್ತು ಕನ್ನಡ ವಿಷಯಗಳಿಗೆ ಕರ್ನಾಟಕದ ಪಠ್ಯ ಪುಸ್ತಕಗಳನ್ನು ಅನುಸರಿಸಬೇಕು.

ಆಯ್ಕೆಗೊಂಡ ಸಾವಿರ ಶಾಲೆಗಳಲ್ಲಿ ಪ್ರತಿ ಶಾಲೆಗೆ ಒಬ್ಬರು ಶಿಕ್ಷಕರಿಗೆ ಪ್ರಾದೇಶಿಕ ಆಂಗ್ಲ ಭಾಷೆ ತರಬೇತಿ ಸಂಸ್ಥೆ ಮೂಲಕ 15 ದಿನಗಳ ಪ್ರವೇಶ ತರಬೇತಿ ನೀಡಲಿದೆ.

ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವುದರ ಜೊತೆಗೆ ಈ ವರ್ಷ ಸರ್ಕಾರ ರಾಜ್ಯದ ನಾನಾ ಕಡೆ 100 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ತೀರ್ಮಾನಿಸಿದೆ. ಪ್ರತಿ ಮಗುವೂ ಶಾಲೆಯಲ್ಲಿ ಉತ್ತಮ ಕಲಿಕೆಯೊಂದಿಗೆ ಎಂಬ ಘೋಷ ವಾಕ್ಯದೊಂದಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಗುಣಮಟ್ಟದ ಶಿಕ್ಷಣ ನೀಡುವ ಗುರಿಯೊಂದಿಗೆ 100 ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಿದೆ.

Translate »