ಬ್ರಾಹ್ಮಣ ಧರ್ಮ ಸಹಾಯ ಸಭಾದಿಂದ ಶಾಸಕ ರಾಮದಾಸರಿಗೆ ಅಭಿನಂದನೆ
ಮೈಸೂರು

ಬ್ರಾಹ್ಮಣ ಧರ್ಮ ಸಹಾಯ ಸಭಾದಿಂದ ಶಾಸಕ ರಾಮದಾಸರಿಗೆ ಅಭಿನಂದನೆ

July 7, 2018

ಮೈಸೂರು:  ಬ್ರಾಹ್ಮಣ ಧರ್ಮ ಸಹಾಯ ಸಭಾ ವತಿಯಿಂದ ಕೃಷ್ಣರಾಜ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್.ಎ.ರಾಮದಾಸ್ ಅವರನ್ನು ಅಭಿನಂದಿಸಲಾಯಿತು.ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಕಲ್ಯಾಣ ಭವನದಲ್ಲಿ ಶುಕ್ರವಾರ ಇಳೈ ಆಳ್ವಾರ್ ಸ್ವಾಮೀಜಿ ಸಾನಿದ್ಯದಲ್ಲಿ ನಡೆದ ಸಮಾರಂಭದಲ್ಲಿ ಬ್ರಾಹ್ಮಣ ಧರ್ಮ ಸಹಾಯ ಸಭಾ ಸೇರಿದಂತೆ ವಿವಿಧ ವಿಪ್ರ ಸಂಘ ಸಂಸ್ಥೆಗಳು, ಶಾಸಕ ರಾಮದಾಸ್ ಅವರನ್ನು ಅಭಿನಂದಿಸಿದವು.

ಬಳಿಕ ಮಾತನಾಡಿದ ಎಸ್.ಎ.ರಾಮದಾಸ್, ನಾನು ಅಭಿನಂದನೆ ಸ್ವೀಕರಿಸಲೆಂದು ಬಂದಿಲ್ಲ. ಚುನಾವಣೆ ಪೂರ್ವದಲ್ಲೇ ನನ್ನನ್ನು ನಿಮ್ಮ ಮಗನೆಂದು ಭಾವಿಸಿ, ಹರಸಿದ ನಿಮ್ಮನ್ನೆಲ್ಲಾ ಕಂಡು, ಆಶೀರ್ವಾದ ಪಡೆಯಲು ಬಂದಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಹಿತೈಷಿಯೊಬ್ಬರು, ಮತ ಕೇಳಲು ಹೋದಾಗ ಬ್ರಾಹ್ಮಣರಿಗಾಗಿ ರಾಮದಾಸ್ ಅವರು ಏನು ಮಾಡಿದ್ದಾರೆಂದು? ಪ್ರಶ್ನಿಸುತ್ತಿದ್ದಾರೆ. ದಯಮಾಡಿ ಹೇಳಿ ಎಂದು ಕೇಳಿದ್ದರು. ಆಗ ನಾನು, ಮಾಡಿರುವುದನ್ನು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಕೇವಲ ಮತಕ್ಕಾಗಿ ನಾನು ಮಾಡಿದ ಕೆಲಸಗಳನ್ನು ಎಣಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದೆ. ಆದರೂ ವಿಪ್ರ ಸಮುದಾಯದ 826 ಬಡ ಕುಟುಂಬಗಳಿಗೆ ಆಶ್ರಯ ಮನೆ ನೀಡಿರುವುದನ್ನು ತಿಳಿದುಕೊಂಡಿದ್ದರು ಎಂದು ಸ್ಮರಿಸಿಕೊಂಡರು.

ರಾಜ್ಯ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಒಟ್ಟು 128 ಶಾಸಕರಿದ್ದ ಸಂದರ್ಭದಲ್ಲಿ 32 ವಿಪ್ರರು ಆಯ್ಕೆಯಾಗಿದ್ದರು. 2013ರ ಚುನಾವಣೆಯಲ್ಲಿ 224ರಲ್ಲಿ ಕೇವಲ 9 ಮಂದಿ ವಿಪ್ರರಿದ್ದರು. ಸದ್ಯ ಈ ಬಾರಿ 12 ಮಂದಿ ಆಯ್ಕೆಯಾಗಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವ ವಿಪ್ರ ಶಾಸಕರಲ್ಲಿ ನಾನೇ ಮೊದಲಿಗ. ಕೆ.ಆರ್.ಕ್ಷೇತ್ರದಲ್ಲಿ ಹೆಚ್ಚು ವಿಪ್ರರು ವಾಸಿಸುವ ಪ್ರದೇಶಗಳಲ್ಲಿ ಕಳೆದ ಚುನಾವಣೆಯಲ್ಲಿ ಕೇವಲ ಶೇ.26ರಷ್ಟು ಮತದಾನವಾಗಿತ್ತು. ಆದರೆ ಈ ಬಾರಿ ಶೇ.60ಕ್ಕೂ ಹೆಚ್ಚು ಮತದಾನವಾಗಿದೆ. ಈ ಆಧಾರದಲ್ಲೇ ಮತದಾನದ ದಿನದಂದು ಕರೆ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರು ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ, ನಾನು 25ರಿಂದ 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದು ನಿಶ್ಚಿತ ಎಂದು ಹೇಳಿಕೊಂಡಿದ್ದೆ ಎಂದು ರಾಮದಾಸ್ ತಿಳಿಸಿದರು.

