ಬೈಕ್‍ಗೆ ಈಚರ್ ವಾಹನ ಡಿಕ್ಕಿ: ಶಿಕ್ಷಕ ಸಾವು
ಚಾಮರಾಜನಗರ

ಬೈಕ್‍ಗೆ ಈಚರ್ ವಾಹನ ಡಿಕ್ಕಿ: ಶಿಕ್ಷಕ ಸಾವು

September 9, 2018

ನೆಚ್ಚಿನ ಶಿಕ್ಷಕನ ಅಗಲಿಕೆಯಿಂದ ಕಣ್ಣೀರಿಟ್ಟ ವಿದ್ಯಾರ್ಥಿಗಳು, ಚಂದಕವಾಡಿಯಲ್ಲಿ ಶಿಕ್ಷಕನ ಅಂತ್ಯಕ್ರಿಯೆ
ಚಾಮರಾಜನಗರ: ಬೈಕ್‍ಗೆ ಈಚರ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸಮೀಪದ ಸೋಮವಾರಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 209ರ ಪಕ್ಕದಲ್ಲಿರುವ ಕ್ಲಬ್‍ನ ಮುಂಭಾಗ ಶನಿವಾರ ಬೆಳಿಗ್ಗೆ ನಡೆದಿದೆ. ರಾಮಸಮುದ್ರದಲ್ಲಿ ವಾಸವಿದ್ದ ಬಿಸಲವಾಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಹೆಚ್.ಎಸ್. ಭೀಮೇಶ್ (40) ಮೃತಪಟ್ಟ ಶಿಕ್ಷಕ.

ಘಟನೆಯ ವಿವರ: ಭೀಮೇಶ್ ಅವರು ಶನಿವಾರವಾಗಿದ್ದ ಕಾರಣ ಮುಂಜಾನೆ ತರಗತಿಗೆ ಚಾಮರಾಜನಗರದಿಂದ ಬಿಸಲವಾಡಿಗೆ ಬೈಕ್‍ನಲ್ಲಿ ತೆರಳುತ್ತಿದ್ದರು. ಸೋಮ ವಾರಪೇಟೆ ಬಳಿಯ ಕ್ಲಬ್ ಮುಂಭಾಗ ಅವರ ಬೈಕ್‍ಗೆ ಹಿಂಬದಿಯಿಂದ ವೇಗವಾಗಿ ಬಂದ ಈಚರ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‍ನಿಂದ ಕೆಳಗೆ ಬಿದ್ದ ಭೀಮೇಶ್ ಅವರ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಸಂಚಾರ ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ದೀಪಕ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ಘಟನೆ ನಡೆಯುತ್ತಿದ್ದಂತೆ ಚಾಲಕ ವಾಹನ ಸಮೇತ ಪರಾರಿಯಾಗಲು ಯತ್ನಿಸಿ ದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ವಾಹನವನ್ನು ಹಿಂಬಾಲಿಸಿಕೊಂಡು ಹೋಗಿ ದ್ದಾರೆ. ಸ್ಥಳೀಯರು ವಾಹನ ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಗಮನಿಸಿದ ಚಾಲಕ ವಾಹನವನ್ನು ಹರದನಹಳ್ಳಿ ಗ್ರಾಮದ ಫಾರಂ ಹೌಸ್ ಬಳಿ ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು. ಸ್ಥಳಕ್ಕೆ ಸಂಚಾರಿ ಠಾಣೆಯ ಇನ್‍ಸ್ಪೆಕ್ಟರ್ ದೀಪಕ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಶವ ರವಾನಿಸಿದರು. ಶವ ಪರೀಕ್ಷೆ ಬಳಿ ಭೀಮೇಶ್ ಅವರ ಪತ್ನಿಯ ಸ್ವಗ್ರಾಮವಾದ ಬಿಸಲವಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ಕಣ್ಣೀರಿಟ್ಟ ವಿದ್ಯಾರ್ಥಿಗಳು: ನೆಚ್ಚಿನ ಶಿಕ್ಷಕನ ಅಗಲಿಕೆಯ ವಿಚಾರ ತಿಳಿದ ಕೂಡಲೇ ಶಾಲೆ ಯಿಂದ ವಿದ್ಯಾರ್ಥಿಗಳು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಶಿಕ್ಷಕ ಭೀಮೇಶ್ ಅವರ ಅಂತಿಮ ದರ್ಶನ ಪಡೆದು, ಕಣ್ಣೀರಿಡುತ್ತಿದ್ದ ದೃಶ್ಯ ನೋಡುಗರ ಮನಕಲ ಕುವಂತಿತ್ತು. ಸಹೋದ್ಯೋಗಿಯ ದೇಹವನ್ನು ನೋಡಿ ಶಿಕ್ಷಕರು ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಿಕ್ಷಣ ಸಚಿವ ಎನ್.ಮಹೇಶ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಶಿಕ್ಷಕ ಭೀಮೇಶ್ ಅವರ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.

Translate »