ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ:  ಜಲಪ್ರಳಯದಿಂದ ತತ್ತರಿಸಿದ ಕಾವೇರಿ ನಾಡು
ಕೊಡಗು

ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ: ಜಲಪ್ರಳಯದಿಂದ ತತ್ತರಿಸಿದ ಕಾವೇರಿ ನಾಡು

August 15, 2018

ಸಂಚಾರಕ್ಕೆ ಮುಕ್ತವಾಗಿಲ್ಲ ಮಡಿಕೇರಿ-ಮಂಗಳೂರು ಹೆದ್ದಾರಿ
ಮಡಿಕೇರಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಆಶ್ಲೇಷಾ ಮಳೆಯ ಆರ್ಭಟಕ್ಕೆ ಕೊಡಗು ಜಿಲ್ಲೆ ಸಂಪೂರ್ಣ ಸ್ಥಬ್ಧಗೊಂಡಿದೆ. ಕಳೆದ 24 ಗಂಟೆಗೆ ಅವಧಿಯಲ್ಲಿ ಜಿಲ್ಲೆಯಾದ್ಯಂತ 20 ಇಂಚಿಗೂ ಅಧಿಕ ಮಳೆ ಸುರಿದ ಹಿನ್ನಲೆ ಯಲ್ಲಿ ಕೊಡಗು ಜಿಲ್ಲೆಯ ಸ್ಥಿತಿ ವಿಷಮಕ್ಕೆ ತಿರುಗಿದೆ. ನಗರ, ಪಟ್ಟಣ ಸಹಿತ ಗ್ರಾಮೀಣ ಭಾಗಗಳು ಜಲ ಪ್ರಳಯಕ್ಕೆ ತುತ್ತಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯೊಂದಿಗೆ ಬಿರುಗಾಳಿಯೂ ಬೀಸುತ್ತಿದ್ದು, ಪ್ರಕೃತಿ ವಿಕೋಪಗಳಿಗೆ ಎಣೆಯಿಲ್ಲದಂತಾಗಿದೆ.

ಕಾವೇರಿ, ಲಕ್ಷಣ ತೀರ್ಥ ನದಿಗಳು ಸೇರಿದಂತೆ ಉಪನದಿಗಳು, ತೋಡು-ತೊರೆಗಳು ಉಕ್ಕಿ ಹರಿಯುತ್ತಿದ್ದು ಕಂಡರಿ ಯದ ರೀತಿಯಲ್ಲಿ ಕಾವೇರಿ ತವರು ಸಂಕಷ್ಟಕ್ಕೆ ಸಿಲುಕಿದೆ. 4 ದಿನಗಳಲ್ಲಿ ನೂರಾರು ಮರಗಳು, ವಿದ್ಯುತ್ ಕಂಬಗಳು ಬುಡ ಮೇಲಾಗಿದ್ದು, ಕೊಡಗು ಜಿಲ್ಲೆ ಸಂಪೂರ್ಣ ತತ್ತರಿಸಿದೆ. ನಗರದ ಜೀವ ವಿಮಾ ಕಚೇರಿ ಬಳಿ ರಾಜ ಕಾಲುವೆ ಉಕ್ಕಿ ಹರಿದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಬಂದ್ ಆದರೆ, ಪ್ರೆಸ್ ಕ್ಲಬ್ ಬಳಿ ಕಿರು ತೋಡಿನ ನೀರು ಪಕ್ಕದ ಮನೆಗಳಿಗೆ ಹರಿದು ನಷ್ಟ ಸಂಭವಿಸಿದೆ. ನಗರದ ಕಾವೇರಿ ಲೇಔಟ್, ಗೌಳಿ ಬೀದಿ, ಆಂಜನೇಯ ದೇವಾಲಯ ಬಡಾವಣೆಯಲ್ಲಿ ತೊರೆ ಉಕ್ಕಿ ಹರಿದು ಮನೆಗಳಿಗೆ ನೀರು ನುಗ್ಗಿದೆ. ಚಾಮುಂಡೇಶ್ವರಿ ನಗರ, ಇಂದಿರಾ ನಗರದಲ್ಲಿ ಬರೆ ಕುಸಿದು ಮನೆಯ ಗೋಡೆಗಳಿಗೆ ಹಾನಿ ಸಂಭವಿಸಿದ್ದು, ಬಿರುಗಾಳಿಗೆ ಕೆಲ ಮನೆಗಳ ಹೆಂಚುಗಳು ಮತ್ತು ಶೀಟ್‍ಗಳು ಹಾರಿಹೋಗಿರುವ ಬಗ್ಗೆ ವರದಿಯಾಗಿದೆ.

