ಮೈಸೂರು,ಜ.7(ಎಸ್‍ಬಿಡಿ)- ವ್ಯಕ್ತಿಯೊ ಬ್ಬರ ಗಮನ ಬೇರೆಡೆ ಸೆಳೆದು 50 ಸಾವಿರ ರೂ. ಹಣವಿದ್ದ ಬ್ಯಾಗ್ ಎಗರಿಸಿರುವ ಘಟನೆ ಮೈಸೂರಿನಲ್ಲಿ ಹಾಡಹಗಲೇ ನಡೆದಿದೆ.
ಮೈಸೂರಿನ ಮೇಟಗಳ್ಳಿ ನಿವಾಸಿ ಚಂದ್ರು, ಖದೀಮರ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಸೋಮವಾರ ಸರಸ್ವತಿಪುರಂನಲ್ಲಿರುವ ಎಸ್‍ಬಿಐ ಸಾಲ ತೀರುವಳಿ ಪತ್ರ ಸೃಷ್ಟಿಸಿಕೊಂಡಿದ್ದರು. ಶಾಖೆಯಲ್ಲಿ ಡ್ರಾ ಮಾಡಿಕೊಂಡಿದ್ದ 50 ಸಾವಿರ ರೂ. ಹಣವನ್ನು ಕಪ್ಪು ಬಣ್ಣದ ಬ್ಯಾಗ್‍ನಲ್ಲಿ ಇಟ್ಟುಕೊಂಡು, ತಮ್ಮ ಬೈಕ್(ಕೆಎ-09, ಇಜೆಡ್-4028)ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಅಂದು ಸಂಜೆ 4 ಗಂಟೆ ವೇಳೆಯಲ್ಲಿ ಮಾರ್ಗಮಧ್ಯೆ ಆಕಾಶವಾಣಿ ಸಮೀಪ ಫಾಸ್ಟ್‍ಫುಡ್‍ನಲ್ಲಿ ಊಟ ಪಾರ್ಸಲ್ ತೆಗೆದುಕೊಂಡು, ಸಿಗ್ನಲ್‍ಗಾಗಿ ಕಾದು ನಿಂತಿ ದ್ದಾಗ, ಯಾರೋ ಬೆನ್ನು ಮುಟ್ಟಿದಂತಾಗಿ ಹಿಂದಕ್ಕೆ ತಿರುಗಿದ್ದಾರೆ. ಅಷ್ಟರಲ್ಲಿ ಹಸಿರು ಸಿಗ್ನಲ್ ಸಿಕ್ಕಿದ್ದರಿಂದ ಬೈಕ್ ಚಾಲಿಸಿದ್ದಾರೆ. ಚೆಲುವಾಂಬ ಪಾರ್ಕ್ ಗೇಟ್ ಬಳಿ ಹೋಗುತ್ತಿ ದ್ದಾಗ, ಹಿಂದಿನಿಂದ ಬೈಕ್‍ನಲ್ಲಿ ಬಂದು ಇಬ್ಬರು ಖದೀಮರು, ಚಂದ್ರು ಅವರನ್ನು ಕೂಗಿ ನಿಮ್ಮ ಶರ್ಟ್ ಹಿಂದೆ ಗಲೀಜಾಗಿದೆ ಎಂದು ಹೇಳುತ್ತಾರೆ. ಬೈಕ್ ನಿಲ್ಲಿಸಿದ ಚಂದ್ರು, ಹಣವಿದ್ದ ಬ್ಯಾಗ್ ಅನ್ನು ಬೈಕ್ ಮೇಲಿಟ್ಟು, ಶರ್ಟ್ ಬಿಚ್ಚಿ, ಒರೆಸಿಕೊಳ್ಳುವ ಸಂದರ್ಭ ದಲ್ಲಿ, ಮತ್ತಿಬ್ಬರು ಖದೀಮರು ಬಂದು ರಸ್ತೆ ಯಲ್ಲಿ ನಿಮ್ಮ ಹಣ ಬಿದ್ದಿವೆ ನೋಡಿ ಎಂದು ಹೇಳಿದ್ದಾರೆ. ಸ್ವಲ್ಪ ದೂರದಲ್ಲಿ ಬಿದ್ದಿದ್ದ ಒಂದೆರಡು ನೋಟುಗಳನ್ನು ಚಂದ್ರು ತೆಗೆದುಕೊಂಡು ವಾಪಸ್ಸು ತಮ್ಮ ಬೈಕ್ ಬಳಿ ಬರುವಷ್ಟರಲ್ಲಿ ಹಣ ಹಾಗೂ ಕೆಲ ದಾಖಲೆಗಳಿದ್ದ ಬ್ಯಾಗ್ ನಾಪತ್ತೆಯಾಗಿದೆ. ಚಂದ್ರು ಅವರ ಬ್ಯಾಗ್‍ನಲ್ಲಿ ಹಣವಿ ರುವುದನ್ನು ತಿಳಿದ ನಾಲ್ವರು ಖದೀಮರು, 2 ಬೈಕ್‍ಗಳಲ್ಲಿ ಬಂದು, ಗಮನ ಬೇರೆಡೆಗೆ ಸೆಳೆದು, ಹಣ ದೋಚಿದ್ದಾರೆ.
ಬ್ಯಾಗ್‍ನಲ್ಲಿ 50 ಸಾವಿರ ರೂ. ಹಣದ ಜೊತೆಗೆ ಹೆಚ್‍ಡಿಎಫ್‍ಸಿ ಬ್ಯಾಂಕ್ ಎಟಿಎಂ ಹಾಗೂ ಕ್ರೆಡಿಟ್ ಕಾರ್ಡ್, ಚೆಕ್ ಬುಕ್, ಎಸ್‍ಬಿಐ ಕ್ರೆಡಿಟ್ ಕಾರ್ಡ್ ಗಳಿದ್ದವು. ವಂಚಿಸಿ, ಬ್ಯಾಗ್ ಕದ್ದೊ ಯ್ದಿರುವ ಖದೀಮರನ್ನು ನೋಡಿದರೆ ಗುರುತಿ ಸುತ್ತೇನೆ ಎಂದು ಚಂದ್ರು, ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ವಿ.ವಿ.ಪುರಂ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.