ನಗರಸಭೆ ಪೌರಕಾರ್ಮಿಕರ ಪ್ರತಿಭಟನೆ
ಹಾಸನ

ನಗರಸಭೆ ಪೌರಕಾರ್ಮಿಕರ ಪ್ರತಿಭಟನೆ

August 15, 2018

ಹಾಸನ: ಕಿರುಕುಳ ನೀಡುತ್ತಿರುವ ನಗರಸಭೆ ಆರೋಗ್ಯ ನಿರೀಕ್ಷಕ ಸ್ಟೀಫನ್ ಪ್ರಕಾಶ್ ರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ನಗರಸಭೆ ಪೌರ ಕಾರ್ಮಿಕರು ಕರ್ತವ್ಯ ಬಹಿಷ್ಕರಿಸಿ ನಗರಸಭೆ ಆವರಣದಲ್ಲಿಂದು ದಿಢೀರ್ ಪ್ರತಿಭಟನೆ ನಡೆಸಿದರು.

ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ನೇತೃತ್ವದಲ್ಲಿ ಪ್ರತಿಭಟಿಸಿದ ಪೌರ ಕಾರ್ಮಿಕರು ಸ್ಟೀಫನ್ ಪ್ರಕಾಶ್ ವಿರುದ್ಧ ಘೋಷಣೆ ಕೂಗಿ ಅವರನ್ನು ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ, ಸ್ಥಳಕ್ಕೆ ಆಯುಕ್ತರು ಬರಬೇಕೆಂದು ಪಟ್ಟು ಹಿಡಿದದರು.

ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತ ಬಿ.ಎ. ಪರಮೇಶ್ ಪ್ರತಿಭಟನಕಾರರ ಸಮಸ್ಯೆ ಆಲಿಸಿ, ಸ್ಟೀಫನ್ ಪ್ರಕಾಶ್‍ರನ್ನು ಪೌರ ಕಾರ್ಮಿಕರ ಉಸ್ತು ವಾರಿಯಿಂದ ನಿಯುಕ್ತಿಗೊಳಿಸಿ, ಕಚೇರಿ ಕೆಲಸಕ್ಕೆ ನಿಯೋಜಿಸುತ್ತಿರುವುದಾಗಿ ಭರವಸೆ ನೀಡಿದರು.
ಈ ವೇಳೆ ಪ್ರತಿಭಟನಾಕಾರರು ಸ್ಟಿಫನ್ ಪ್ರಕಾಶ್ ರನ್ನು ನಗರಸಭೆ ಯಿಂದಲೇ ವರ್ಗಾವಣೆ ಮಾಡ ಬೇಕು ಅಲ್ಲಿಯವರೆಗೆ ಕರ್ತವ್ಯಕ್ಕೆ ಹಾಜರಾಗು ವುದಿಲ್ಲ ಎಂದು ಪ್ರತಿಭಟನೆ ಮುಂದುವರೆಸಿದರು. ಇದರಿಂದ ವಾಗ್ವಾದ ಏರ್ಪಟ್ಟಿತು.

ವರ್ಗಾವಣೆ ಮಾಡುವ ಅಧಿಕಾರ ನಮಗಿಲ್ಲ ಎಂದು ಪರಮೇಶ್ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಕದಸಂಸ (ಭೀಮವಾದ) ರಾಜ್ಯ ಸಂಘಟನಾ ಸಂಚಾಲಕ ನಾಗರಾಜ್ ಹೆತ್ತೂರು, ಗೌರವ ಸಲಹೆಗಾರ ವಿಮಲ್ ಕುಮಾರ್ ಶೀಗೋಡು, ಸಂಘದ ಅಧ್ಯಕ್ಷ ಲೋಕೇಶ್, ಮಾರ, ನಲ್ಲಪ್ಪ, ಮುನಿಯಪ್ಪ, ಬಾಬು, ನರಸಿಂಹ, ದೇವರಾಜು, ಶಿವಸ್ವಾಮಿ, ನಾಗಭೂಷಣ ಮುಂತಾದವರಿದ್ದರು.

Translate »