ಮಡಿಕೇರಿ-ಮಾದಾಪುರ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು, ಕಬ್ಬಿಣ ಸೇತುವೆ ಬಳಿ ಭಾರಿ ಗಾತ್ರದ ಮರ ಉರುಳು ಬಿದ್ದಿದೆ. ಇದರಿಂದಾಗಿ ಮಡಿ ಕೇರಿ-ಮಾದಾಪುರ ರಸ್ತೆ ಸಂಚಾರ ಕೆಲ ಕಾಲ ಬಂದ್ ಆಗಿತ್ತು. ಹೆದ್ದಾರಿ ಯಿಂದ ಮಣ್ಣು ಮತ್ತು ಮರವನ್ನು ತೆರವುಗೊಳಿಸಿದ ಬಳಿಕ ರಸ್ತೆ ಸಂಚಾರ ಸುಗಮಗೊಂಡಿದೆ. ಚೆಟ್ಟಳ್ಳಿ, ಸುಂಟಿಕೊಪ್ಪ ಭಾಗದಲ್ಲಿ ಮರಗಳು ಉರುಳಿ ಬಿದ್ದು ರಸ್ತೆ ಸಂಚಾರ ದುಸ್ತರಗೊಂಡ ಬಗ್ಗೆ ವರದಿಯಾಗಿದೆ. ಮುಕ್ಕೋಡ್ಲು ಹಮ್ಮಿಯಾಲ ಸಂಪರ್ಕ ರಸ್ತೆ ಉದ್ದಕ್ಕೂ ಭೂಕುಸಿತ ಸಂಭವಿಸಿ ಈ ಭಾಗದ ಸಂಪರ್ಕ ಕಡಿತಗೊಂಡಿದ್ದು, ಭಾರಿ ಮಳೆಯಿಂದಾಗಿ ಮಣ್ಣು ತೆರವು ಕಾರ್ಯಕ್ಕೆ ಅಡ್ಡಿಯಾಗಿದೆ. ನಾಪೋಕ್ಲು-ಬೊಳಿಬಾಣೆ, ಭಾಗಮಂಡಲ-ಅಯ್ಯಂಗೇರಿ ಮತ್ತು ಭಾಗಮಂಡಲ-ತಲಕಾವೇರಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ರಸ್ತೆ ಸಂಪರ್ಕ ವ್ಯವಸ್ಥೆ ಸಂಪೂರ್ಣ ಬಂದ್ ಆಗಿದೆ. ಭಾಗಮಂಡಲ -ಅಯ್ಯಂಗೇರಿ ರಸ್ತೆ, ಭಾಗಮಂಡಲ-ತಲಕಾವೇರಿ ರಸ್ತೆಯ ಮೇಲೆ 5 ಅಡಿ ನೀರು ಹರಿಯುತ್ತಿದ್ದು ಸ್ಥಳೀಯರ ಅನುಕೂಲಕ್ಕಾಗಿ ಬೋಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಾವೇರಿ ನದಿ ನೀರಿನ ಪ್ರವಾಹ ಶ್ರೀ ಭಗಂಡೇಶ್ವರ ದೇವಾ ಲಯದ ಮೆಟ್ಟಲಿನವರೆಗೂ ಆವರಿಸಿದ್ದು ಹಲವು ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದೆ. ಕೊಟ್ಟಮುಡಿ, ಕೊಂಡಗೇರಿ, ದೋಣಿಕಡವು ಸೇರಿದಂತೆ ನಾಪೋಕ್ಲು ವ್ಯಾಪ್ತಿಯ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶಗಳಿಗೆ ಪ್ರವಾ ಹದ ನೀರು ನುಗ್ಗಿದೆ. ನೂರಾರು ಎಕರೆ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿದ್ದು, ಸಸಿ ಮಡಿಗಳು ಕೊಳೆ ರೋಗಕ್ಕೆ ತುತ್ತಾಗಿದೆ.

ಬೇತ್ರಿ ಸೇತುವೆ ತುಂಬಲು ಕೇವಲ 1 ಅಡಿ ಮಾತ್ರ ಉಳಿದಿದ್ದು ತಗ್ಗು ಪ್ರದೇಶ ಗಳು ಪ್ರವಾಹದಿಂದ ಆವೃತ್ತವಾಗಿದೆ. ಕದನೂರು ಹೊಳೆ ಪ್ರವಾಹ ಸ್ವರೂಪ ಪಡೆದಿದ್ದು, ನೂರಾರು ಎಕರೆ ಕೃಷಿ ಭೂಮಿಯಲ್ಲಿ ನೀರು ನಿಂತು ಸಂಪೂರ್ಣ ಪ್ರದೇಶ ಸಮುದ್ರದಂತಾಗಿದೆ. ದಕ್ಷಿಣ ಕೊಡಗು ಕೂಡ ಮಳೆಯಿಂದ ತತ್ತರಿ ಸಿದು, ಲಕ್ಷಣ ತೀರ್ಥ ನದಿ ಪ್ರವಾಹಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಸಾವಿರಾರು ಎಕರೆ ಭತ್ತದ ಗದ್ದೆಗಳು, ಕಾಫಿ ಮತ್ತು ಅಡಿಕೆ ತೋಟಗಳು ಸಂಪೂ ರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ. ಬಾಳೆಲೆ- ನಿಟ್ಟೂರು ಸಂಪರ್ಕ ರಸ್ತೆ ನೀರಿನಲ್ಲಿ ಮುಳುಗಿದ್ದು, ಕಾರ್ಮಾಡು ಗ್ರಾಮ ಸಂಪರ್ಕ ಕಳೆದು ಕೊಂಡಿದೆ. ಲಕ್ಷಣತೀರ್ಥ ನದಿ ಪ್ರವಾಹದಿಂದಾಗಿ ಹಲವು ಗ್ರಾಮಗಳು ದ್ವೀಪ ದಂತಾಗಿವೆ. ಅದರೊಂದಿಗೆ ವಿದ್ಯುತ್ ಪೂರೈಕೆ ಸ್ಥಗಿತ ಗೊಂಡಿದ್ದರಿಂದ ಹಲವು ಗ್ರಾಮಗಳು ಕಗ್ಗತ್ತಲಲ್ಲಿ ಮುಳುಗಿವೆ.

ದಾಖಲೆಯ ಹೊರ ಹರಿವು : ಹಾರಂಗಿ ನದಿ ಪಾತ್ರದ ಮಡಿಕೇರಿ, ಹಟ್ಟೆಹೊಳೆ, ಮಾದಾಪುರ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ನದಿಗಳು ಪ್ರವಾಹ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ಮಂಗಳವಾರ ಸಂಜೆ 4ಗಂಟೆಗೆ ಹಾರಂಗಿ ಜಲಾಶಯಕ್ಕೆ ಒಳಹರಿವಿನಲ್ಲಿ ಭಾರಿ ಹೆಚ್ಚಳವಾಗಿದ್ದು ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಇದೇ ಮೊದಲ ಬಾರಿಗೆ 50 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿದು ಬಿಡಲಾಯಿತು. ಪರಿಣಾಮ ಹಾರಂಗಿ ಜಲಾ ಶಯದ ಕೆಳ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ನದಿಪಾತ್ರ ವ್ಯಾಪ್ತಿಯ ಕೂಡಿಗೆ, ಕಣಿವೆ, ತೊರೆನೂರು, ಮತ್ತಿತ್ತರ ಕಡೆಗಳಲ್ಲಿ ನದಿ ನೀರು ಹರಿದು ಪ್ರವಾಹ ಸ್ಥಿತಿ ನಿರ್ಮಾಣವಾಯಿತು. ತಗ್ಗು ಪ್ರದೇಶಗಳ ಮನೆಗಳಿಗೂ ನೀರು ನುಗ್ಗಿರುವ ಬಗ್ಗೆಯೂ ವರದಿಯಾಗದೆ.

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ಯಲ್ಲಿ ಸೋಮ ವಾರ ಬೆಳಿಗ್ಗೆ ಬರೆ ಕುಸಿತ ಸಂಭವಿಸಿದ್ದು, ಮಂಗಳವಾರ ಸಂಜೆಯ ವರೆಗೂ ತೆರವು ಕಾರ್ಯ ನಡೆಸಿದರೂ, ಪ್ರಯೋಜನವಾಗಲಿಲ್ಲ. ಬರೆ ಕುಸಿದ ಸ್ಥಳದಿಂದ ಮಣ್ಣನ್ನು ತೆರವುಗೊಳಿಸಿದಷ್ಟೂ ಮಣ್ಣು ಹೆದ್ದಾರಿಗೆ ಬೀಳುತ್ತಿದ್ದು, ಹೆದ್ದಾರಿ ಸಂಚಾರ ಸುಗಮಗೊಳಿಸುವುದು ದುಸ್ಥರವಾಗಿ ಪರಿಣಮಿಸಿದೆ. ಬಿರುಸಿನ ಮಳೆಯಿಂದ ಕಾರ್ಯಾಚರಣೆಗೆ ಅಡ್ಡಿಯಾ ಗುತ್ತಿದ್ದು, ಬರೆ ಕುಸಿತದಿಂದ ಹೆದ್ದಾರಿಯನ್ನು ಮುಕ್ತಗೊಳಿಸಲು ಮತ್ತಷ್ಟು ಸಮಯ ಹಿಡಿಯಲಿದೆ. ಈ ನಡುವೆ ಕೊಯನಾಡು ಬಳಿ ಹೆದ್ದಾರಿಯ ನಡುವೆ ಭಾರಿ ಬಿರುಕು ಮೂಡಿದ್ದು, ಹೆದ್ದಾರಿ ಕುಸಿಯುವ ಭೀತಿ ತಲೆದೋರಿದೆ. ಅಂತರ್ಜಲ ಏರಿಕೆಯಿಂದಾಗಿ ಬಿರುಕು ಕಂಡು ಬಂದಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಒಟ್ಟಿನಲ್ಲಿ ಆಶ್ಲೇಷ ಮಳೆಯ ಆರ್ಭಟಕ್ಕೆ ಕೊಡಗು ಜಿಲ್ಲೆ ಸಂಪೂರ್ಣ ತತ್ತರಿಸಿದ್ದು, ಜಲ ಪ್ರಳಯದ ಪರಿಸ್ಥಿತಿ ಎದುರಿಸುತ್ತಿದೆ. ಈ ಹಿಂದೆ 329 ಕೋಟಿ ರೂ. ಮಳೆಹಾನಿಯಾಗಿರುವ ಬಗ್ಗೆ ಜಿಲ್ಲಾಡಳಿತ ವರದಿ ಸಿದ್ದಪಡಿಸಿತ್ತಾದರೂ ಈ ಪ್ರಮಾಣ 500ಕೋಟಿಯನ್ನು ಮೀರಿಸುವ ಎಲ್ಲಾ ಸಾಧ್ಯತೆ ಕಂಡು ಬರುತ್ತಿದೆ.

Translate »