ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ, ರಸ್ತೆ-ರೈಲು ಸಂಚಾರ ಸ್ಥಗಿತ
ಹಾಸನ

ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ, ರಸ್ತೆ-ರೈಲು ಸಂಚಾರ ಸ್ಥಗಿತ

August 15, 2018

ಹಾಸನ: ಜಿಲ್ಲೆಯ ಹಲವೆಡೆ ಎಡಬಿಡದೆ ಧಾರಾಕಾರ ಸುರಿಯು ತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುಡ್ಡ ಕುಸಿದು ರಸ್ತೆ-ರೈಲು ಸಂಚಾರ ಸ್ಥಗಿತವಾಗಿದೆ. ವಿವಿಧೆಡೆ ಮನೆ, ಮರಗಳು, ವಿದ್ಯುತ್ ಕಂಬಗಳು ಧರೆಗುರಿಳಿವೆ.

ಶಿರಾಡಿಘಾಟ್‍ನ ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿದಿದ್ದು, ವಾಹನ ಸಂಚಾರ ರದ್ದುಗೊಳಿಸಲಾಗಿದೆ. ಯಡಕುಮರಿ ಮತ್ತು ಶಿರವಾಗಿಲು 73ನೇ ಮೈಲಿಯ ರೈಲ್ವೇ ಹಳಿ ಮೇಲೂ ಗುಡ್ಡ ಕುಸಿದ ಪರಿಣಾಮ ರೈಲು ಸಂಚಾರ ಸ್ಥಗಿತ ಗೊಳಿಸಲಾಗಿದ್ದು, ಮಣ್ಣು ತೆರವುಗೊಳಿಸುವಲ್ಲಿ ರೈಲ್ವೇ ಇಲಾಖಾ ಸಿಬ್ಬಂದಿ ನಿರತರಾಗಿದ್ದಾರೆ. ಇದರಿಂದ ಮಂಗಳೂರು-ಬೆಂಗಳೂರು ನಡುವೆ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಪ್ರಯಾಣಿಕರಿಗೆ ಕೆಎಸ್‍ಆರ್‍ಟಿಸಿ ಬಸ್ ಮೂಲಕ ರೈಲ್ವೇ ಇಲಾಖೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.

ಭಾರೀ ಮಳೆಗೆ ಸಕಲೇಶಪುರ ತಾಲೂಕಿನ ಬೆಳಗೋಡು ಸಮೀಪದ ಚಿಕ್ಕನಾಯಕನ ಹಳ್ಳಿಯಲ್ಲಿ ಮನೆಗೋಡೆ ಹಾಗೂ ಮೇಲ್ಛಾವಣಿ ಕುಸಿದಿದೆ. ಸಂತ್ರಸ್ತರಿಗೆ ತಾಲೂಕು ಆಡಳಿತ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿದೆ. ನಿರಂತರ ಮಳೆಗೆ ಹೇಮಾವತಿ ನದಿಯಲ್ಲಿ ಒಳಹರಿವು ಹೆಚ್ಚಿದ್ದು, ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ವಿವಿಧೆಡೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಡೆಬಿಡದೆ ಸುರಿಯತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಜಿಲ್ಲೆಯ ಜನತೆ ಹೈರಾಣಾಗಿದ್ದಾರೆ.

Translate »