ಕಬಿನಿ, ಕೆಆರ್‍ಎಸ್‍ನಿಂದ ಹೆಚ್ಚು ನೀರು ಬಿಡುಗಡೆ: ಮುನ್ನೆಚ್ಚರಿಕೆ ವಹಿಸಲು ಡಿಸಿ ಮನವಿ 
ಚಾಮರಾಜನಗರ

ಕಬಿನಿ, ಕೆಆರ್‍ಎಸ್‍ನಿಂದ ಹೆಚ್ಚು ನೀರು ಬಿಡುಗಡೆ: ಮುನ್ನೆಚ್ಚರಿಕೆ ವಹಿಸಲು ಡಿಸಿ ಮನವಿ 

August 15, 2018

ಚಾಮರಾಜನಗರ:  ಕಬಿನಿ ಜಲಾಶಯ ಹಾಗೂ ಕೆ.ಆರ್.ಎಸ್. ಅಣೆಕಟ್ಟೆಯಿಂದ ಹೆಚ್ಚು ನೀರನ್ನು ನದಿಗೆ ಬಿಡುತ್ತಿರುವ ಹಿನ್ನಲೆಯಲ್ಲಿ ಕೊಳ್ಳೆಗಾಲ ತಾಲೂಕಿನ ನದಿ ಪಾತ್ರದಲ್ಲಿರುವ ಜನರು ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದ್ದಾರೆ.

ಕಬಿನಿ ಜಲಾಶಯದಿಂದ 40 ಸಾವಿರ ಕ್ಯೂಸೆಕ್, ಕೆಆರ್‍ಎಸ್ ಅಣೆ ಕಟ್ಟೆಯಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಳೆಯು ಅಧಿಕವಾಗುತ್ತಿರುವುದರಿಂದ ಕೆಆರ್‍ಎಸ್ ಅಣೆಕಟ್ಟೆಯಿಂದ ಇನ್ನು ಹೆಚ್ಚಿನ ನೀರನ್ನು ಬಿಡುವ ಸಾಧ್ಯತೆ ಇರುವುದಾಗಿ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಕೊಳ್ಳೇ ಗಾಲ ತಾಲೂಕಿನ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಮತ್ತು ದಂಡೆಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಆಸ್ತಿ-ಪಾಸ್ತಿ, ಜಾನುವಾರುಗಳ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನದಿಗಳಲ್ಲಿ ಬಟ್ಟೆ ಒಗೆಯುವುದು, ಸ್ನಾನ ಮಾಡುವುದು, ಜಾನುವಾರು ತೊಳೆಯುವುದು, ಈಜು ಇನ್ನಿತರ ಚಟುವಟಿಕೆಗಳನ್ನು ಮಾಡಬಾರದು. ನದಿ, ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ನದಿಗೆ ಇಳಿಯಬಾರದು. ಪ್ರವಾಹದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತೆ ವಹಿಸಲು ಆಗಮಿಸುವ ಅಧಿಕಾರಿ, ಸಿಬ್ಬಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದ್ದಾರೆ.

Translate »