ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯಲ್ಲಿ ತಮ್ಮನ್ನೂ ಒಬ್ಬ ಸದಸ್ಯನನ್ನಾಗಿ ಸೇರಿಸ ಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಇಂದಿಲ್ಲಿ ಪುನರುಚ್ಛರಿಸಿದ್ದಾರೆ.
ಆಡಳಿತದಲ್ಲಿನ ಪಾಲುದಾರಿಕೆ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‍ನ ರಾಜ್ಯಾಧ್ಯಕ್ಷರುಗಳು ಸಮಿತಿಯ ಸದಸ್ಯರಾಗಿರ ಲೇಬೇಕು, ಅದನ್ನು ಈಗಲೂ ಒತ್ತಿ ಹೇಳುತ್ತೇನೆ. ಸಮನ್ವಯ ಸಮಿತಿಗೆ ಪ್ರಮುಖರಲ್ಲದೆ, ಸರ್ಕಾರ ಮತ್ತು ಪಕ್ಷದ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲು ತಮ್ಮನ್ನೂ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸೇರಿಸಲೇಬೇಕು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಕವಿದಿದ್ದ ಎಲ್ಲಾ ಕಾರ್ಮೋಡಗಳು ದೂರ ಸರಿದಿವೆ, ಸರ್ಕಾರ ಈಗ ಬಹಳ ಚೆನ್ನಾಗಿ ನಡೆಯುತ್ತಿದೆ ಎಂದರು. ಸಮಸ್ಯೆಗಳು ಬಗೆಹರಿದಿವೆ, ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈಗ ಕಾಲ ಪಕ್ವವಾಗಿದೆ ಎಂದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಎಲ್ಲರನ್ನು ಸಂಪರ್ಕಿಸಿಯೇ, ಬೆಂಗಳೂರು ನಗರ ಯುವ ಘಟಕದ ಅಧ್ಯಕ್ಷ ರಮೇಶ್ ಗೌಡ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆಯಿಂದ ವಿಧಾನಪರಿಷತ್‍ನ ಉಪಚುನಾವಣೆಗೆ ಆಯ್ಕೆ ಮಾಡಿದ್ದಾರೆ.
ಅಭ್ಯರ್ಥಿ ಆಯ್ಕೆಯಲ್ಲಿ ಆರೋಪಗಳು ಕೇಳಿ ಬರುವುದು ಸಹಜ, ಪಂಚಾಯತ್‍ನಿಂದ ಸಂಸತ್‍ವರೆಗೂ ಕ್ರಿಮಿನಲ್ ಆರೋಪ ಹೊತ್ತವರು ಇದ್ದಾರೆ. ಹಾಗಂತ ಕ್ರಿಮಿನಲ್ ಆರೋಪ ಉಳ್ಳವರು ಇರಬೇಕೆಂದು ತಾವು ಬಯಸುವುದಿಲ್ಲ ಎಂದರು.
`ಅಥೆನ್ಸ್ ರಾಜ್ಯಾಡಳಿತ’ ಕೃತಿ: ಜಗತ್ತಿನ ಪ್ರಾಚೀನ ಸಂಸದೀಯ ಇತಿಹಾಸ ಕಥನ ಒಳಗೊಂಡ `ಅಥೆನ್ಸ್‍ನ ರಾಜ್ಯಾಡಳಿತ’ ಎಂಬ ತಮ್ಮ 7ನೇ ಕೃತಿಯನ್ನು ಲೋಕಾರ್ಪಣೆ ಮಾಡುತ್ತಿರುವುದಾಗಿ ಇದೇ ಸಂದರ್ಭದಲ್ಲಿ ವಿಶ್ವನಾಥ್ ತಿಳಿಸಿದರು.
ಈ ತಿಂಗಳ 29ರಂದು ನಗರದ ಭಾರತೀಯ ವಿದ್ಯಾ ಭವನ ದಲ್ಲಿ ಕೃತಿಯನ್ನು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಡುಗಡೆ ಮಾಡಲಿದ್ದು, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಗ್ರೀಕ್‍ನ ಪುರಾತನ ಜನತಂತ್ರ ವ್ಯವಸ್ಥೆ ಹಾಗೂ ಚುನಾವಣೆ ಬಗ್ಗೆ ಪುಸ್ತಕ ಬರೆದುಕೊಡುವಂತೆ 2016ರಲ್ಲಿ ಆಹ್ವಾನ ಬಂದಿತ್ತು, ಅದರ ಮೇರೆಗೆ ಗ್ರೀಸ್ ದೇಶಕ್ಕೆ ತೆರಳಿ ಅಧ್ಯಯನ ನಡೆಸಿ, ಅಥೆನ್ಸ್‍ನ ರಾಜ್ಯಾಡಳಿತ ಕುರಿತು ಪುಸ್ತಕ ಬರೆಯಲಾಗಿದೆ. ಎರಡು ಸಾವಿರ ವರ್ಷಗಳ ಹಿಂದೆಯೇ ಮೊದಲ ಬಾರಿಗೆ ಚುನಾವಣಾ ಪದ್ಧತಿ ಆರಂಭವಾಗಿತ್ತು. ಗ್ರೀಕ್‍ನ ಪುರಾತನ ಜನತಂತ್ರ ವ್ಯವಸ್ಥೆ ಹೇಗಿತ್ತು ಎಂಬುದನ್ನು ಜನರಿಗೆ ಪರಿಚಯಿಸಲು ಈ ಕೃತಿ ಬರೆಯಲಾಗಿದೆ. ಇಲ್ಲಿ ಬಿಡುಗಡೆಯಾದ ನಂತರ ಗ್ರೀಕ್ ಸಂಸತ್‍ಗೆ ಕೃತಿ ಸಲ್ಲಿಸಲಾಗುವುದು ಎಂದರು.