ಮೈಸೂರು ಡಿಸಿ ಕಚೇರಿಯಲ್ಲಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ 18 ದೂರು ದಾಖಲು
ಮೈಸೂರು

ಮೈಸೂರು ಡಿಸಿ ಕಚೇರಿಯಲ್ಲಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ 18 ದೂರು ದಾಖಲು

September 28, 2018

ಮೈಸೂರು: ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಾರ್ವಜನಿಕ ಕುಂದುಕೊರತೆಗಳ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವಾಹನಗಳ ಹೈಬೀಮ್ ದೀಪ ಗಳಿಂದ ಕಿರಿಕಿರಿ ತಪ್ಪಿಸಿ, ಖಾಸಗಿ ಆಯುರ್ವೇದಿಕ್ ಕ್ಲಿನಿಕ್‍ಗಳಲ್ಲಿ ಅಲೋಪತಿ ಔಷಧಿಗಳ ವಿತರಣೆ ನಿಲ್ಲಿಸಿ, ಸಿಗ್ನಲ್ ದೀಪ ಅಳವಡಿಸಿ, ಜನರಿಗೆ ತೊಂದರೆಯಾ ಗುವ ಮುನ್ನ ಒಣಗಿದ ಮರಗಳನ್ನು ಕಡಿಯಬೇಕು. ರಸ್ತೆ, ಚರಂಡಿ, ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಬೇಕು ಎಂಬಿತ್ಯಾದಿ ಹಲವು ಸಮಸ್ಯೆಗಳು ಅನಾವರಣಗೊಂಡವು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧೆಡೆಯಿಂದ ಬಂದ ದೂರವಾಣಿ ಕರೆ ಗಳ ಮೂಲಕ 18 ದೂರುಗಳು ದಾಖಲಾದವು.

ಮೈಸೂರಿನ ಶ್ರೀರಾಂಪುರ ಬಡಾವಣೆ ಸುತ್ತಮುತ್ತ ಆಯುರ್ವೇದ ವೈದ್ಯರ ಖಾಸಗಿ ಕ್ಲಿನಿಕ್‍ಗಳಲ್ಲಿ ಆಯು ರ್ವೆದ ಔಷಧಿಗಳಿಗೆ ಬದಲು ಅಲೋಪತಿ ಔಷಧಿ ಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ. ಇದರಿಂದ ರೋಗಿಗಳಿಗೆ ಇತರೆ ಸಮಸ್ಯೆ ಉಂಟಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಇಂತಹ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಕೂಡಲೇ ದೂರುದಾರರಿಂದ ಈ ಬಗೆಗಿನ ಮಾಹಿತಿ ಪಡೆದು ಅಂತಹ ಕ್ಲಿನಿಕ್‍ಗಳ ಮೇಲೆ ದಿಢೀರ್ ದಾಳಿ ನಡೆಸಿ ಕ್ರಮ ಕೈಗೊಳ್ಳುವಂತೆ ಡಿಹೆಚ್‍ಓಗೆ ಸೂಚಿಸಿದರು.

