ಅತಿವೃಷ್ಟಿಯಿಂದ ಮೈಸೂರು, ಚಾ.ನಗರ ಜಿಲ್ಲೆಯಲ್ಲಿ 197 ಹೆಕ್ಟೇರ್ ಬೆಳೆ ಹಾನಿ
ಮೈಸೂರು

ಅತಿವೃಷ್ಟಿಯಿಂದ ಮೈಸೂರು, ಚಾ.ನಗರ ಜಿಲ್ಲೆಯಲ್ಲಿ 197 ಹೆಕ್ಟೇರ್ ಬೆಳೆ ಹಾನಿ

June 19, 2018

ಮೈಸೂರು: ಅತಿ ವೃಷ್ಟಿಯಿಂದ ರಾಜ್ಯದ ಐದು ಜಿಲ್ಲೆಯ 1803 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದರೆ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 197 ಹೆಕ್ಟೇರ್ ನ ಬೆಳೆ ಹಾನಿಯಾಗಿದೆ. ರೈತರಿಗೆ ಕೂಡಲೇ ಪರಿಹಾರ ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ರಾಜ್ಯದ ದಾವಣಗೆರೆ, ತುಮಕೂರು, ಬೆಳಗಾವಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಂದ 1,803 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ 54 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮುಸುಕಿನ ಜೋಳ, ತಂಬಾಕು, ಭತ್ತ, ಹತ್ತಿ ಬೆಳೆಗೆ ಹಾನಿಯಾ ಗಿದ್ದು, ಇದರ ಮೌಲ್ಯ 3.72ಲಕ್ಷ ರೂ. ಎಂದು ನಿರ್ಧರಿಸಲಾಗಿದೆ. ಹಾಗೆಯೇ ಚಾಮರಾಜನಗರ ಜಿಲ್ಲೆಯಲ್ಲಿ 143 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಎಳ್ಳು, ಮುಸುಕಿನಜೋಳ, ಉದ್ದು, ಹೆಸರು, ಕಬ್ಬು ಬೆಳೆಗೆ ಹಾನಿಯಾಗಿದ್ದು, ಇದರ ಮೌಲ್ಯ 9.68 ರೂ. ಎಂದು ಅಂದಾಜಿಸಲಾಗಿದೆ. ಆದರೆ, ಮಂಡ್ಯ ದಲ್ಲಿ ಬೆಳೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ ದಾವಣಗೆರೆ ಜಿಲ್ಲೆಯಲ್ಲಿ 1,310 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂದರು. 2016-17ನೇ ಸಾಲಿನಲ್ಲಿ ವಿಮೆ ಮಾಡಿಸಿದ ರೈತರಿಗೆ ಸಂಪೂರ್ಣ ಹಣವನ್ನು ಪಾವತಿಸಲಾಗಿದೆ. ಹಿಂಗಾರಿನಲ್ಲಿ ಪರಿಹಾರವಾಗಿ 880 ಕೋಟಿ ರೂ. ಪೈಕಿ 250 ಕೋಟಿ ರೂ. ಪಾವತಿಯಾಗಿದ್ದು, ಉಳಿದ ಹಣವನ್ನು ಪಾವತಿಸುವಂತೆ ಸರ್ಕಾರ ವಿಮಾ ಕಂಪನಿಗೆ ಸೂಚಿಸಿದೆ. ಈಗಾಗಲೇ ಸಮೀಕ್ಷೆ ಮಾಡಿ ದಂತೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಬಿತ್ತನೆ ಬೀಜ, ಗೊಬ್ಬರದ ಕೊರತೆ ಇಲ್ಲ ಎಂದರು.

2017-18ನೇ ಸಾಲಿನಲ್ಲಿ 14 ಲಕ್ಷ ರೈತರು ವಿಮೆಗೆ ನೋಂದಣ ಮಾಡಿಸಿಕೊಂಡಿದ್ದರು. ಅದರಲ್ಲಿ 550 ಕೋಟಿ ವಿಮಾ ಹಣವನ್ನು ಪಾವತಿಸುವಂತೆ ಸರ್ಕಾರ ಈಗಾಗಲೇ ಸಂಬಂಧಪಟ್ಟ ವಿಮಾ ಕಂಪೆನಿಗೆ ನಿರ್ದೇಶನ ನೀಡಿದೆ. ಹಾಗೆಯೇ ಈ ಹಂಗಾಮಿಗೆ ಪುನಃ ರೈತರು ವಿಮೆ ನೋಂದಣ ಮಾಡಿಕೊಳ್ಳುವಂತೆ ಇಲಾಖೆ ಅಧಿಕಾರಿಗಳು ಪ್ರೋತ್ಸಾಹಿಸುತ್ತಿದ್ದಾರೆ ಎಂದು ತಿಳಿಸಿದರು.

