ದುರಹಂಕಾರಿ ಸಿದ್ದರಾಮಯ್ಯ ಅದಕ್ಷ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಫೂನ್ ಉಸ್ತುವಾರಿ ವೇಣುಗೋಪಾಲ್: ಶಾಸಕ ರೋಷನ್ ಬೇಗ್
ಮೈಸೂರು

ದುರಹಂಕಾರಿ ಸಿದ್ದರಾಮಯ್ಯ ಅದಕ್ಷ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಫೂನ್ ಉಸ್ತುವಾರಿ ವೇಣುಗೋಪಾಲ್: ಶಾಸಕ ರೋಷನ್ ಬೇಗ್

May 22, 2019

ಇವರಿಂದ ಕಾಂಗ್ರೆಸ್ ರಾಜ್ಯದಲ್ಲಿ ಉಳಿದೀತೇ…

ಬೆಂಗಳೂರು: ದುರಹಂಕಾರಿ ಸಿದ್ದರಾಮಯ್ಯ, ಅದಕ್ಷ ಅಧ್ಯಕ್ಷ ದಿನೇಶ್ ಗುಂಡೂ ರಾವ್, ಬಫೂನ್ ಉಸ್ತುವಾರಿ ವೇಣುಗೋಪಾಲ್ ಇಂತಹವರಿಂದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉಳಿದೀತೇ ಎಂದು ಆ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವರೂ ಆದ ಹಾಲಿ ಶಾಸಕ ರೋಷನ್ ಬೇಗ್ ತಮ್ಮ ನಾಯಕರ ವಿರುದ್ಧ ಇಂದಿಲ್ಲಿ ಕೆಂಡಕಾರಿದ್ದಾರೆ. ಬೇಗ್ ಹೇಳಿಕೆ ಹೊರಬೀಳುತ್ತಿದ್ದಂತೆ ಕೆಪಿಸಿಸಿ ಅವರಿಗೆ ನೋಟೀಸ್ ನೀಡಿದೆ.

