ಹತ್ತೂವರೆ ತಿಂಗಳಲ್ಲಿ 3.31 ಕೋಟಿ ದಂಡ ವಸೂಲಿ
ಮೈಸೂರು

ಹತ್ತೂವರೆ ತಿಂಗಳಲ್ಲಿ 3.31 ಕೋಟಿ ದಂಡ ವಸೂಲಿ

November 22, 2018

ಮೈಸೂರು: ಮೈಸೂರಲ್ಲಿ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘನೆ ಸಂಬಂಧ ತಪಾಸಣೆ ತೀವ್ರಗೊಳಿಸಿದ್ದಾರೆ.

ಎಫ್‍ಟಿವಿಆರ್ (ಫೀಲ್ಡ್ ಟ್ರಾಫಿಕ್ ವಯಾಲೇಷನ್ ರಿಪೋರ್ಟ್)ನಡಿ 2018ರ ಜನವರಿ 1ರಿಂದ ನವೆಂಬರ್ 16ರವರೆಗೆ ಸಂಚಾರ ಪೊಲೀಸರ ತಪಾಸಣೆಯಿಂದ ಒಟ್ಟು 3,31,27, 200 ರೂ.ಗಳ ದಂಡ ಸಂಗ್ರಹಿಸಲಾಗಿದೆ. ಸರ್ಕಲ್‍ಗಳು, ಜಂಕ್ಷನ್‍ಗಳು ಹಾಗೂ ಮುಖ್ಯರಸ್ತೆಗಳಲ್ಲಿ ನಿಂತು ಕಾರ್ಯಾ ಚರಣೆ ಮಾಡುವುದನ್ನು ತೀವ್ರಗೊಳಿಸಲಾ ಗಿದ್ದು, ಅದರ ಜೊತೆಗೆ ಮೈಸೂರು ನಗರದಲ್ಲಿ ಅಳವಡಿಸಿರುವ 59 ಸಿಸಿ ಕ್ಯಾಮರಾ ಗಳ ಫುಟೇಜಸ್ ಮೂಲಕವೂ ನಗರ ಪೊಲೀಸ್ ಕಮೀಷ್ನರ್ ಕಚೇರಿ ಆವರಣದಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ (ಟ್ರಾಫಿಕ್ ಮ್ಯಾನೇಜ್‍ಮೆಂಟ್ ಸೆಂಟರ್)ದಲ್ಲೂ ವೀಕ್ಷಿಸಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರ ಹೆಸರಿಗೆ ನೋಟೀಸ್‍ಗಳನ್ನು ಅಂಚೆ ಮೂಲಕ ತಲುಪಿಸಲಾಗುತ್ತಿದೆ.

ಎಫ್‍ಟಿವಿಆರ್ ಮತ್ತು ಸಿಸಿ ಕ್ಯಾಮರಾ ಮೂಲಕ ಸರಾಸರಿ ದಿನಕ್ಕೆ 5 ಸಾವಿರಕ್ಕೂ ಹೆಚ್ಚು ಪ್ರಕರಣ ಗಳನ್ನು ದಾಖಲಿಸಲಾಗುತ್ತಿದೆ. ಅಕ್ಟೋಬರ್ ಮಾಹೆ ಒಂದರ ಅಂಕಿ -ಅಂಶಗಳ ಪ್ರಕಾರ ಎಫ್‍ಟಿವಿಆರ್‍ನಲ್ಲಿ 17,29,900 ರೂ.ಗಳ ದಂಡ ವಿಧಿಸಲಾಗಿದೆ. ಆದರೆ, ಸಿಸಿ ಕ್ಯಾಮರಾ ಗಳ ಮೂಲಕ ನೋಟೀಸ್ ಜಾರಿ ಮಾಡಿ ಸಂಗ್ರಹಿಸಿದ ದಂಡದ ಮೊತ್ತ 43,98,700 ರೂ.ಗಳಾಗಿವೆ. ಈ ಮಾಹಿತಿ ಪ್ರಕಾರ ರಸ್ತೆಗಿಳಿದು ಪೊಲೀಸರು ಕಾರ್ಯಾಚರಣೆ ನಡೆಸಿ ಸಂಗ್ರಹಿಸಿದ ದಂಡದ ಮೊತ್ತಕ್ಕಿಂತ ತಂತ್ರಜ್ಞಾನ ಬಳಸಿ, ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡದೆ ನೋಟೀಸ್ ಜಾರಿ ಮಾಡಿ ಸಂಗ್ರಹಿಸಿದ ದಂಡದ ಮೊತ್ತವೇ ಹೆಚ್ಚಾಗಿದೆ.

ಸಂಚಾರ ಪೊಲೀಸರನ್ನು ಹೆಲ್ಮೆಟ್ ತಪಾಸಣೆಗೆ ನಿಯೋಜಿಸುವುದರಿಂದ ವಾಹನ ಸವಾರರಿಗೆ ಅನಗತ್ಯ ಕಿರಿಕಿರಿ ಉಂಟಾಗುವುದಲ್ಲದೆ, ನಿಂತು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಹಲವರು ಅಪಘಾತ ಮಾಡಿ ತಮ್ಮ ಹಾಗೂ ಇತರರ ಪ್ರಾಣ ಹಾನಿ-ನೋವಿಗೂ ಕಾರಣರಾಗುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಈಗಾಗಲೇ ರಸ್ತೆ, ಜಂಕ್ಷನ್‍ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ಮೂಲಕವೇ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ತಂತ್ರಜ್ಞಾನ ಬಳಸಿ ಪ್ರಕರಣ ದಾಖಲಿಸಿ ನೋಟೀಸ್ ಜಾರಿ ಮೂಲಕ ದಂಡ ಸಂಗ್ರಹಿಸಬಹುದು. ಅದಕ್ಕೆ ಸಂಚಾರ ಪೊಲೀಸರನ್ನು ಬಳಸುವ ಬದಲು ಸುಗಮ ಸಂಚಾರ ವ್ಯವಸ್ಥೆಗೆ ಉಪಯೋಗಿಸ ಬಹುದು ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.

Translate »