ಮೈಸೂರು ರಾಜೀವ್‍ನಗರದಲ್ಲಿ ಅತಿಕ್ರಮಣವಾಗಿದ್ದ   17 ಕೋಟಿ ಮೌಲ್ಯದ ಸರ್ಕಾರಿ ಭೂಮಿ ತೆರವು
ಮೈಸೂರು

ಮೈಸೂರು ರಾಜೀವ್‍ನಗರದಲ್ಲಿ ಅತಿಕ್ರಮಣವಾಗಿದ್ದ 17 ಕೋಟಿ ಮೌಲ್ಯದ ಸರ್ಕಾರಿ ಭೂಮಿ ತೆರವು

January 3, 2019

ಮೈಸೂರು: ಸರ್ಕಾರಿ ಆಸ್ತಿ ಕಬಳಿಸಿರುವವರ ವಿರುದ್ಧ ಸಮರ ಸಾರಿರುವ ಮೈಸೂರು ಜಿಲ್ಲಾಡಳಿತ, ಬುಧವಾರ ಬೆಳಿಗ್ಗೆ ಮೈಸೂರಿನ ರಾಜೀವ್‍ನಗರದಲ್ಲಿನ ಕ್ಯಾತಮಾರನಹಳ್ಳಿ ಸರ್ವೆ ನಂ 84ರ 17 ಕೋಟಿ ರೂ. ಮೌಲ್ಯದ 1.30 ಎಕರೆ ಸರ್ಕಾರಿ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದೆ.

ಈ ಭೂಮಿಯನ್ನು ನಾಲ್ಕೈದು ಮಂದಿ ಕಬಳಿಸಲು, ಕಾಂಪೌಂಡ್ ಹಾಗೂ ಮಳಿಗೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ಕಳೆದ ನಾಲ್ಕು ದಿನದ ಹಿಂದೆ ಕಂದಾಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರಲ್ಲದೆ, ಮಳಿಗೆ ಹಾಗೂ ಕಾಂಪೌಂಡ್ ಕಾಮಗಾರಿ ಮುಂದುವರಿಸದಂತೆ ಎಚ್ಚರಿಸಿದ್ದರು. ಆದರೂ ಅಧಿಕಾರಿಗಳ ಸೂಚನೆ ಧಿಕ್ಕರಿಸಿ ಕಾಮಗಾರಿ ಮುಂದುವರೆಸಿದ್ದರಿಂದ ತಹಶೀಲ್ದಾರ್ ಟಿ.ರಮೇಶ್ ಬಾಬು, ಬುಧವಾರ ಬಿಗಿ ಪೊಲೀಸ್ ಭದ್ರತೆಯಲ್ಲಿ ಈ ಸರ್ಕಾರಿ ಆಸ್ತಿಯಲ್ಲಿ ನಿರ್ಮಿಸಲಾಗಿದ್ದ ಕಾಂಪೌಂಡ್ ಹಾಗೂ ಮಳಿಗೆಗಳನ್ನು ನೆಲಸಮಗೊಳಿಸಿದರು. ಮಹದೇವಪುರ ಮುಖ್ಯ ರಸ್ತೆಯಲ್ಲಿ ರಾಜೀವ್‍ನಗರದ ನಿಮ್ರಾ ಮಸೀದಿ ರಸ್ತೆಗೆ ಹೊಂದಿಕೊಂಡಂತೆ 35 ಗುಂಟೆ ಭೂಮಿಯಲ್ಲಿ, ಅಬ್ದುಲ್ ರಹೀಂ ಮತ್ತು ಅಬ್ದುಲ್ ವಹೀಂ ಎಂಬುವರು
ಕಾಂಪೌಂಡ್ ನಿರ್ಮಿಸಿ, ಐದಾರು ಮಳಿಗೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. 100×20 ಅಳತೆ ನಿವೇಶನದಲ್ಲಿ ಮತ್ತೊಂದೆಡೆ ಹುಲಿಯಮ್ಮ ದೇವಾಲಯದ ಟ್ರಸ್ಟ್ ವತಿಯಿಂದ 8 ಮಳಿಗೆ ನಿರ್ಮಿಸಿದ್ದು, ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿತ್ತು. ಇಲ್ಲಿಯೇ ಮೂಲೆ ನಿವೇಶನದಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಸಹ ಹಾಕಿದ್ದರು. ಉಳಿದ ಜಾಗದಲ್ಲಿ ಗ್ಯಾರೇಜ್ ಹಾಗೂ ಹಳೆಯ ಪೀಠೋಪಕರಣ ಮಾರಾಟ ಮಾಡಲು ವ್ಯಕ್ತಿಯೊಬ್ಬರು ಶೆಡ್ ನಿರ್ಮಿಸಿಕೊಂಡಿದ್ದರು. ಇಂದು ಬೆಳಿಗ್ಗೆ ನಡೆದ ತೆರವು ಕಾರ್ಯಾಚರಣೆಯಲ್ಲಿ ಎಲ್ಲವನ್ನೂ ನೆಲಸಮ ಮಾಡಲಾಯಿತು.

