ರಾಮನಾಥಪುರದಲ್ಲಿ ಐವರಿಗೆ ಡೆಂಗ್ಯು
ಹಾಸನ

ರಾಮನಾಥಪುರದಲ್ಲಿ ಐವರಿಗೆ ಡೆಂಗ್ಯು

July 14, 2019

ಸೊಳ್ಳೆ ನಿವಾರಣೆಗೆ ಗ್ರಾಪಂನಿಂದ ಫಾಗಿಂಗ್, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ
ರಾಮನಾಥಪುರ, ಜು.13- ರಾಮನಾಥಪುರದಲ್ಲಿ 5 ಡೆಂಗ್ಯು ಪ್ರಕರಣಗಳು ಪತ್ತೆಯಾಗಿವೆ ಎಂದು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೂಜ್ಯ ತಿಳಿಸಿದ್ದಾರೆ.

ವಾಡಿಕೆಯಷ್ಟು ಮಳೆ ಆಗದಿರುವುದು ಮತ್ತು ತ್ಯಾಜ್ಯದಲ್ಲಿ ಹೆಚ್ಚಳ, ಜನವಸತಿ ಪ್ರದೇಶಗಳಲ್ಲಿ ಕೊಳಚೆನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿಗೆ ಅವಕಾಶ ವಾಗಿರುವುದರಿಂದಲೇ ಡೆಂಗ್ಯು ಜ್ವರದ ಪ್ರಕರಣಗಳು ಹೆಚ್ಚುತ್ತಿರಲು ಮುಖ್ಯ ಕಾರಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟವಾಳು, ಜನತಾ ಕಾಲೋನಿ, ರಘುಪತಿ ಕೊಪ್ಪಲು ಪಟ್ಟಣದ ಎಲ್ಲಾ ಕಡೆಗಳಲ್ಲಿ ಫಾಗಿಂಗ್ ಮಾಡಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ಜನರು ತಮ್ಮ ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿ ಕೊಳ್ಳಬೇಕು. ಸೊಳ್ಳೆಗಳು ಹೆಚ್ಚದಂತೆ ಜಾಗ್ರತೆ ವಹಿಸಬೇಕಿದೆ ಎಂದರು.

ಮುಂಜಾಗ್ರತಾ ಕ್ರಮವಾಗಿ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ತಮ್ಮ ಸೇವಾ ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ಖುದ್ದು ಭೇಟಿ ನೀಡಿ ಜನರಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕಾದ ಅಗತ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಡೆಂಗ್ಯು ಜ್ವರದ ವೈರಾಣುಗಳನ್ನು ಮನುಷ್ಯರಿಗೆ ಹರಡುವ ಈಡೀಸ್ ಸೊಳ್ಳೆಗಳ ಬಗೆಗೂ ತಿಳಿಸಿ ಕೊಡುತ್ತಿದ್ದಾರೆ. ಸೊಳ್ಳೆಗಳಿಂದ ಪಾರಾ ಗಲು ಜನರು ತಾವು ಮಲಗುವ ಸ್ಥಳದಲ್ಲಿ ಸೊಳ್ಳೆಪರದೆ ಬಳಸಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳೇಗೌಡ ಮಾತನಾಡಿ, ಗ್ರಾಪಂನಿಂದ ಘನತ್ಯಾಜ್ಯ ನಿರ್ವಹಣೆ ನಡೆಯುತ್ತಿದೆ. ಜನರು ತಮ್ಮ ಮನೆಯ ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕದೇ ಕಸದ ತೊಟ್ಟಿಗಳಲ್ಲಿ ಹಾಕಬೇಕು. ಗ್ರಾಮದ ಮುಖ್ಯ ಸ್ಥಳಗಳಲ್ಲಿ ಇರಿಸಿದ ಕಸದ ತೊಟ್ಟಿಗಳಲ್ಲಿ, ಮುಖ್ಯರಸ್ತೆಗೆ ಬರುವ ಟ್ಯಾಕ್ಷರ್‍ನಲ್ಲಿ ಹಾಕಬೇಕು ಎಂದು ಮನವಿ ಮಾಡಿದರು.

ಪಿಡಿಒ ವಿಜಯಕುಮಾರ್, ಆರೋಗ್ಯ ನಿರೀಕ್ಷಕ ಲೋಕೇಶ್ ಇದ್ದರು. ಡಾ.ಸ್ವಾಮಿ ಗೌಡ, ಹಿರಿಯ ಆರೋಗ್ಯಾಧಿಕಾರಿ ಚಂದ್ರೇಗೌಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Translate »