ಜಂಬೂಸವಾರಿ ವೇಳೆ ಮೊಬೈಲ್ ಕಳವು, ಪಿಕ್ ಪಾಕೆಟ್ವಿವಿಧ ಪೊಲೀಸ್ ಠಾಣೆಗಳಲ್ಲಿ 48 ಪ್ರಕರಣ ದಾಖಲು
ಮೈಸೂರು

ಜಂಬೂಸವಾರಿ ವೇಳೆ ಮೊಬೈಲ್ ಕಳವು, ಪಿಕ್ ಪಾಕೆಟ್ವಿವಿಧ ಪೊಲೀಸ್ ಠಾಣೆಗಳಲ್ಲಿ 48 ಪ್ರಕರಣ ದಾಖಲು

October 10, 2019

ಮೈಸೂರು, ಅ.9(ಆರ್‍ಕೆ)- ಲಕ್ಷಾಂತರ ಮಂದಿ ಸೇರಿದ್ದ ಜಂಬೂಸವಾರಿ ವೇಳೆ ಮೊಬೈಲ್ ಕಳವು ಹಾಗೂ ಪಿಕ್‍ಪಾಕೆಟ್‍ನಂತಹ ಪ್ರಕರಣಗಳು ನಡೆದಿವೆ. ಠಾಣೆಗಳಿಗೆ ಹೋಗಿ ಖುದ್ದಾಗಿ ದೂರು ನೀಡಲು ಸಾಧ್ಯವಾಗದ ಹೊರಗಿನವರು ಮಂಗಳವಾರ ರಾತ್ರಿ ಹಾಗೂ ಇಂದು ಆನ್‍ಲೈನ್ ಮೂಲಕ ದೂರು ದಾಖಲಿಸಿದ್ದಾರೆ. ದೇವರಾಜ ಠಾಣೆಗೆ 25, ಲಷ್ಕರ್ ಠಾಣೆ ವ್ಯಾಪ್ತಿಯಲ್ಲಿ 15, ಮಂಡಿ ಹಾಗೂ ಕೆ.ಆರ್ ಠಾಣೆಗಳಲ್ಲಿ ತಲಾ 8 ಪ್ರಕರಣಗಳು ದಾಖಲಾಗಿವೆ.

ನೂಕು ನುಗ್ಗಲಿನಲ್ಲಿ ಕೆಲವರ ಮೊಬೈಲ್ ಫೋನು ಗಳು ನಾಪತ್ತೆಯಾಗಿದ್ದರೆ ಖದೀಮರು ಕೆಲವರ ಜೇಬಿಗೆ ಕತ್ತರಿ ಹಾಕಿ ಹಣ ಎಗರಿಸಿರುವುದು ವರದಿ ಯಾಗಿದೆ ಎಂದು ದೇವರಾಜ ಉಪ ವಿಭಾಗದ ಎಸಿಪಿ ಎಸ್.ಜಿ.ಗಜೇಂದ್ರ ಪ್ರಸಾದ್ ತಿಳಿಸಿದ್ದಾರೆ. ಆನ್‍ಲೈನ್‍ನಲ್ಲಿ ನೀಡಿರುವ ದೂರುಗಳನ್ನು ಇಂದು ವರ್ಗೀಕರಿಸಿ, ಆಯಾ ವ್ಯಾಪ್ತಿಯ ಪೊಲೀಸ್ ಠಾಣೆ ಗಳ ಇನ್ಸ್‍ಪೆಕ್ಟರ್‍ಗಳು ತನಿಖೆ ನಡೆಸುತ್ತಿದ್ದಾರೆ. ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ಫುಟೇಜ್ ಗಳನ್ನು ಪರಿಶೀಲಿಸಿ ಸುಳಿವಿನ ಜಾಡು ಹಿಡಿದು ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.

ವಿಜಯದಶಮಿ ಮೆರವಣಿಗೆ ವೀಕ್ಷಿಸುವ ವೇಳೆ, ಸಮಯ ಸಾಧಿಸಿ ಖದೀಮರು ಮೊಬೈಲ್, ಪರ್ಸ್ ಎಗರಿಸಿದ್ದರೆ, ಇನ್ನು ಕೆಲವರು ಮೊಬೈಲ್ ಕಳೆದು ಕೊಂಡಿರುವ ಸಾಧ್ಯತೆಗಳಿವೆ. ಆದರೆ ಎಲ್ಲೂ ಖದೀ ಮರ ಹಿಡಿದುಕೊಟ್ಟಿರುವ ಬಗ್ಗೆ ವರದಿಯಾಗಿಲ್ಲ ಎಂದು ಗಜೇಂದ್ರ ಪ್ರಸಾದ್ ತಿಳಿಸಿದರು. ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ, ಆಹಾರ ಮೇಳಗಳಂತಹ ಜನಜಂಗುಳಿ ಇರುವ ಸ್ಥಳಗಳಲ್ಲಿ ಖದೀಮರು ಹೊಂಚು ಹಾಕುತ್ತಿರುತ್ತಾರೆ. ಆದ್ದರಿಂದ ಜನರು ತಮ್ಮ ಮೊಬೈಲ್, ಪರ್ಸ್, ಆಭರಣಗಳ ಮೇಲೆ ನಿಗಾ ಇಟ್ಟು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ, ಸಿಸಿ ಟಿವಿ ಕ್ಯಾಮರಾಗಳು ಇದ್ದಾಗ್ಯೂ, ಖದೀಮರು ಹೊಂಚು ಹಾಕಿ ಕೈ ಚಳಕ ತೋರುತ್ತಾರೆ. ಆದ್ದರಿಂದ ಜನರು ಎಚ್ಚರದಿಂದಿರಬೇಕು ಎಂದು ತಿಳಿಸಿದ್ದಾರೆ.

Translate »