ಮೈಸೂರು-ಬೆಂಗಳೂರು ವಿಶ್ವದರ್ಜೆ ರಸ್ತೆ 2020ಕ್ಕೆ ಸಂಚಾರಕ್ಕೆ ರೆಡಿ
ಮೈಸೂರು

ಮೈಸೂರು-ಬೆಂಗಳೂರು ವಿಶ್ವದರ್ಜೆ ರಸ್ತೆ 2020ಕ್ಕೆ ಸಂಚಾರಕ್ಕೆ ರೆಡಿ

July 11, 2018

ಬೆಂಗಳೂರು: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ವಿಶ್ವದರ್ಜೆ ರಸ್ತೆಯಾಗಿ ಪರಿವರ್ತನೆಗೊಳಿ ಸುವ ಕಾಮಗಾರಿ ಸದ್ಯದಲ್ಲೇ ಆರಂಭಗೊಳ್ಳಲಿದೆ.

ಮೈಸೂರು-ಬೆಂಗಳೂರು ಎರಡೂ ಬದಿಯಿಂದ ಏಕಕಾಲಕ್ಕೆ ಕೆಲಸ ಪ್ರಾರಂಭ ಗೊಳ್ಳಲಿದ್ದು, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. 2020ರ ಆರಂಭಕ್ಕೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ರಾಜ್ಯ ಲೋಕೋಪಯಾಗಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಸಂದೇಶ್ ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಯೋಜನೆಗೆ ಒಟ್ಟಾರೆ 6000 ಕೋಟಿ ರೂ. ವೆಚ್ಚ ತಗುಲಲಿದ್ದು, ಇದರಲ್ಲಿ ರಸ್ತೆ ಕಾಮಗಾರಿಗೆ 4153 ಕೋಟಿ ಹಾಗೂ ಉಳಿದ ಹಣವನ್ನು ಭೂಸ್ವಾಧೀನ ಪರಿಹಾರಕ್ಕೆ ಮೀಸಲಿಡಲಾಗಿದೆ. ಹಾಲಿ ನಾಲ್ಕು ಪಥದ ಹೆದ್ದಾರಿ, ಕಾಮಗಾರಿ ನಂತರ 10 ಪಥದ ರಸ್ತೆಯಾಗಿ ಮಾರ್ಪಾಡಾಗಲಿದ್ದು, ಇದರಲ್ಲಿ ಆರು ಪಥದ ರಸ್ತೆ ಹೆದ್ದಾರಿಯಾಗಿ, ಅದರ ಇಕ್ಕೆಲಗಳಲ್ಲಿ ತಲಾ ಎರಡು ಪಥ ಸರ್ವೀಸ್ ರಸ್ತೆಯಾಗಿ ನಿರ್ಮಾಣಗೊಳ್ಳಲಿದೆ.

ಬೆಂಗಳೂರಿನಿಂದ ಮಂಡ್ಯ ಜಿಲ್ಲೆ ನಿಡಘಟ್ಟ ನಡುವಿನ 56 ಕಿಲೋ ಮೀಟರ್ ರಸ್ತೆ ಕಾಮಗಾರಿಗೆ 1984 ಕೋಟಿ ರೂ., ನಿಡಘಟ್ಟ-ಮೈಸೂರು ನಡುವಿನ 61 ಕಿಲೋ ಮೀಟರ್ ಉದ್ದದ ರಸ್ತೆ ಕಾಮಗಾರಿಗೆ 2169.29 ಕೋಟಿ ರೂ. ವೆಚ್ಚ ತಗುಲಲಿದೆ.

ಕಾಮಗಾರಿ ವಿಂಗಡಿಸಿ ಇಬ್ಬರು ಗುತ್ತಿಗೆ ದಾರರಿಗೆ ಹಂಚಿಕೆ ಮಾಡಿದ್ದು, ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲಿದ್ದಾರೆ. ಕಾಮಗಾರಿ ಸಂದರ್ಭದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಮತ್ತು ಅಲ್ಲಲ್ಲಿ ಪರ್ಯಾಯ ರಸ್ತೆ ನಿರ್ಮಿಸಿಕೊಡುವ ಜವಾಬ್ದಾರಿಯೂ ಗುತ್ತಿಗೆದಾರರದ್ದಾಗಿದೆ. ರಸ್ತೆ ನಿರ್ಮಾಣ ನಂತರ ಅರಮನೆ ನಗರ ಮತ್ತು ಮಾಹಿತಿ ತಂತ್ರಜ್ಞಾನ ನಗರದ ನಡುವೆ ಪ್ರಯಾಣ ಸಮಯ 90 ನಿಮಿಷ ಆಗಲಿದೆ.

ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಇಂಧನ, ಅರಣ್ಯ, ನಗರಾಭಿವೃದ್ಧಿ ಹಾಗೂ ಕಂದಾಯ ಇಲಾಖೆಯಲ್ಲಿನ ಗೊಂದಲ ನಿವಾರಣೆ ಗೊಂಡಿದ್ದು 117 ಕಿ.ಲೋ. ಮೀಟರ್ ಉದ್ದದ ರಸ್ತೆ 2020ರ ಆರಂಭದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಕಳೆದ ವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ನಿರ್ಮಾಣಕ್ಕೆ ಇದ್ದ ಅಡ್ಡಿಯನ್ನು ಪರಿಹರಿಸಿದ್ದಾರೆ. ಇದರಿಂದ ಭೂಸ್ವಾಧೀನಕ್ಕೆ ಇದ್ದ ಬಹುತೇಕ ಅಡ್ಡಿ ಆತಂಕ ನಿವಾರಣೆಯಾಗಿದ್ದು, ಈಗಾಗಲೇ ಶೇಕಡ 64ರಷ್ಟು ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. ಬಿಡದಿಯ ಬಳಿ 7 ಕಿಮೀ ಬೈಪಾಸ್, ರಾಮನಗರ-ಚನ್ನಪಟ್ಟಣ ಸೇರಿದಂತೆ 22 ಕಿಮೀ ಉದ್ದದ ಬೈಪಾಸ್, ಮದ್ದೂರು ಬಳಿ 4.45 ಕಿಮೀ ಉದ್ದದ ಬೈಪಾಸ್, ಮಂಡ್ಯ ಬಳಿ 10.04ಕಿಮೀ ಉದ್ದದ ಬೈಪಾಸ್, ಶ್ರೀರಂಗಪಟ್ಟಣ ಬಳಿ 8.19 ಕಿಮೀ ಉದ್ದದ ಬೈಪಾಸ್ ರಸ್ತೆಗಳನ್ನು ನಿರ್ಮಿಸಲಾಗುವುದು, ಇದಲ್ಲದೆ, ಎರಡೂ ಪ್ಯಾಕೇಜ್‍ನಲ್ಲಿ ಒಟ್ಟು 9 ಬೃಹತ್ ಸೇತುವೆಗಳು, 44 ಕಿರು ಸೇತುವೆಗಳು, 4 ರಸ್ತೆ ಮೇಲು ಸೇತುವೆಗಳು, 25 ಸಂಖ್ಯೆಯ ಸುರಂಗ ಮಾರ್ಗಗಳು (ಗ್ರೇಡ್ ಸೆಪರೇಟರ್) ಆರು ಪಾದಚಾರಿ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದರು. ಪ್ರಯಾಣಿಕರು ವಿಶ್ರಮಿಸಲು ಹಾಗೂ ಆಹಾರ ಸೇವನೆಗೆ ಎರಡೂ ಭಾಗದ ನಾಲ್ಕು ಕಡೆಗಳಲ್ಲಿ 4 ಫುಡ್ ಕೋರ್ಟ್ ಗಳು ಪ್ರತ್ಯೇಕವಾಗಿ ನಿರ್ಮಾಣಗೊಳ್ಳಲಿವೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಈ ರಸ್ತೆಯನ್ನು ವಿಶ್ವ ದರ್ಜೆಗೆ ಪರಿವರ್ತಿಸಿ ಲೋಕಾರ್ಪಣೆ ಮಾಡಲು ಚಿಂತನೆ ನಡೆಸಿದ್ದರು. ರಾಜ್ಯ ಸರ್ಕಾರದ ಚಿಂತನೆಗೆ ಕೇಂದ್ರ ಪೂರ್ಣ ಸಹಕಾರ ನೀಡಿದ್ದರೂ ಕಾಣದ ಕೈಗಳ ಒತ್ತಡ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿಗೆ ಚಾಲನೆ ದೊರೆಯಲಿಲ್ಲ.

ಅಂದಿನ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ರಾಜ್ಯ ವಿಧಾನಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆ, ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಕರೆಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು.

ಗುದ್ದಲಿ ಪೂಜೆ ನೆರವೇರಿಸುವ ಹಂತದಲ್ಲಿ ಶೇಕಡ 40 ರಷ್ಟು ಭೂಸ್ವಾಧೀನ ಆಗಿರಲಿಲ್ಲ ಮತ್ತು ನಿರ್ಮಾಣಕ್ಕೆ ಎದುರಾಗಿದ್ದ ಅಡೆತಡೆ ನಿವಾರಣೆಯಾಗಿರಲಿಲ್ಲ.

Translate »