ಚುನಾವಣೋತ್ತರ ಸಮೀಕ್ಷೆಗಳು ಎನ್‍ಡಿಎ ಗೆಲುವಿನ ಭವಿಷ್ಯ ನುಡಿದ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್‍ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ರೋಷನ್ ಬೇಗ್ ತಮ್ಮ ನಾಯಕರ ವಿರುದ್ಧ ಬಹಿರಂಗ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾ ವಣೋತ್ತರ ಸಮೀಕ್ಷೆ ನೋಡಿದರೆ ನನಗೆ ಬೇಸರ ವಾಗುತ್ತದೆ. ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂ ರಾವ್ ಸೇರಿಕೊಂಡು ಕಾಂಗ್ರೆಸ್ ಪಕ್ಷವನ್ನು ಈ ಗತಿಗೆ ತಂದಿದ್ದಾರೆ ಎಂದರು. ಅವರು ಹೇಳಿಕೆ ನೀಡಿದ ಒಂದು ಗಂಟೆಯಲ್ಲೇ ಪ್ರದೇಶ ಕಾಂಗ್ರೆಸ್ ಬೇಗ್‍ಗೆ ವಿವರಣೆ ಕೋರಿ ಶೋಕಾಸ್ ನೋಟೀಸ್ ಜಾರಿ ಮಾಡಿದೆ. ಒಂದು ಕಡೆ ಲಿಂಗಾಯತರನ್ನು ಒಡೆಯಲು ಯತ್ನಿಸುತ್ತಾ, ಮತ್ತೊಂದು ಕಡೆ ಒಕ್ಕಲಿಗರನ್ನು ಬೈಯ್ಯುತ್ತಾ ತಿರುಗುವ ಕೆಲಸಕ್ಕೆ ಇವರೆಲ್ಲರೂ ಒಂದಲ್ಲ, ಒಂದು ರೀತಿ ಕಚ್ಚಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಮೈತ್ರಿಕೂಟ ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯವೇ ಇಲ್ಲ. ಹೀಗಿರುವಾಗ ಇಂತಹ ನಾಯಕರು ತಮ್ಮ ತಮ್ಮ ಸ್ಥಾನಗಳಲ್ಲಿ ಮುಂದುವರಿ ಯುವ ಅಗತ್ಯವೇ ಇಲ್ಲ ಎಂದಿದ್ದಾರೆ. ನಮ್ಮ ಸಿಎಲ್‍ಪಿ ನಾಯಕ ಸಿದ್ದರಾಮಯ್ಯನವರ ಅಹಂಕಾರ, ದುರಹಂಕಾರದ ನಡವಳಿಕೆ ನಮ್ಮ ಎಲ್ಲಾ ಶಾಸಕರಲ್ಲಿ ಬೇಸರ ಮೂಡಿಸಿದೆ. ಜೆಡಿಎಸ್ ಮನೆ ಬಾಗಿಲಿಗೆ ತೆರಳಿ ಅಧಿಕಾರ ತೆಗೆದುಕೊಳ್ಳಿ ಎಂದವರೇ ಹಿಂಬಾಗಿಲಿ ನಿಂದ ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಇಂತಹವರಿಂದ ಸರ್ಕಾರಕ್ಕೂ ಕೆಟ್ಟ ಹೆಸರು, ಪಕ್ಷಕ್ಕೂ ಉಳಿಗಾಲವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಉಳಿಯಬೇಕೆಂದಿದ್ದರೆ, ಮೊದಲು ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ತಮ್ಮ ತಮ್ಮ ಸ್ಥಾನ ತ್ಯಜಿಸಲಿ ಎಂದು ಆಗ್ರಹಿಸಿದ್ದಾರೆ. ಬೆನ್ನಿಗೆ ಚೂರಿ ಹಾಕಿ, ಅಧಿಕಾರ ಹಿಡಿಯಲು ಕಳೆದ ಒಂದು ವರ್ಷದಿಂದ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಇವರೇ ಶಾಸಕರನ್ನು ಎತ್ತಿಕಟ್ಟಿ, ಮತ್ತೆ ಸುಮ್ಮನಾಗಿಸುವ ನಾಟಕವಾಡುತ್ತಿದ್ದಾರೆ. ಮತ್ತೆ ಮುಖ್ಯಮಂತ್ರಿಯಾಗಲು ತಮ್ಮ ಬೆಂಬಲಿಗ ಶಾಸಕರ ಮೂಲಕ ಹೇಳಿಕೆ ಕೊಡಿಸುತ್ತಿದ್ದಾರೆ. ಅವರು ಮುಖ್ಯ ಮಂತ್ರಿಯಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಕೇವಲ 78 ಶಾಸಕರನ್ನು ಇಟ್ಟುಕೊಂಡು ಮುಖ್ಯಮಂತ್ರಿಯಾಗುತ್ತಾರೋ, ಹೇಗಾಗುತ್ತಾರೆ, ಇದು ಸಾಧ್ಯವೇ ಎಂದು ತಮ್ಮ ಎಲ್ಲಾ ಕೋಪವನ್ನು ಹೊರ ಹಾಕಿದರು.

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಟಿಕೆಟ್ ನೀಡುವ ಪ್ರಕ್ರಿಯೆ ಆರಂಭವಾದಾಗಲೇ ಎಲ್ಲವನ್ನೂ ವರಿಷ್ಠರ ಗಮನಕ್ಕೆ ತಂದಿದ್ದೆ. ಆದರೆ ಅಲ್ಪಸಂಖ್ಯಾತರಿಗೆ ಪಕ್ಷದಲ್ಲಿ ದೊರೆಯಬೇಕಾದ ಅವಕಾಶ ಇವರಿಂದ ದೊರೆಯಲಿಲ್ಲ.