ಸಿಗ್ನಲ್ ಲೈಟ್: ಮೈಸೂರಿನ ಮಾನಂದವಾಡಿ ರಸ್ತೆ ಬಳಿ ಪ್ರಮುಖ ನಾಲ್ಕು ರಸ್ತೆಗಳು ಕೂಡುವ ರಿಂಗ್‍ರಸ್ತೆ ಜಂಕ್ಷನ್‍ನಲ್ಲಿ ಹೆಚ್ಚಿನ ವಾಹನಗಳ ಸಂಚಾರವಿದ್ದು, ಇಲ್ಲಿ ಸಿಗ್ನಲ್ ದೀಪ ಅಳವಡಿಸಬೇಕು. ಈ ಬಗ್ಗೆ ಕಳೆದ ಫೆಬ್ರವರಿಯಲ್ಲಿಯೂ ನೇರ ಫೋನ್ ಇನ್‍ನಲ್ಲಿ ದೂರು ನೀಡಿದ್ದು, ಕೆ.ಆರ್.ಸಂಚಾರ ವಿಭಾಗದ ಅಧಿಕಾರಿಗಳು ಹಿಂಬರಹ ಸಹ ನೀಡಿದ್ದಾರೆ. ಇದನ್ನು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ ಎಂದಷ್ಟೆ ಹೇಳಿ ಸುಮ್ಮನಾಗಿದ್ದಾರೆ. ಅನಾಹುತಗಳು ಸಂಭವಿಸುವ ಮುನ್ನ ಇಲ್ಲಿ ಸಿಗ್ನಲ್ ದೀಪ ಅಳವಡಿಸಲು ಕ್ರಮ ಕೈಗೊಳ್ಳಿ ಎಂದು ಮುರಳಿ ಎಂಬುವರು ಮನವಿ ಮಾಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ರಸ್ತೆ ಯಲ್ಲಿ ಕೇರಳದಿಂದ ಹೆಚ್ಚು ಜನ ಮೈಸೂರು ಕಡೆಗೆ ಬರುತ್ತಾರೆ. ಅಲ್ಲದೆ ದಸರಾ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಹೆಚ್ಚು ವಾಹನ ಸಂಚಾರ ಇರುತ್ತದೆ. ಆದ್ದರಿಂದ ಈ ಬಗ್ಗೆ ಪರಿಶೀಲಿಸಿ, ದಸರಾ ಒಳಗಾಗಿಯಾದರೂ ಸಿಗ್ನಲ್ ಲೈಟ್ ಅಳವಡಿಸಲು ಕ್ರಮ ವಹಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಮೈಸೂರಿನಲ್ಲಿ ವಾಹನಗಳ ಹೈಬೀಮ್ ಲೈಟ್ (ಪ್ರಖರ ಬೆಳಕಿನ ದೀಪ) ಹೆಚ್ಚಾಗಿದ್ದು, ಕಣ್ಣು ಕೋರೈಸುವ ಇಂತಹ ದೀಪಗಳಿಂದ ಎದುರಿನಿಂದ ಬರುವ ವಾಹನ ಚಲಾ ಯಿಸುವವರಿಗೆ ಮತ್ತು ಸಾರ್ವಜನಿಕರಿಗೆ ಅದರಲ್ಲೂ ಹಿರಿಯ ನಾಗರಿಕರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ, ಕಣ್ಣು ಕೋರೈ ಸುವ ಇಂತಹ ಹೈಬೀಮ್ ಲೈಟ್‍ಗಳ ಬಳಕೆಗೆ ಕಡಿ ವಾಣ ಹಾಕಿ. ಇದು ಕುವೆಂಪುನಗರದ ಪುಟ್ಟಸ್ವಾಮಿ ಅವರ ದೂರು. ಈ ಸಂಬಂಧ ಪೊಲೀಸ್ ಹಾಗೂ ಆರ್‍ಟಿಓ ಜಂಟಿಯಾಗಿ ಕ್ರಮ ಕೈಗೊಂಡು ಸಾರ್ವ ಜನಿಕರಿಗಾಗುತ್ತಿರುವ ಕಿರಿಕಿರಿ ತಪ್ಪಿಸುವಂತೆ ಜಿಲ್ಲಾ ಧಿಕಾರಿ ಸೂಚನೆ ನೀಡಿದರು.

