‘ಸುವಿಧಾ’ ಆ್ಯಪ್‍ನಲ್ಲಿ ಫಲಿತಾಂಶ ಅಪ್‍ಲೋಡ್
ಮೈಸೂರು

‘ಸುವಿಧಾ’ ಆ್ಯಪ್‍ನಲ್ಲಿ ಫಲಿತಾಂಶ ಅಪ್‍ಲೋಡ್

May 22, 2019

ಮೈಸೂರು: ನಡೆಯಲಿರುವ ಮೈಸೂರು-ಕೊಡಗು ಲೋಕಸಭಾ ಚುನಾವಣೆ ಮತ ಎಣಿಕೆಯ ಆಯಾ ಸುತ್ತಿನ ಫಲಿತಾಂಶದ ಮಾಹಿತಿಯನ್ನು ‘ಸುವಿಧಾ’ ಸಾಫ್ಟ್‍ವೇರ್ ಆ್ಯಪ್‍ನಲ್ಲಿ ಆಗಿಂದಾಗ್ಗೆ ಅಪ್‍ಲೋಡ್ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಯಾದ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ.

ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಸರ್ಕಾರಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಮತ ಎಣಿಕಾ ಕೇಂದ್ರಕ್ಕೆ ಇಂದು ಭೇಟಿ ನೀಡಿ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದ ಅವರು, ಭದ್ರತಾ ವ್ಯವಸ್ಥೆಯನ್ನು ವೀಕ್ಷಿಸಿದರು. ಇದೇ ಮೊದಲ ಬಾರಿ ಭಾರತ ಚುನಾವಣಾ ಆಯೋಗವು ‘ಸುವಿಧಾ’ ಎಂಬ ನೂತನ ಆ್ಯಪ್ ಸಿದ್ಧಪಡಿಸಿ ಮತ ಎಣಿಕಾ ಮಾಹಿತಿ ಹಾಗೂ ಆಯಾ ಸುತ್ತಿನ ಫಲಿತಾಂಶವನ್ನು ಏಕರೂಪದ ಡಿಸ್‍ಪ್ಲೇ ಮೂಲಕ ಪ್ರಕಟಿಸುತ್ತಿದೆ. ಮೈಸೂರಿನ ಮತ ಎಣಿಕಾ ಕೇಂದ್ರದ ಎಲ್ಲಾ ಕೊಠಡಿಗಳಿಗೂ ತಲಾ 3 ಕಂಪ್ಯೂಟರ್ ಸಿಸ್ಟಂಗಳನ್ನು ಪೂರೈಸಿದ್ದು, ಎರಡು ಇಂಟರ್‍ನೆಟ್ ಸಂಪರ್ಕ ಒದಗಿಸಲಾಗಿದೆ. ಒಂದು ಸಂಪರ್ಕ ಕಡಿತವಾದರೆ, ಪರ್ಯಾಯ ವಾಗಿ ಮತ್ತೊಂದು ಸಂಪರ್ಕದ ಲೈನ್ ಬಳಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.