ಈ ಹಿಂದೆ ಅಲ್ಪಸಂಖ್ಯಾತರಿಗೆ ಮೂರು ಟಿಕೆಟ್ ನೀಡುತ್ತಿದ್ದರು.ಇದನ್ನು ಹೇಳಿದರೆ ಅದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರನ್ನು ನಿರ್ಲಕ್ಷ್ಯ ಮಾಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮಗಳಲ್ಲಿ ಎಕ್ಸಿಟ್ ಪೋಲ್ ನೋಡಿದಾಗ ಬೇಸರವಾಯಿತು. ನಮ್ಮದು, ಪ್ಲಾಪ್ ಷೋ ಅಂತ ಬೇಸರ ವ್ಯಕ್ತಪಡಿಸಿದೆ. ಎಕ್ಸಿಟ್ ಪೋಲ್‍ನಲ್ಲಿ ಏನು ವ್ಯತ್ಯಾಸಗಳಾಗುತ್ತವೋ ನೋಡೋಣ. ಆದರೆ ನಮ್ಮ ಪಕ್ಷದ ನಾಯಕರು ತಪ್ಪು ಮಾಡಿರುವುದು ನಿಜ ಎಂದರು.

ಸಿದ್ಧರಾಮಯ್ಯ ಅವರ ದುರಹಂಕಾರದ ವರ್ತನೆಯಿಂದ ಇಂತಹ ಫಲಿತಾಂಶ ಬರುತ್ತಿದೆ. ತಾವು ಮಾಡಿದ್ದನ್ನೆಲ್ಲ ಜನ ನೋಡುವುದಿಲ್ಲ ಎಂದು ಇವರಂದುಕೊಂಡಿ ದ್ದಾರೆ. ಸರ್ಕಾರ ರಚನೆಯ ಸಂದರ್ಭದಲ್ಲಿ ಪಕ್ಷ ಕಟ್ಟಿದ ನನ್ನನ್ನು, ರಾಮಲಿಂಗಾರೆಡ್ಡಿಯ ವರನ್ನು ಕೈ ಬಿಟ್ಟರು. ಅದೇ ರೀತಿ ಇನ್ನೂ ಹಲವು ನಾಯಕರನ್ನು ನಿರ್ಲಕ್ಷ್ಯ ಮಾಡಿದರು.

ಕಳೆದ ಚುನಾವಣೆಯ ಫಲಿತಾಂಶದಿಂದಲೇ ಇವರಿಗೆ ಬುದ್ದಿ ಬರಬೇಕಿತ್ತು. ಇವರು ಧರ್ಮ ಒಡೆಯುವ ಕೆಲಸ ಮಾಡಿದ್ದರಿಂದಲೇ ನಮಗೆ ಎಪ್ಪತ್ತೆಂಟು ಸೀಟುಗಳು ಬಂದವು. ಇದರ ಹೊಣೆಯನ್ನು ಸಿದ್ಧರಾಮಯ್ಯ ಅವರೇ ಹೊರಬೇಕು.