ನನ್ನ ರಾಜಕೀಯ ಜೀವನದಲ್ಲಿ ಕಳೆದ ಚುನಾವಣೆಯಲ್ಲಿ ಎದುರಾದ ಕೆಟ್ಟ ಸಂದರ್ಭ ಎಂದೂ ಬಂದಿರಲಿಲ್ಲ. ಸಮಾಜದ ವಿಚಾರ ಬಂದಾಗ ಎಲ್ಲರೂ ಜಾಗೃತರಾಗಬೇಕು. ಸೋಲು-ಗೆಲುವು ನಂತರದ ವಿಚಾರ. ಮೊದಲು ಪ್ರಯತ್ನಕ್ಕೆ ಪ್ರೋತ್ಸಾಹಿಸಬೇಕು. ನಾನು ನೋವಿನಲ್ಲಿದ್ದಾಗ, ಕೇವಲ ರಾಮದಾಸ್ ಆಗಿದ್ದಾಗ ಜೊತೆಗಿದ್ದವರನ್ನು ಎಂದಿಗೂ ಮರೆಯುವುದಿಲ್ಲ. ಇಂದೂ ಸಹ ನನ್ನನ್ನು ರಾಮದಾಸ್ ಆಗಿ ಮಾತ್ರ ಕರೆದು ಆಶೀರ್ವದಿಸಿದ್ದೀರಿ ಎಂದು ತಿಳಿದಿದ್ದೇನೆ. ಅಭಿನಂದಿಸುವ ಮೂಲಕ ಮುಂದಿನ ನನ್ನ ಜವಾಬ್ದಾರಿಯನ್ನೂ ನೆನಪಿಸಿಕೊಟ್ಟಿದ್ದೀರಿ. ನನ್ನ ಸಹಕಾರ ಎಂದೂ ಇರಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಬ್ರಾಹ್ಮಣ ಧರ್ಮ ಸಹಾಯ ಸಭಾ ಅಧ್ಯಕ್ಷ ಎನ್.ಶ್ರೀನಿವಾಸ್ ಮಾತನಾಡಿ, ಸಭಾದ ಕಾರ್ಯಕ್ರಮಗಳಿಗೆ ಸಹಕರಿಸಿದವರನ್ನು ಸ್ಮರಿಸಿಕೊಂಡರಲ್ಲದೆ, ಆಂಧ್ರ ಹಾಗೂ ತೆಲಂಗಾಣ ಮಾದರಿಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ರಚಿಸಿ, ಮುಂಗಡವಾಗಿ 25 ಕೋಟಿ ರೂ. ಅನುದಾನವನ್ನು ಬಜೆಟ್‍ನಲ್ಲಿ ಘೋಷಿಸಿದ್ದಾರೆ. ಜೊತೆಗೆ ಶ್ರೀಮದ್ ಭಗವತ್ಪಾದರಾದ ಶಂಕರಾಚಾರ್ಯರ ಜಯಂತಿಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಚರಿಸುವಂತೆ ಆದೇಶಿಸಿದ್ದಾರೆ. ಹೀಗೆ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಈ ಸಮಾರಂಭದಲ್ಲಿ ಗೌರವಪೂರ್ವಕ ಕೃತಜ್ಞತೆ ಸಲ್ಲಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮುಜರಾಯಿ ತಹಸೀಲ್ದಾರ್ ಯತಿರಾಜ್, ಬ್ರಾಹ್ಮಣ ಧರ್ಮ ಸಹಾಯ ಸಭಾದ ಪದಾಧಿಕಾರಿಗಳಾದ ಎಂ.ಮಂಜುನಾಥ್, ಎನ್.ವೈ.ವಿಶ್ವನಾಥ್, ಡಾ.ಜೆ.ಕಮಲಾರಾಮನ್, ಅನಂತು, ಸತೀಶ್, ಬಾಲಸುಬ್ರಹ್ಮಣ್ಯಂ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »