ಟ್ರೇಡ್ ಲೈಸನ್ಸ್ ಪಡೆಯದ ಮೈಸೂರು ನಗರ ಬಸ್ ನಿಲ್ದಾಣದ 22 ಅಂಗಡಿಗಳಿಗೆ ಬೀಗ
ಮೈಸೂರು

ಟ್ರೇಡ್ ಲೈಸನ್ಸ್ ಪಡೆಯದ ಮೈಸೂರು ನಗರ ಬಸ್ ನಿಲ್ದಾಣದ 22 ಅಂಗಡಿಗಳಿಗೆ ಬೀಗ

July 7, 2018

ಮೈಸೂರು: ಉದ್ದಿಮೆ ಪರವಾನಗಿ ಪಡೆಯದೆ ವ್ಯಾಪಾರ ಮಾಡುತ್ತಿದ್ದ ಮೈಸೂರು ನಗರ ಬಸ್ ನಿಲ್ದಾಣದ 22 ಅಂಗಡಿಗಳಿಗೆ ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಇಂದು ಬೀಗ ಮುದ್ರೆ ಮಾಡಿದ್ದಾರೆ.

ಸಮಿತಿ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ಸದಸ್ಯರುಗಳಾದ ಪುರುಷೋತ್ತಮ, ರಜನಿ ಅಣ್ಣಯ್ಯ, ಬಿ.ವಿ.ಮಂಜುನಾಥ, ಹಿರಿಯ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಅವರ ನೇತೃತ್ವದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದಾಗ ಸಿಟಿ ಬಸ್ ಸ್ಟ್ಯಾಂಡಿನ 22 ಅಂಗಡಿ ಮಾಲೀಕರು ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ಪಡೆಯದಿರುವುದು ಕಂಡುಬಂದಿತು. ಅಂತಹ ಅಂಗಡಿಗಳ ಬಾಗಿಲು ಬಂದ್ ಮಾಡಿಸಿದ ಅಧಿಕಾರಿಗಳು, ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2.30 ಗಂಟೆವರೆಗೂ ಕಾರ್ಯಾಚರಣೆ ನಡೆಸಿ ಅಭಯ ತಂಡದ ಸಿಬ್ಬಂದಿ ನೆರವಿನಿಂದ ಬೀಗ ಮುದ್ರೆ ಮಾಡಿಸಿದರು.

ವಲಯ-1ರ ಅಸಿಸ್ಟೆಂಟ್ ಕಮೀಷ್ನರ್ ಸುನಿಲ್‍ಬಾಬು, ಪರಿಸರ ಇಂಜಿನಿಯರ್ ಪೂರ್ಣಿಮಾ, ಆರೋಗ್ಯ ನಿರೀಕ್ಷಕರಾದ ಪ್ರವಿಣ್, ಮಂಜು ಕುಮಾರ್, ಅಶೋಕ್ ಹಾಗೂ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.

Translate »