ಕ್ಷಿಪ್ರ ಕಾರ್ಯಾಚರಣೆ: ಬಹು ಕೋಟಿ ರೂ. ಬೆಲೆಬಾಳುವ ಈ ಆಸ್ತಿ ಸಂರಕ್ಷಣೆಗೆ ನಿರ್ಧರಿಸಿದ್ದ ಜಿಲ್ಲಾಡಳಿತ ಇಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಬೆಳಿಗ್ಗೆ 9 ಗಂಟೆಗೆ ಮೂರು ಜೆಸಿಬಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಟಿ.ರಮೇಶ್ ಬಾಬು, ಅಕ್ರಮವಾಗಿ ನಿರ್ಮಿಸಿದ್ದ ಮಳಿಗೆ ಹಾಗೂ ಕಾಂಪೌಂಡ್ ನೆಲಸಮಕ್ಕೆ ಆದೇಶಿಸಿದರು. ಮಧ್ಯಾಹ್ನ 2 ಗಂಟೆವರೆಗೂ ತೆರವು ಕಾರ್ಯಾಚರಣೆ ನಡೆಯಿತು.

ಬಿಗಿ ಭದ್ರತೆ: ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಗೆ ಭಾರೀ ಬಿಗಿಭದ್ರತೆ ಕಲ್ಪಿಸಲಾಗಿತ್ತು. ಐವರು ಇನ್ಸ್‍ಪೆಕ್ಟರ್, 8 ಸಬ್‍ಇನ್ಸ್‍ಪೆಕ್ಟರ್, 20 ಎಎಸ್‍ಐ, 120 ಪೇದೆ, 25 ಮಹಿಳಾ ಪೇದೆ, 30 ಸದಸ್ಯರ ಒಂದು ಕೆಎಸ್‍ಆರ್‍ಪಿ ತುಕಡಿ, 3 ನಗರ ಸಶಸ್ತ್ರ ತುಕಡಿ, 10 ಅಶ್ವರೋಹಿ ಸಿಬ್ಬಂದಿ, ಮೊಬೈಲ್ ಕಮಾಂಡೋ ಪಡೆ, ಸಿಸಿ ಕ್ಯಾಮರಾವುಳ್ಳ ಮೊಬೈಲ್ ಕಮಾಂಡೊ ವಾಹನ, 20ಕ್ಕೂ ಹೆಚ್ಚು ಗುಪ್ತದಳ ಸಿಬ್ಬಂದಿ, ಕಾರ್ಯಾಚರಣೆಗೆ ಅಡ್ಡಿ ಮಾಡುವವರನ್ನು ವಶಕ್ಕೆ ಪಡೆಯಲು 25 ಸದಸ್ಯರುಳ್ಳ ವಿಶೇಷ ತಂಡ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತ್ತು. ತೆರವು ಕಾರ್ಯಾಚರಣೆ ಸ್ಥಳಕ್ಕೆ ಬೇರ್ಯಾರೂ ಆಗಮಿಸದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಯಾರೊಬ್ಬರೂ ಸ್ಥಳದಲ್ಲಿ ನಿಲ್ಲದಂತೆ ನೋಡಿಕೊಂಡ ಪೊಲೀಸರು, ಯಾವುದೇ ಅಡಚಣೆ ಎದುರಾಗದಂತೆ ನಿಗಾ ವಹಿಸಿ ಕಾರ್ಯಾಚರಣೆ ಯಶಸ್ಸಿಗೆ ಸಹಕರಿಸಿದರು.

ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಅಬ್ದುಲ್ ರಹೀಂ ಮತ್ತು ವಹೀಂ, ತಹಶೀಲ್ದಾರ್ ಟಿ.ರಮೇಶ್‍ಬಾಬು ಅವರನ್ನು ಭೇಟಿ ಮಾಡಿ, ಭೂಮಿ ನಮಗೆ ಸೇರಬೇಕು. ಈ ಸಂಬಂಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದಾಗಿ ತಿಳಿಸಿದರು. ಆದರೆ ಇದಕ್ಕೆ ಒಪ್ಪದ ತಹಶೀಲ್ದಾರ್ ಇದು ಸರ್ಕಾರಿ ಭೂಮಿ, ನಾವು ಕಾರ್ಯಾಚರಣೆ ನಡೆಸುತ್ತಿರುವುದು ಸರ್ವೇ ನಂ.84ಕ್ಕೆ ಸೇರಿದ ಭೂಮಿಯಲ್ಲಿ. ನೀವು ತಡೆಯಾಜ್ಞೆ ತಂದಿರುವುದು ನಿವೇಶನ ಸಂಖ್ಯೆ 82ಕ್ಕೆ. ತಡೆಯಾಜ್ಞೆ ಆದೇಶದಲ್ಲಿಯೂ ಎಲ್ಲಿಯೂ ಸರ್ವೇ ನಂ.84 ಉಲ್ಲೇಖವಾಗಿಲ್ಲ ಎಂದು ತಿಳಿಸಿ, ಕಾರ್ಯಾಚರಣೆ ಮುಂದುವರಿಸಿದರು.

