ಉಪಹಾರ ಸೇವಿಸಿದ 42 ಮಕ್ಕಳು ಅಸ್ವಸ್ಥ
ಚಾಮರಾಜನಗರ

ಉಪಹಾರ ಸೇವಿಸಿದ 42 ಮಕ್ಕಳು ಅಸ್ವಸ್ಥ

September 9, 2018
  • ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಘಟನೆ
  • ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಚಿವರು, ಸಂಸದರ ಸೂಚನೆ

ಯಳಂದೂರು:  ಬೆಳಗಿನ ಉಪಹಾರ ಸೇವಿಸಿ 42 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಮೆಲ್ಲಹಳ್ಳಿ ಗೇಟ್ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ.

ಶನಿವಾರ ಬೆಳಿಗ್ಗೆ ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಉಪಾ ಹಾರಕ್ಕೆ ತಯಾರಿಸಿದ ಉಪ್ಪಿಟ್ಟು ಮತ್ತು ಕೇಸರಿಬಾತ್ ತಿಂದಿದ್ದಾರೆ. ತಿಂದ ಸ್ವಲ್ಪ ಸಮಯದಲ್ಲಿಯೇ ವಿದ್ಯಾರ್ಥಿಗಳಿಗೆ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಶಿಕ್ಷಕರು ಮಕ್ಕಳನ್ನು ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ದ್ದಾರೆ. ಈ ಪೈಕಿ 10ಜನ ವಿದ್ಯಾರ್ಥಿಗಳನ್ನು ಚಾಮರಾಜನಗರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಕಾರಣವೇನು?: ಶಾಲೆಯಲ್ಲಿ ಅಡುಗೆ ಮಾಡುವ ರೂಪ ಮತ್ತು ನಿಲಯ ಪಾಲಕ ನಾಗರಾಜು ನಡುವೆ ಕುಲಕ್ಷ ಕಾರಣಕ್ಕೆ ಆಗಿಂದಾಗೆ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತಿತ್ತು. ಅದೇ ರೀತಿ ಶನಿವಾರವು ಕೂಡಾ ಕೇಸರಿ ಬಾತ್ ತಯಾರಿಸುವ ವಿಚಾರದಲ್ಲಿ ಗಲಾಟೆ ನಡೆದಿದೆ. ಕೇಸರಿ ಬಾತ್ ಮಾಡಬೇಡ ಉಪ್ಪಿಟು ಮಾಡು ಸಾಕು ನಿಲಯಪಾಲಕರು ಹೇಳಿದರೆ. ಆದರೂ, ಅವರ ಮಾತನ್ನು ಕೇಳದೆ ರೂಪ ಅವರು ಕೇಸರಿ ಬಾತ್ ಮಾಡಿದ್ದಾರೆ. ಇದನ್ನು ಸೇವಿಸಿದ ಮಕ್ಕಳಿಗೆ ವಾಂತಿ ಮತ್ತು ಹೊಟ್ಟೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.

ಸಂಸದರ, ಸಚಿವರ ಭೇಟಿ: ವಿಷಯ ತಿಳಿದ ತಕ್ಷಣ ಆಸ್ಪತ್ರೆಗೆ ಸಂಸದ ಆರ್.ಧ್ರುವನಾರಾಯಣ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಈ ವೇಳೆ ಕೆಲವು ಮಕ್ಕಳು ಅಡುಗೆ ಸಹಾಯಕಿ ರೂಪ ಅವರನ್ನು ಕೆಲಸದಿಂದ ತೆÀಗೆದು ಹಾಕಬೇಕು ಎಂದು ಮನವಿ ಮಾಡಿದರು. ಮಕ್ಕಳ ಮನವಿ ಆಲಿಸಿದ ಸಂಸದ ಧ್ರುವನಾರಾಯಣ ತಕ್ಷಣದಲ್ಲೇ ಅಡುಗೆ ಸಹಾಯಕಿ ರೂಪಾ ಅವರನ್ನು ಕೆಲಸದಿಂದ ವಜಾ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.

ಶಿಕ್ಷಣ ಸಚಿವ ಎನ್.ಮಹೇಶ್ ಆಸ್ಪತ್ರಗೆ ಭೇಟಿ ವಿದ್ಯಾರ್ಥಿ ಗಳು ಆರೋಗ್ಯ ವಿಚಾರಿಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಕಿತ್ತೂರು ರಾಣಿ ಚನ್ನಮ ವಸತಿ ಶಾಲೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ಅವರೊಂದಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್, ತಾಪಂ ಅಧ್ಯಕ್ಷ ನಿರಂಜನ್, ಮುಖಂಡ ರಾದ ವೆಂಕಟೇಶ್, ವೈ.ಕೆ.ಮೋಳೆ ನಾಗರಾಜು, ಬಿಇಓ ತಿರು ಮಲ್ಲಚಾರ್, ಇಓರಾಜು, ಡಾ.ಶ್ರೀಧರ್ ಹಾಜರಿದ್ದರು.

Translate »