ರೈತರಿಗೆ ಬೆಳೆ ಪರಿಹಾರ ನೀಡುವಾಗ ಮಾನವೀಯತೆ ಮೆರೆಯಿರಿ
ಮೈಸೂರು

ರೈತರಿಗೆ ಬೆಳೆ ಪರಿಹಾರ ನೀಡುವಾಗ ಮಾನವೀಯತೆ ಮೆರೆಯಿರಿ

June 19, 2018
  • ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸಲಹೆ
  • ಮೈಸೂರು, ಮಂಡ್ಯ, ಚಾ.ನಗರ ಜಿಲ್ಲೆಯ ಮಳೆ ಬೆಳೆ ಪರಿಸ್ಥಿತಿ ಅವಲೋಕನ

ಮೈಸೂರು: ರೈತರಿಗೆ ಬೆಳೆ ಪರಿಹಾರ ನೀಡುವ ವಿಷಯದಲ್ಲಿ ಅಧಿಕಾರಿಗಳು ಜಿಗುಟುತನ ತೋರಬೇಡಿ. ಬದಲಾಗಿ ಸ್ವಲ್ಪ ಉದಾರತೆ, ಮಾನವೀಯತೆ ಇಟ್ಟುಕೊಂಡು ಕೆಲಸ ಮಾಡುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂದಾಯ ಮತ್ತು ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ `ಮಳೆ-ಬೆಳೆ ಪರಿಸ್ಥಿತಿ, ಮಳೆ ಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ’ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಕೃತಿ ವಿಕೋಪಕ್ಕೆ ಗುರಿಯಾದ ಸ್ಥಳಗಳಿಗೆ ಜಿಲ್ಲಾ ಹಂತದ ಅಧಿಕಾರಿಗಳು ಖುದ್ದು ಸ್ಥಳಕ್ಕೆ ತೆರಳಿ, ಪರಿಸ್ಥಿತಿ ಅವಲೋಕಿಸಬೇಕು. ನಂತರ ರೈತರ ಬೆಳೆ ನಷ್ಟ, ಮಳೆ ಹಾನಿಯಿಂದ ಸಾರ್ವಜನಿಕ ಇನ್ನಿತರೆ ಆಸ್ತಿ-ಪಾಸ್ತಿಗಳಿಗಾದ ನಷ್ಠ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ನೈಜ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಮಳೆ ಹಾನಿಯಿಂದ ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ವಿತರಿಸುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮಾನವೀಯತೆ ಇರಬೇಕು. ಇಲ್ಲಿ ನೀತಿ-ನಿಯಮಗಳೇ ಮೇಲುಗೈ ಸಾಧಿಸಬಾರದು. ಇಂತಹ ಸಂದರ್ಭದಲ್ಲಿ ಸ್ವಲ್ಪ ವಿವೇಚನೆ ಉಪಯೋಗಿಸಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮೈಸೂರು ಜಿಲ್ಲೆಯಲ್ಲಿ 2 ಜೀವಹಾನಿ, 12 ಜಾನುವಾರು, 278 ಮನೆಗಳಿಗೆ ಹಾನಿ, 325.13 ಎಕರೆಯಲ್ಲಿ ರೈತರ ಬೆಳೆಗಳಿಗೆ ಹಾನಿಯಾಗಿದೆ. ಇಲ್ಲಿಯವರೆಗೆ ಒಟ್ಟು 21.65 ಲಕ್ಷ ರೂ.ಗಳ ಪರಿಹಾರ ಮೊತ್ತ ವಿತರಿಸಲಾಗಿದೆ. ಉಳಿದ ಪರಿಹಾರವನ್ನು ಅತೀ ಶೀಘ್ರದಲ್ಲಿ ವಿತರಿಸಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಎಸ್.ಶಂಕರ್ ಸಭೆಗೆ ವಿವರಿಸಿದರು.

ಮಂಡ್ಯ ಜಿಲ್ಲೆಯಲ್ಲಿ 6 ಜೀವಹಾನಿ, 13 ಜಾನುವಾರು, 326 ಮನೆಗಳಿಗೆ ಹಾನಿ ಹಾಗೂ 111.57 ಕಿ.ಮೀ ರಸ್ತೆ ದುರಸ್ತಿ, ಒಂದು ಸೇತುವೆ, 538 ವಿದ್ಯುತ್ ಇಲಾಖೆಯ ಪರಿಕರಗಳಿಗೆ ಹಾನಿಯಾಗಿದೆ.ಇಲ್ಲಿಯವರೆಗೆ ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥ ಕುಟುಂಬಗಳಿಗೆ ಒಟ್ಟು 34.18 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಗಿದೆ. ಇನ್ನುಳಿದ ಪರಿಹಾರವನ್ನು ಅತೀ ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಸಭೆಗೆ ಮಾಹಿತಿ ನೀಡಿದರು.

ಚಾಮರಾಜನಗರದಲ್ಲಿ 02 ಜೀವಹಾನಿ, 03 ಜಾನುವಾರು, 90 ಮನೆಗಳಿಗೆ ಹಾನಿಯಾಗಿದ್ದು, ಇದಕ್ಕೆ ಪರಿಹಾರದ ಮೊತ್ತವಾಗಿ ಒಟ್ಟು 8.61 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಸಭೆಗೆ ಮಾಹಿತಿ ನೀಡಿದರು.

ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಮಾತು ಮುಂದುವರೆಸಿದ ಸಚಿವರು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಿಂದ ಯಾವುದೇ ರೀತಿಯ ಅನಾಹುತ ಸಂಭವಿಸಿದರೂ ಕಂದಾಯ, ಪೊಲೀಸ್ ಹಾಗೂ ಕೃಷಿ ಇಲಾಖಾ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಸಂಕಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸಬೇಕು. ಇಂಥ ಸಂದರ್ಭದಲ್ಲಿ ಪರಿಸ್ಥಿತಿ ಬಗ್ಗೆ ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ರಜೆ ತೆಗೆದುಕೊಳ್ಳುವಂತಿಲ್ಲ:ಮುಂದಿನ ತಿಂಗಳು ನೂತನ ಸರ್ಕಾರದ ಬಜೆಟ್ ಮಂಡನೆಯಾಗುತ್ತಿರುವುದರಿಂದ ಸಂಬಂಧಿತ ಜಿಲ್ಲಾ ಹಂತದ ಅಧಿಕಾರಿಗಳು ದಿನದ 24 ಗಂಟೆ ಕೇಂದ್ರ ಸ್ಥಾನದಲ್ಲಿದ್ದು, ಸರ್ಕಾರಕ್ಕೆ ಬೇಕಾದ ಮಾಹಿತಿಯನ್ನು ಕಾಲಕಾಲಕ್ಕೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಜಿಲ್ಲಾ ಹಂತದ ಅಧಿಕಾರಿಗಳು ಬಜೆಟ್ ಮಂಡನೆಯಾಗುವವರೆಗೂ ಅನಿವಾರ್ಯ ಸಂದರ್ಭ ಹೊರತು ಪಡಿಸಿ ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಸಚಿವರು ತಾಕೀತು ಮಾಡಿದರು.

ಅಧಿಕಾರಿಗಳ ಕಾರ್ಯ ವೈಖರಿಗೆ ಶಾಸಕರ ಬೇಸರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಕ್ಷೇತ್ರದಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹನೂರು ಶಾಸಕ ಆರ್.ನರೇಂದ್ರ ಉದಾಹರಣೆ ಸಹಿತ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್, ಗುಂಡ್ಲುಪೇಟೆ ಶಾಸಕ ನಿರಂಜನ್‍ಕುಮಾರ್ ದನಿಗೂಡಿಸಿದರು. ಶಾಸಕರ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ ಚೆಸ್ಕಾಂ ಅಧಿಕಾರಿಗಳು, ಇನ್ನೊಂದು ವಾರದಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಸಭೆಗೆ ಭರವಸೆ ನೀಡಿದರು.

ನಾಗಮಂಗಲ ಶಾಸಕ ಸುರೇಶ್ ಗೌಡ ಮಾತನಾಡಿ, ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕೊರತೆಯಿದೆ. ಮಳೆ ಬಂದಾಗ ಹಳ್ಳಿಗಳಲ್ಲಿ ಟಿಸಿ ಸುಟ್ಟು ಹೋದರೆ, ಈ ಬಗ್ಗೆ ಚೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ವತಃ ನಾನೇ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ನಾಗಮಂಗಲ ತಾಲೂಕಿನ ಚೆಸ್ಕಾಂ ಅಧಿಕಾರಿಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.

ಕಾವೇರಿ ನದಿ ತೀರದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದೆ. ಆದರೂ ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳ ಕೆರೆಗಳು ತುಂಬಿಲ್ಲ. ಪ್ರವಾಹ ಸಂದರ್ಭದಲ್ಲಿ ನದಿ ತೀರದ ಕೆರೆಗಳನ್ನು ತುಂಬಿಸುವ ಕೆಲಸವಾಗಬೇಕು. ಇದರ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಜೂನ್ ಮಾಹೆಯಾನ ತಮಿಳುನಾಡಿಗೆ 9 ಟಿಎಂಸಿಗೂ ಅಧಿಕ ನೀರು ಹರಿಸಬೇಕಾಗಿರುವುದರಿಂದ ಇಲ್ಲಿನ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಸಬೂಬು ಹೇಳಿ, ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಪಟ್ಟು ಬಿಡದ ಪರಿಷತ್ ಸದಸ್ಯ ಕೆಟಿಎಸ್, ನದಿ ಪಾತ್ರದಲ್ಲಿ ಪ್ರವಾಹ ಬಂದಾಗ ನಮ್ಮ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಯಾವುದೇ ಕಾನೂನು ಅಡ್ಡ ಬರುವುದಿಲ್ಲ. ಮೊದಲು ನಮ್ಮ ರೈತರ ಹಿತ ಕಾಪಾಡುವ ಇಚ್ಛಾಶಕ್ತಿ ಅಧಿಕಾರಿಗಳಿಗಿರಬೇಕು ಎಂದು ತರಾಟೆಗೆ ತೆಗೆದುಕೊಂಡರು. ಈ ಮಾತಿಗೆ ವೇದಿಕೆಯಲ್ಲಿದ್ದ ಬಹುತೇಕ ಶಾಸಕರು ಬೆಂಬಲಿಸಿದರು.
ಸಭೆಯಲ್ಲಿ ಶಾಸಕರಾದ ಅಡಗೂರು ಎಚ್.ವಿಶ್ವನಾಥ್, ಅಶ್ವಿನ್‍ಕುಮಾರ್, ಅನಿಲ್ ಚಿಕ್ಕಮಾದು, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಇತರರಿದ್ದರು.

Translate »