ಕ್ಯಾತಮಾರನಹಳ್ಳಿ ಸರ್ವೇ ನಂ.84ರಲ್ಲಿ 7.35 ಎಕರೆ ಸರ್ಕಾರಿ ಭೂಮಿಯಿತ್ತು. ಅದರಲ್ಲಿ ಹಲವು ವರ್ಷಗಳ ಹಿಂದೆಯೇ 5.35 ಎಕರೆ ಭೂಮಿಯನ್ನು ಹುಲಿಯಮ್ಮ ದೇವಾಲಯದ ಟ್ರಸ್ಟ್‍ನವರು ನಿವೇಶನವನ್ನಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ. ನಿವೇಶನ ಖರೀದಿಸಿದವರು. ಈಗಾಗಲೇ ಮನೆ ನಿರ್ಮಿಸಿಕೊಂಡಿದ್ದಾರೆ. ಈ ಭಾಗವನ್ನು ಹೊರತುಪಡಿಸಿಯೂ ಎರಡು ಎಕರೆ ಸರ್ಕಾರಿ ಭೂಮಿ ಇತ್ತು. ಅದರಲ್ಲಿ ರಾಜೀವ್ ನಗರದ ನಿಮ್ರಾ ಮಸೀದಿ ರಸ್ತೆ ನಿರ್ಮಾಣಕ್ಕೆ 10 ಗುಂಟೆ ಜಾಗ ಬಳಸಿಕೊಳ್ಳಲಾಗಿದೆ. ಉಳಿದ 1.30 ಎಕರೆ ಸರ್ಕಾರಿ ಭೂಮಿಯನ್ನು ಕೆಲವರು ಅತಿಕ್ರಮಿಸಿಕೊಂಡಿದ್ದರು. ಈ ಭೂಮಿಯಲ್ಲಿ ಮಳಿಗೆ, ಕಾಂಪೌಂಡ್ ಸೇರಿದಂತೆ ಯಾವುದೇ ಕಾಮಗಾರಿ ನಡೆಸದಂತೆ ಸೂಚನೆ ನೀಡಿದ್ದರೂ, ಅಧಿಕಾರಿಗಳಿಗೆ ಬೆದರಿಕೆ ಹಾಕಿ ಕಾಮಗಾರಿ ಮುಂದುವರೆಸಿ ಸರ್ಕಾರಿ ಆಸ್ತಿಯನ್ನು ಕಬಳಿಸುವುದಕ್ಕೆ ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿ, 1.30 ಎಕರೆ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದಿದ್ದೇವೆ. ಈ ಭೂಮಿಯನ್ನು ಯಾವುದಾದರೂ ಇಲಾಖೆ ಕೇಳಿದರೆ, ಅದಕ್ಕೆ ಮಂಜೂರು ಮಾಡಿಕೊಡಲಾಗುತ್ತದೆ. ಮತ್ತೆ ಯಾರಾದರೂ ಈ ಭೂಮಿಯನ್ನು ಅತಿಕ್ರಮಿಸಿಕೊಳ್ಳಲು ಪ್ರಯತ್ನಿಸಿದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ.
– ಟಿ.ರಮೇಶ್ ಬಾಬು, ತಹಶೀಲ್ದಾರ್

ಪಾಲಿಕೆ ಆಯುಕ್ತರಿಗೆ ಪತ್ರ…
ಇಂದು ತೆರವು ಕಾರ್ಯಾಚರಣೆ ನಡೆಸಿದ ವೇಳೆ ಕಾಂಪೌಂಡ್ ನಿರ್ಮಿಸಿದ್ದ ವ್ಯಕ್ತಿ ಮೈಸೂರು ನಗರ ಪಾಲಿಕೆಗೆ ಕಂದಾಯ ಕಟ್ಟಿರುವುದಾಗಿ ತಿಳಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿ, ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಸರ್ಕಾರಿ ಆಸ್ತಿ ಹಾಗೂ ಕಂದಾಯ ನಿವೇಶನಗಳಿಗೆ ಕಂದಾಯ ಸ್ವೀಕರಿಸಬಾರದು ಎಂದು ಮಾಹಿತಿ ನೀಡುತ್ತೇವೆ. ಇದರಿಂದ ಅನಧಿಕೃತ ಬಡಾವಣೆ ನಿರ್ಮಾಣವಾಗುತ್ತದೆ. ಸರ್ಕಾರಿ ಆಸ್ತಿ ಕಬಳಿಕೆಗೆ ಕಾರಣವಾಗುತ್ತದೆ.
-ಟಿ.ರಮೇಶ್ ಬಾಬು, ತಹಶೀಲ್ದಾರ್ ಮೈಸೂರು

Translate »