ಶಾಖಾ ವ್ಯವಸ್ಥಾಪಕರು ಸೇರಿ ನಾಲ್ವರ  ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
ಮೈಸೂರು

ಶಾಖಾ ವ್ಯವಸ್ಥಾಪಕರು ಸೇರಿ ನಾಲ್ವರ  ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

September 28, 2018

ಎಂಸಿಡಿಸಿಸಿ ಬ್ಯಾಂಕ್‍ನ ಹುಣಸೂರು, ಬಿಳಿಕೆರೆ  ಶಾಖೆಯಲ್ಲಿನ ಕೋಟ್ಯಾಂತರ ರೂ. ಅವ್ಯವಹಾರ ಪ್ರಕರಣ
ಹುಣಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ (ಎಂಸಿಡಿಸಿಸಿ) ಬ್ಯಾಂಕ್‍ನ ಹುಣಸೂರು ಮತ್ತು ಬಿಳಿಕೆರೆ ಶಾಖೆಗಳಲ್ಲಿ ನಡೆದಿರುವ ಕೋಟ್ಯಾಂತರ ರೂ. ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಹುಣಸೂರು ಶಾಖೆಯ ಹಿಂದಿನ ಮ್ಯಾನೇಜರ್ ರಾಮಪ್ಪ ಪೂಜಾರ್ ಮತ್ತು ಬಿಳಿಕೆರೆ ಶಾಖೆಯ ಹಿಂದಿನ ಮ್ಯಾನೇಜರ್ ಜಿ.ಎಸ್.ಶಶಿಧರ್ ಸೇರಿದಂತೆ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಬಿಳಿಕೆರೆ ಶಾಖೆಯ ಹಾಲಿ ಮ್ಯಾನೇಜರ್ ಎಂ.ಟಿ.ಶಶಿಧರ ಅವರು ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು, ರಾಮಪ್ಪ ಪೂಜಾರ್, ಜಿ.ಎಸ್.ಶಶಿಧರ್, ಹುಣಸೂರು ಶಾಖೆಯ ಮೇಲ್ವಿಚಾರಕ ಬಿ.ಬಿ.ಕೃಷ್ಣ ಮತ್ತಿತರರ ವಿರುದ್ಧ ಸೆ.17ರಂದು ಭಾರತೀಯ ದಂಡ ಸಂಹಿತೆ 409, 471, 477ಎ, 420 ಮತ್ತು 34ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ಇಂದು ಮೈಸೂರು ಜಿಲ್ಲಾ ಡಿಸಿಐಬಿ ಇನ್ಸ್‍ಪೆಕ್ಟರ್ ಕಾಂತರಾಜು ಅವರಿಗೆ ವಹಿಸಲಾಗಿದೆ. ಕಾಂತರಾಜು ಅವರು ಇಂದು ರಜೆಯಲ್ಲಿದ್ದು, ನಾಳೆ (ಸೆ.28) ತನಿಖೆಗೆ ಸಂಬಂಧಪಟ್ಟ ದಾಖಲೆಗಳನ್ನು ಪಡೆದು ತನಿಖೆ ಆರಂಭಿಸುವರು ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಹುಣಸೂರು ಸರ್ಕಲ್ ಇನ್ಸ್‍ಪೆಕ್ಟರ್ ಪೂವಯ್ಯ ಮತ್ತು ಅವರ ತಂಡ ತಲೆಮರೆಸಿ ಕೊಂಡಿರುವ ರಾಮಪ್ಪ ಪೂಜಾರ್ ಮತ್ತು ಜಿ.ಎಸ್.ಶಶಿಧರ್ ಅವರ ಬಂಧನಕ್ಕಾಗಿ ಮೈಸೂರಿಗೆ ತೆರಳಿತ್ತು. ವಿಜಯನಗರದಲ್ಲಿರುವ ರಾಮಪ್ಪ ಪೂಜಾರ್ ಮನೆಗೆ ಬೀಗ ಹಾಕಿತ್ತು ಎಂದು ಹೇಳಲಾಗಿದ್ದು, ಶಾರದಾದೇವಿನಗರದಲ್ಲಿ ಇರುವ ನಿರಂಜನ್ ಮನೆಯಲ್ಲಿ ಅವರಿರಲಿಲ್ಲ ಎಂದು ಹೇಳಲಾಗಿದೆ. ಅದೇ ವೇಳೆ ಎಂಸಿಡಿಸಿಸಿ ಬ್ಯಾಂಕ್‍ನ ಪ್ರಭಾರ ಎಂಡಿ ಎಂ.ಹಿರಣ್ಣ ಅವರು ಇಂದು ಹುಣಸೂರು ಮತ್ತು ಬಿಳಿಕೆರೆ ಶಾಖೆಗಳಿಗೆ ಭೇಟಿ ನೀಡಿ ಹಲವಾರು ದಾಖಲಾತಿಗಳನ್ನು ಪರಿಶೀಲಿಸಿದರು.

ಈ ಸಂಬಂಧ `ಮೈಸೂರು ಮಿತ್ರ’ನ ಜೊತೆ ಮಾತನಾಡಿದ ಅವರು, ಬ್ಯಾಂಕ್‍ನ ಆಡಳಿತ ಮಂಡಳಿಯ ಸೂಚನೆ ಮೇರೆಗೆ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನಾ ಧರಿಸಿ ಸೆ.26ರಂದು ಜಿಲ್ಲಾ ಎಸ್ಪಿಯವರು ಕೆಲವು ಮಾಹಿತಿಗಳನ್ನು ಕೇಳಿದ್ದರು. ಆ ಹಿನ್ನೆಲೆಯಲ್ಲಿ ತಾವು ಇಂದು ಶಾಖೆಗಳಿಗೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿರುವುದಾಗಿ ತಿಳಿಸಿದರು. ಹುಣಸೂರು ಶಾಖಾ ವ್ಯವಸ್ಥಾಪಕರಾಗಿದ್ದ ರಾಮಪ್ಪ ಪೂಜಾರ್ ಮತ್ತು ಬಿಳಿಕೆರೆ ಶಾಖಾ ವ್ಯವಸ್ಥಾಪಕ ನಿರಂಜನ್ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನೂ ಶೀಘ್ರವೇ ಅಮಾನತು ಮಾಡಲಾಗುತ್ತದೆ. ತನಿಖೆ ಪೂರ್ಣಗೊಳ್ಳುವವರೆವಿಗೂ ಅವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡುವುದಿಲ್ಲ. ಬ್ಯಾಂಕ್‍ನಲ್ಲಿ ಗಿರವಿ ಇಟ್ಟಿರುವ ಚಿನ್ನಾಭರಣವನ್ನು ಇಲಾಖೆಯ ಅನುಮತಿ ಪಡೆದ ನಂತರ ಪರಿಶೀಲಿಸಲಾಗುತ್ತದೆ

Translate »