ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಗೆ 260 ಮಂದಿ ಆಯ್ಕೆ
ಮೈಸೂರು

ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಗೆ 260 ಮಂದಿ ಆಯ್ಕೆ

July 27, 2018

ಮೈಸೂರು: ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಯಡಿ ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಾಲ ಸೌಲಭ್ಯಕ್ಕೆ 260 ಮಂದಿ ಫಲಾನುಭವಿಗಳು ಆಯ್ಕೆಯಾಗಿದ್ದಾರೆ ಎಂದು ಮೈಸೂರಿನ ಜಿಲ್ಲಾ ಕೈಗಾರಿಕಾ ಕೇಂದ್ರ(DIC)ದ ಜಂಟಿ ನಿರ್ದೇಶಕ ಲಿಂಗರಾಜು ಅವರು ತಿಳಿಸಿದ್ದಾರೆ.

ಈ ಯೋಜನೆಗೆ 400ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ ಕೇಂದ್ರದಲ್ಲಿ ಇಂದು ಸಂದರ್ಶನ ನಡೆಸಿ 260ಕ್ಕೂ ಹೆಚ್ಚು ಮಂದಿಯನ್ನು ಆಯ್ಕೆ ಮಾಡಿ ಸಾಲ ಸೌಲಭ್ಯ ನೀಡಲು ಆಯಾ ಬ್ಯಾಂಕುಗಳಿಗೆ ಕಳುಹಿಸಿಕೊಡಲಾಗಿದೆ ಎಂದರು.

ಸಣ್ಣ ಪ್ರಮಾಣದ ಕೈಗಾರಿಕೆ ಆರಂಭಿಸುವವರಿಗೆ 10 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ನೀಡಲಿದ್ದು, ಸಾಮಾನ್ಯ ವರ್ಗದವರಿಗೆ ಶೇ.25ರಷ್ಟು ಹಾಗೂ ಎಸ್ಸಿ-ಎಸ್ಟಿಯವರಿಗೆ ಶೇ.35ರಷ್ಟು ಸಬ್ಸಿಡಿ ವ್ಯವಸ್ಥೆ ಇದೆ ಎಂದ ಅವರು, ಸೇವಾ ಘಟಕ ಆರಂಭಿಸಲು 5 ಲಕ್ಷ ರೂ.ವರೆಗೆ ಬ್ಯಾಂಕುಗಳ ಮೂಲಕ ಸಾಲ ನೀಡಲಾಗುವುದು ಎಂದೂ ತಿಳಿಸಿದರು.

ಕರ್ನಾಟಕ ಗ್ರಾಮ ಮತ್ತು ಖಾದಿ ಕೈಗಾರಿಕಾ ನಿಗಮ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಇನ್ನಿತರ ಏಜೆನ್ಸಿಗಳ ಮೂಲಕ ಸ್ವಂತ ಉದ್ಯೋಗ ಮಾಡುವವರಿಗೆ ಆರ್ಥಿಕ ಸಹಾಯ ನೀಡಿ ಸಬಲರನ್ನಾಗಿಸುವ ಈ ಯೋಜನೆಗೆ ಯುವಕ-ಯುವತಿಯರಿಂದ ಬೇಡಿಕೆ ಬರುತ್ತಿದೆ ಎಂದರು. ನಾಳೆ(ಜು.27) ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಫಲಾನುಭವಿಗಳ ಆಯ್ಕೆಗೆ ಸಂದರ್ಶನ ನಡೆಸಲಾಗುವುದು, 600 ಮಂದಿ ಅದಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

Translate »