ಕೆರೆ ಒತ್ತುವರಿ: ಜಿಲ್ಲೆಯ ಹಲವು ಕೆರೆಗಳ ಒತ್ತುವರಿ ಹಾಗೂ ಹೂಳೆತ್ತುವ ಕುರಿತು ಹಲವು ದೂರುಗಳು ಕೇಳಿ ಬಂದವು. ಈ ಪೈಕಿ ಸರಗೂರು ಗ್ರಾಮದ ವಿವಿಧ ಸರ್ವೆ ನಂಬರ್‍ನಲ್ಲಿರುವ ಕೆರೆ ಒತ್ತುವರಿಯಾಗಿದೆ ಎಂದು ಸರಗೂರು ಕೃಷ್ಣ ದೂರಿದರು. ಹೆಚ್.ಡಿ.ಕೋಟೆ ತಾಲೂ ಕಿನ ಹೊಮ್ಮರಗಳ್ಳಿಯ ಪುಟ್ಟರಾಜು ಅವರು, ಹಂಪಾ ಪುರ ಮತ್ತು ಹನುಮಂತನರಾಯನ ಕೆರೆ ಒತ್ತುವರಿ ಮತ್ತು ಹೂಳು ತೆಗೆಸುವ ಕುರಿತು ಪ್ರತ್ಯೇಕ ದೂರು ಗಳನ್ನು ದಾಖಲಿಸಿದರು. ಇದರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ರಸ್ತೆ ದುರಸ್ತಿಗೆ ಸೂಚನೆ: ಮೈಸೂರಿನ ಬನ್ನೂರು ರಸ್ತೆಯ ಹೆಚ್.ಡಿ.ದೇವೇಗೌಡ ವೃತ್ತದ ಬಳಿಯ ಉರ್ದು ಶಿಕ್ಷಕರ ಕಾಲೋನಿಯಲ್ಲಿ ಸಮರ್ಪಕ ನೀರು ಸರಬ ರಾಜಿಲ್ಲ. ರಸ್ತೆಗೆ ಜಲ್ಲಿ ಹಾಕಿದ್ದು, ಡಾಂಬರೀಕರಣ ಮಾಡಿಲ್ಲ. ಇದರಿಂದ ಜನ ಓಡಾಡಲು ತೊಂದರೆಯಾ ಗಿದೆ. ಸಾಯಿಬಾಬಾ ದೇವಸ್ಥಾನದಿಂದ ಎಡಕ್ಕೆ ಈ ಸಮಸ್ಯೆ ಇದೆ. ಜನರಿಗೆ ಧೂಳಿನ ಸ್ನಾನವಾಗುತ್ತಿದೆ. ಹಿರಿಯರು ಮತ್ತು ಮಕ್ಕಳಿಗೆ ಆರೋಗ್ಯದ ತೊಂದರೆಗಳು ಕಾಣಿಸಿ ಕೊಳ್ಳುತ್ತಿದೆ. ಮನೆ ಕಂದಾಯ, ನೀರು ಕಂದಾಯ ಸೇರಿ ದಂತೆ ಎಲ್ಲವನ್ನೂ ಕಟ್ಟಿದ್ದೇವೆ. ನಮಗೇಕೆ ಇಷ್ಟು ತೊಂದರೆ ನೀಡುತಿದ್ದೀರಿ. ಸ್ವಚ್ಛ ಭಾರತ್‍ನಲ್ಲಿ ಮೊದಲ ಸ್ಥಾನ ಪಡೆದ ಮೈಸೂರಿಗೆ ಈ ನಮ್ಮ ಬಡಾವಣೆ ಸೇರಿಲ್ಲವೇ? ಎಂಬುದು ಅಲ್ಲಿನ ಪುಟ್ಟಹನುಮೇಗೌಡ ಅವರ ಪ್ರಶ್ನೆ.
ಇದನ್ನು ಆಲಿಸಿದ ಡಿಸಿ, ಕೂಡಲೇ ಸಮಸ್ಯೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮೈಸೂರು ಮಹಾ ನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರಿಗೆ ಸೂಚನೆ ನೀಡಿದರು.

ಮೈಸೂರಿನ ಎನ್.ಆರ್.ಮೊಹಲ್ಲಾದ ಶ್ಯಾಮಲಾ ಅವರ ಪ್ರಕಾರ, ಎನ್‍ಜಿಓ ಕಾಲೋನಿಯ ಮೊದ ಲನೇ ಕ್ರಾಸ್‍ನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಕಸ ಹಾಕಲಾಗುತ್ತಿದೆ. ರೋಗ ರುಜಿನ ಹರಡುವ ಸಾಧ್ಯತೆ ಇದ್ದು, ಕೂಡಲೇ ತೆರವುಗೊಳಿಸಲು ಮನವಿ ಮಾಡಿ ದರು. ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮ ದಲ್ಲಿ ಖಾಸಗಿ ಅಂಗಡಿಗಳಲ್ಲಿ ಕೃಷಿ ಮತ್ತು ಆಹಾರ ಪದಾರ್ಥಗಳಿಗೆ ಎಂಆರ್‍ಪಿ ದರಕ್ಕಿಂತ ಹೆಚ್ಚಿನ ದರ ಪಡೆಯಲಾಗುತ್ತಿದ್ದು, ಕ್ರಮ ಕೈಗೊಳ್ಳಿ ಎಂಬುದು ಅಲ್ಲಿನ ನಾಗರಿಕರ ದೂರು. ಪಿರಿಯಾಪಟ್ಟಣ ತಾಲೂ ಕಿನ ಕಗ್ಬುಂಡಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಯಿಂದ ತೆಗೆದುಕೊಂಡ ಉಪಕರಣಗಳಿಗೆ ಇಲಾಖೆ ಯಿಂದ ಸಹಾಯಧನ ನೀಡುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.

Translate »