ಹಾಗೆಯೇ ಯಾವಾಗ ನೋಡಿದರೂ ಒಕ್ಕಲಿಗರನ್ನು ಬೈಯ್ಯುತ್ತಾರೆ. ಕುಮಾರಸ್ವಾಮಿ, ದೇವೇಗೌಡರನ್ನು ಬಾಯಿಗೆ ಬಂದಂತೆ ಟೀಕಿಸುತ್ತಾರೆ. ಧರ್ಮ ಒಡೆಯಲು ಹೋಗಿ ಇಪ್ಪತ್ತೈದರಿಂದ ಮೂವತ್ತು ಸ್ಥಾನಗಳು ಕಡಿಮೆಯಾದಾಗಲೇ ಇವರಿಗೆ ಅರ್ಥವಾಗ ಬೇಕಿತ್ತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊಣೆ ವಹಿಸಿಕೊಂಡಿರುವ ಕೆ.ಸಿ.ವೇಣು ಗೋಪಾಲ್ ಒಬ್ಬ ಬಫೂನ್.ಅವನಿಗೆ ಗ್ರೌಂಡ್ ರಿಯಾಲಿಟಿಯೇ ಗೊತ್ತಿಲ್ಲ. ವೇಣು ಗೋಪಾಲ್ ಜಾಗದಲ್ಲಿ ನಾನೇನಾದರೂ ಇದ್ದಿದ್ದರೆ ಧರ್ಮ ಒಡೆಯುವ ಕೆಲಸ ಮಾಡಬೇಡಿ ಎಂದು ಸಿದ್ಧರಾಮಯ್ಯ ಅವರಿಗೆ ಹೇಳುತ್ತಿದ್ದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಎಪ್ಪತ್ತೆಂಟು ಸೀಟು ಗಳಿಸಿದಾಗಲೇ ಕೆ.ಸಿ.ವೇಣುಗೋಪಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ಅಂತಹ ಮನುಷ್ಯ ಇನ್ನೂ ಉಸ್ತುವಾರಿ ಯಾಗಿ ಮುಂದುವರಿದಿರುವುದು ದುರದೃಷ್ಟ ಎಂದರು. ಈಗಲೂ ಮಾನ, ಮರ್ಯಾದೆ ಇದ್ದರೆ ದುರಹಂಕಾರಿ ಸಿದ್ಧರಾಮಯ್ಯ,ಅದಕ್ಷ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತಿರುವ ಕೆ.ಸಿ.ವೇಣುಗೋಪಾಲ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಹೇಳಿದರು. ಚಾಮುಂಡೇಶ್ವರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಡಿ ಎಂದು ನಾನು ಹಿಂದೆಯೇ ಸಿದ್ಧ ರಾಮಯ್ಯ ಅವರಿಗೆ ಹೇಳಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ. ಈಗಲೂ ಅವರದೇ ಮಾತು. ಪರಿಣಾಮ ಕಣ್ಣೆದುರಿಗಿದೆ ಎಂದು ಹೇಳಿದರು.

ಬೇಗ್ ಅಧಿಕಾರದಾಹಿ: ಸಚಿವ ಜಮೀರ್ ಅಹಮದ್ ಖಾನ್ ಅವರು ಸುದ್ದಿಗೋಷ್ಠಿ ನಡೆಸಿ ರೋಷನ್ ಬೇಗ್‍ಗೆ ತಿರುಗೇಟು ನೀಡಿದರು. ಬೇಗ್ ಅಧಿಕಾರದಾಹಿ, ಅವರಿಗೆ ಗೊತ್ತಿದ್ದರೆ ಮೊದಲೇ ಯಾಕೆ ಹೇಳಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಸಚಿವರಾಗಿದ್ದಾರೆ, ಅವರು ಅಧಿಕಾರ ಅನುಭವಿ ಸಿದ್ದಾರೆ. ಅಧಿಕಾರ ಕೊಟ್ಟಾಗ ಕಾಂಗ್ರೆಸ್ ಒಳ್ಳೆಯ ಪಕ್ಷವೇ? ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಷ್ಟು ದಿನ ಕಾಂಗ್ರೆಸ್‍ನಲ್ಲಿ ಅಧಿಕಾರ ಅನುಭವಿಸಿದಾಗ ಎಲ್ಲವೂ ಸರಿಯಾಗಿತ್ತು. ಇವರಿಗೆ ಎಂಪಿ ಟಿಕೆಟ್ ನೀಡಿಲ್ಲ ಎಂದ ಮಾತ್ರಕ್ಕೆ ಕಾಂಗ್ರೆಸ್ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. ಎಕ್ಸಿಟ್ ಪೋಲ್ ನೋಡಿ ಅವರು ಹೇಳಿಕೆ ನೀಡುತ್ತಿದ್ದಾರೆ. ಅವರು ರಾಜಕೀಯವಾಗಿ ಬೇರೆ ತೀರ್ಮಾನ ಮಾಡಿದಂತೆ ಕಾಣುತ್ತದೆ. ಅವರು ಹಿರಿಯ ನಾಯಕರು, ಅವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.

Translate »