ಮೇ 23 ರಂದು ಬೆಳಿಗ್ಗೆ 8 ಗಂಟೆಗೆ ಚುನಾವಣಾ ವೀಕ್ಷಕ ಸಂದೀಪ್ ಘೋಶ್, ಜಿಲ್ಲಾ ಚುನಾವಣಾಧಿಕಾರಿ ಅಭಿರಾಂ ಜಿ. ಶಂಕರ್, ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಜಿ. ಅನುರಾಧ, ಅಭ್ಯರ್ಥಿ ಗಳು ಅಥವಾ ಅವರ ಅಧಿಕೃತ ಮತ ಎಣಿಕಾ ಕೇಂದ್ರದ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂಗಳ ಸೀಲ್‍ಗಳನ್ನು ತೆರೆದು ಇವಿಎಂ, ವಿವಿ ಪ್ಯಾಟ್‍ಗಳನ್ನು ಮತ ಎಣಿಕಾ ಕೊಠಡಿಗಳಿಗೆ ತಂದು ಮತ ಎಣಿಕಾ ಪ್ರಕ್ರಿಯೆ ಆರಂಭಿಸಲಾಗುವುದು. ಮೊದಲು ಅಂಚೆ ಮತಗಳ ಎಣಿಕೆ ಆರಂಭಿಸಿ 30 ನಿಮಿಷಗಳಲ್ಲಿ ಮುಗಿಸಿದ ನಂತರ ಇವಿಎಂ ಮತಗಳ ಎಣಿಕೆ ಮಾಡಲಾಗುವುದು. ಪ್ರತೀ ಸುತ್ತಿನ ಮತ ಎಣಿಕೆ ಮುಗಿಯುತ್ತಿದ್ದಂತೆಯೇ ಸಾಫ್ಟ್‍ವೇರ್ ಮೂಲಕ ಮಾಹಿತಿಯನ್ನು ಆಗಿಂದಾಗ್ಗೆ ಪ್ರಕಟಿಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಸುಮಾರು 200 ಮೀಟರ್ ವ್ಯಾಪ್ತಿ ವರೆಗೆ ರಸ್ತೆಗಳಲ್ಲಿ ಧ್ವನಿವರ್ಧಕ ಅಳವಡಿಸಿ ಫಲಿತಾಂಶದ ಮಾಹಿತಿ ಬಿತ್ತರಿಸಲು ವ್ಯವಸ್ಥೆ ಮಾಡಲಾಗಿದೆ. ಇವಿಎಂಗಳ ಮತ ಎಣಿಕೆ ಪೂರ್ಣಗೊಳ್ಳುತ್ತಿದ್ದಂತೆಯೇ ವಿವಿ ಪ್ಯಾಟ್‍ಗಳಲ್ಲಿ ದಾಖಲಾಗಿರುವ ಮತಗಳನ್ನೂ ಎಣಿಕೆ ಮಾಡಿ ಎರಡನ್ನೂ ತಾಳೆ ಮಾಡಲಾಗುವುದು. ಮತ ಎಣಿಕೆಯ ಪ್ರತೀ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ರೆಕಾರ್ಡಿಂಗ್ ಮಾಡಲಾಗುವುದು.

ಮತ ಎಣಿಕಾ ಕೊಠಡಿಗೆ ಮೊಬೈಲ್ ಫೋನ್‍ಗಳನ್ನು ಕೊಂಡೊಯ್ಯುವಂತಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತಮ್ಮ ಫೋನುಗಳನ್ನು ಇರಿಸಲು ಕೇಂದ್ರದ ಕ್ಲಾಕ್ ರೂಂನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಡೀ ಮತ ಎಣಿಕಾ ಕೇಂದ್ರದ ಒಳ ಹಾಗೂ ಹೊರ ಆವರಣದಲ್ಲಿ ಸುಮಾರು 75 ಸಿಸಿ ಕ್ಯಾಮರಾಗಳ್ನು ಅಳವಡಿಸಲಾಗಿದ್ದು, ಒಂದು ಕೊಠಡಿಯಲ್ಲಿ ಆ ದೃಶ್ಯಾವಳಿಗಳನ್ನು ಡಿಸ್‍ಪ್ಲೇ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಕೇಂದ್ರದ ಸುತ್ತ ಅಂದು ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮತ ಎಣಿಕೆಗೆ ಕೇಂದ್ರದ ಬಳಿ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸುವರು. ಮಾಧ್ಯಮ ಪ್ರತಿನಿಧಿಗಳಿಗಾಗಿ ಕೇಂದ್ರದಲ್ಲಿ ಇಂಟರ್‍ನೆಟ್ ಸಂಪರ್ಕದೊಂದಿಗೆ ಪ್ರತ್ಯೇಕ ಕೊಠಡಿ ಸಿದ್ಧಪಡಿಸಿ, ಫಲಿತಾಂಶದ ವಿವರಗಳನ್ನು ದೊಡ್ಡ ಪರದೆ ಮೇಲೆ ಬಿತ್ತರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದರು.

Translate »