ಎಣಿಕೆಗೂ ಮುನ್ನ ವಿವಿ ಪ್ಯಾಟ್ ಪರಿಶೀಲನೆಗೆ 22 ಪ್ರತಿಪಕ್ಷಗಳಿಂದ ಆಯೋಗಕ್ಕೆ ಮನವಿ
ಮೈಸೂರು

ಎಣಿಕೆಗೂ ಮುನ್ನ ವಿವಿ ಪ್ಯಾಟ್ ಪರಿಶೀಲನೆಗೆ 22 ಪ್ರತಿಪಕ್ಷಗಳಿಂದ ಆಯೋಗಕ್ಕೆ ಮನವಿ

May 22, 2019

ನವದೆಹಲಿ: ಬಿಜೆಪಿ ನೇತೃತ್ವದ ಎನ್‍ಡಿಎಗೆ ಸ್ಪಷ್ಟ ಬಹುಮತ ದೊರೆ ಯುತ್ತದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ ನಂತರ ಇವಿಎಂ ಬಗೆಗಿನ ಪ್ರತಿಪಕ್ಷಗಳ ಸಂಶಯ ಮತ್ತಷ್ಟು ಹೆಚ್ಚಾಗಿದ್ದು, ಮಂಗಳವಾರ ಮತ್ತೆ ಚುನಾ ವಣಾ ಆಯೋಗದ ಕದ ತಟ್ಟಿವೆ.

ಇಂದು ದೆಹಲಿಯಲ್ಲಿ ಸಭೆ ಸೇರಿದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ವಾದಿ ಪಕ್ಷ, ಆಮ್ ಆದ್ಮಿ, ಸಿಪಿಐ-ಸಿಪಿಐ(ಎಂ), ಡಿಎಂಕೆ, ಎನ್‍ಸಿಪಿ ಸೇರಿ ದಂತೆ 22 ಪ್ರತಿಪಕ್ಷಗಳ ನಾಯಕರು, ಶೇ.50ರಷ್ಟು ವಿವಿ ಪ್ಯಾಟ್‍ಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ. ಸಭೆ ಬಳಿಕ ಚುನಾವಣಾ ಆಯೋಗದ ಬಳಿ ತೆರಳಿದ ಪ್ರತಿಪಕ್ಷಗಳ ನಾಯಕರು, ಮತ ಎಣಿಕೆಗೂ ಮುನ್ನ ವಿವಿಪ್ಯಾಟ್‍ಗಳ ಪರಿಶೀಲನೆ ನಡೆಸಬೇಕು ಎಂದು ಮನವಿ ಸಲ್ಲಿಸಿವೆ. ವಿವಿ ಪ್ಯಾಟ್ ಪರಿಶೀಲನೆ ವೇಳೆ ಲೋಪದೋಷಗಳು ಕಂಡುಬಂದಲ್ಲಿ, ಪ್ರತಿ ವಿಧಾನಸಭೆ ಕ್ಷೇತ್ರದ ಎಲ್ಲ ಮತ ಗಟ್ಟೆಗಳ ಶೇ.100 ರಷ್ಟು ವಿವಿಪ್ಯಾಟ್ ಗಳನ್ನು ಪರಿಶೀಲಿಸಿ ನಂತರ ಅವು ಗಳನ್ನು ವಿದ್ಯುನ್ಮಾನ ಮತ ಯಂತ್ರದ ಜತೆ ತುಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, ಮತ ಎಣಿಕೆಗೂ ಮುನ್ನ ವಿವಿಪ್ಯಾಟ್ ಪರಿಶೀಲಿಸ ಬೇಕು ಎಂದು ನಾವು ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು. ವಿವಿ ಪ್ಯಾಟ್ ಗಳನ್ನು ಮೊದಲು ಪರಿಶೀಲಿಸಬೇಕು ಎಂದು ನಾವು ಹಲವು ತಿಂಗಳಿಂದ ಒತ್ತಾಯಿಸುತ್ತಿದ್ದೇವೆ. ಈ ಕುರಿತು ನಾಳೆ ಸಭೆ ನಡೆಸುವುದಾಗಿ ಆಯೋಗದ ಅಧಿಕಾರಿಗಳು ತಿಳಿಸಿರುವುದಾಗಿ ಮತ್ತೊಬ್ಬ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಅವರು ಹೇಳಿದ್ದಾರೆ. ಜನಾದೇಶವನ್ನು ಗೌರವಿಸುವಂತೆ ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ. ಯಾವುದೇ ಕಾರಣಕ್ಕೂ ಜನಾದೇಶವನ್ನು ತಿರುಚಬಾರದು ಎಂದು ಟಿಡಿಪಿ ಮುಖ್ಯಸ್ಥ ಚಂದ್ರ ಬಾಬು ನಾಯ್ಡು ಅವರು ಹೇಳಿದ್ದಾರೆ.

Translate »