ಬೆಳೆ ಹಾನಿಯ ಜೊತೆಗೆ ಜಾನುವಾರು ಹಾನಿ, ಮನೆ ಕುಸಿದಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ಇಂದು ಬೆಳೆ ಹಾನಿಗೆ ಕೇಂದ್ರ ಸರ್ಕಾರದ ಮಾನ ದಂಡದಂತೆ ಪ್ರತಿ ಹೆಕ್ಟೇರ್‍ಗೆ 6,800 ರೂ. ಅಂದರೆ, ಪ್ರತಿ ಎಕರೆಗೆ 2,500 ರೂ. ಪರಿಹಾರ ನೀಡಲಾಗು ತ್ತಿದೆ. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ತ್ವರಿತ ವಾಗಿ ಪರಿಹಾರ ನೀಡುವಂತೆ ಸೂಚಿಸಲಾಗಿದೆ ಎಂದರು. ನಾವು ಕೊಡುವ ಪರಿಹಾರದ ಹಣ ಯಾವುದಕ್ಕೂ ಸಾಲುವುದಿಲ್ಲ. ಇದರ ಮೊತ್ತವನ್ನು ಹೆಚ್ಚಿಸಬೇಕಿದೆ. ಹಾಗಾಗಿ ಕೇಂದ್ರಕ್ಕೆ ನಿಯೋಗ ತೆರಳಿ ಪರಿಹಾರ ಮೊತ್ತ ಹೆಚ್ಚಿಸುವ ಕುರಿತು ಚರ್ಚಿಸಲಾಗುವುದು ಎಂದರು.
ಮುಖ್ಯಮಂತ್ರಿಗಳು ಸಾಲಮನ್ನಾಕ್ಕೆ ಮೊದಲ ಆದ್ಯತೆ ನೀಡುತ್ತಿದ್ದು, ಈ ಬಾರಿಯ ಬಜೆಟ್‍ನಲ್ಲಿ ಸಾಲಮನ್ನಾ ಪ್ರಸ್ತಾಪಿಸಲಿದ್ದಾರೆ. ಸಂಪನ್ಮೂಲ ಕ್ರೂಢೀಕರಿಸಿಕೊಂಡು, ಇರುವ ಯೋಜನೆಗಳ ಜೊತೆಗೆ ಸಾಲ ಮನ್ನಾ ಕೂಡ ಪ್ರಸ್ತಾಪವಾಗಲಿದೆ. ಆಗ ಬಜೆಟ್‍ನ ಗಾತ್ರವೂ ಹೆಚ್ಚಾಗಲಿದೆ. ಜೊತೆಗೆ ಒಣ ಬೇಸಾಯಗಾರರ ಖಾತೆಗೆ ನೇರ ನಗದು ಪರಿಹಾರ ಯೋಜನೆಯನ್ನು ಪರಿಚಯಿಸುವ ಉದ್ದೇಶವಿದೆ ಎಂದು ಹೇಳಿದರು.

ವರುಣಾ ಭಾಗದಲ್ಲಿ ಕಬಿನಿ ನೀರು ಬಿಟ್ಟಿದ್ದ ರಿಂದ ಭತ್ತದ ಬೆಳೆ ಹಾನಿಯಾಗಿದೆ ಎಂಬ ವಿಚಾ ರಕ್ಕೆ ಸಚಿವರು ಪ್ರತಿಕ್ರಿಯಿಸಿ, ಈ ಕುರಿತು ಸಭೆ ಯಲ್ಲಿ ಚರ್ಚೆಯಾಗಿದ್ದು, ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಎಷ್ಟು ಹಾನಿಯಾಗಿದೆ ಎಂಬ ಸಂಪೂರ್ಣ ವರದಿ ಯನ್ನು ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಸೂಚಿಸಿದ್ದೇವೆ ಎಂದರು.

ರೈತರ ಸಮಸ್ಯೆ ಆಲಿಕೆ: ಬಹಳಷ್ಟು ರೈತರು ಮಾರುಕಟ್ಟೆ ವ್ಯವಸ್ಥೆ, ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದ್ದು, ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸುವು ದಾಗಿ ತಿಳಿಸಿದ್ದೇನೆ ಎಂದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್, ಶಾಸಕ ರಾದ ಹೆಚ್.ವಿಶ್ವನಾಥ್, ಆರ್.ನರೇಂದ್ರ, ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್‍ಚಿಕ್ಕಮಾದು, ಅಶ್ವಿನ್‍ಕುಮಾರ್, ಎಂ.ಎಲ್.ಸಿ. ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ಮತ್ತಿತರರು ಉಪಸ್ಥಿತರಿದ್ದರು.

Translate »