ಕಳೆದ ತಿಂಗಳು ಮಂಗಳೂರು ಆಕಾಶವಾಣಿ ‘ದಾಂಪತ್ಯ ಗೀತೆ’ ಎಂಬ ನನ್ನ ಕವಿತೆಯನ್ನು ತಿಂಗಳ ಹಾಡು ‘ಭಾವಗಾನ’ ಕಾರ್ಯಕ್ರಮ ದಲ್ಲಿ ಪ್ರಸಾರ ಮಾಡಿತು. ಪ್ರತಿ ಶುಕ್ರವಾರ ತಿಂಗಳಲ್ಲಿ ನಾಲ್ಕು ಬಾರಿ ಪ್ರಸಾರ ಮಾಡಿದ ಆಕಾಶವಾಣಿಗೆ ನನ್ನ ಕೃತಜ್ಞತೆಗಳು.
ದಾಂಪತ್ಯ ಪ್ರಾರಂಭವಾಗುವ ಮೊದಲೇ ದಂಪತಿ ದೂರವಾಗುವ ಕಾಲವಿದು. ನೂರಾರು ವರ್ಷಗಳಿಂದ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಕೌಟುಂಬಿಕ ಮೌಲ್ಯ ಗಳು ನಮ್ಮ ಕಣ್ಣೆದುರೇ ಛಿದ್ರವಾಗು ತ್ತಿರು ವುದಕ್ಕೆ ನಮ್ಮ ಅಸಹಾಯಕತೆ ಕಾರಣವೋ ಅಥವಾ ಪ್ರತಿಷ್ಠೆಯೋ ನನಗಂತೂ ತಿಳಿಯುತ್ತಿಲ್ಲ.
ಹತ್ತಾರು ವರ್ಷಗಳು ಜೀವಕ್ಕೆ ಜೀವ ವಾಗಿ ಬಾಳಿ ಬದುಕಿದ ದಂಪತಿ ಇಂದು ಇತಿಹಾಸದ ಪುಟಕ್ಕಷ್ಟೇ ಮೀಸಲಾಗಿದ್ದಾರೆ. ಅರ್ಥಾತ್ ಅಂತ ಹವರು ವಿರಳರಲ್ಲಿ ವಿರಳವಾಗುತ್ತಿ ದ್ದಾರೆ. ಸಣ್ಣ ಸಣ್ಣ ಕುಟುಂಬಗಳ ಆಗಮನವಷ್ಟೇ ಇದಕ್ಕೆ ಕಾರಣ ಎಂದು ನನಗನ್ನಿಸುವುದಿಲ್ಲ. ಕುಟುಂಬ ದೊಡ್ಡದಿರಲಿ ಅಥವಾ ಚಿಕ್ಕದಿರಲಿ ಅದರ ಅಡಿಪಾಯವೇ ನಂಬಿಕೆ. ಅದರೊಟ್ಟಿಗೆ ಪರಸ್ಪರ ಪ್ರೀತಿ ಮತ್ತು ಗೌರವ ಬೆಸೆದುಕೊಂಡಿರುತ್ತದೆ. ಈ ಮೌಲ್ಯಗಳಲ್ಲಿ ಕೊಂಚ ಏರು ಪೇರಾ ದರೂ ಕುಟುಂಬ ಕಂಪನ ಗ್ಯಾರಂಟಿ. ಇದನ್ನು ಅರ್ಥ ಮಾಡಿ ಕೊಳ್ಳಲು ವಿಶ್ವ ವಿದ್ಯಾನಿಲಯದ ಡಿಗ್ರಿಗಳ ಅಗತ್ಯವಿಲ್ಲ ಎನಿಸುತ್ತದೆ.
ನಾಲ್ಕಾರು ವರ್ಷ ಜೊತೆಯಾಗಿ ಬಾಳಲಾರದಷ್ಟು ನಮ್ಮ ಜೀವನ ಗಳು ಅಸಹನೀಯವಾಗಿದೆಯೇ ಎಂಬ ಪ್ರಶ್ನೆ ನನ್ನನ್ನು ಸಾಕಷ್ಟು ಚಿಂತೆ ಗೀಡುಮಾಡಿದೆ. ಸೈರಣೆ ಮತ್ತು ಹೊಂದಾಣಿಕೆಯನ್ನು ಹುಡುಕ ಬೇಕಾದ ದುಃಸ್ಥಿತಿ ಬಂದಿದೆ. ಒಬ್ಬರ ನ್ನೊಬ್ಬರು ಸಹಿಸಿಕೊಳ್ಳಲಾರದಷ್ಟು ಸಣ್ಣತನ ಹಾಗೂ ಸ್ವಾರ್ಥ ನಮ್ಮನ್ನು ಆವರಿಸಿಕೊಂಡಿರುವುದೇ ಇದಕ್ಕೆ ಕಾರಣ. ವಿದ್ಯೆಯಿದ್ದರೂ ಹೃದಯ ವೈಶಾಲ್ಯತೆ ಇಲ್ಲವಾಗಿದೆ. ಜ್ಞಾನವಿದ್ದರೂ ಜಾಣ್ಮೆ ಮಾಯ ವಾಗಿದೆ. ವಿನಯದ ಜಾಗದಲ್ಲಿ ಅಹಂ ಆರ್ಭಟಿಸುತ್ತಿದೆ. ಅಧಿಕಾರದ ದಾಹ ದರ್ಪವನ್ನು ಪೊರೆದು ಹೇಸಿಗೆ ಹುಟ್ಟಿಸುತ್ತಿದೆ. ಇಷ್ಟೆಲ್ಲಾ ಆದ ಮೇಲೆ ಸಂವೇದನಾ ರಹಿತ ಬದುಕು ಕ್ರೂರ ವೆನಿಸದಿರಲು ಸಾಧ್ಯವೇ?
ಕೆಲವು ವರ್ಷಗಳ ಹಿಂದೆ ಇದೇ ಅಂಕಣದಲ್ಲಿ 50 ವರ್ಷ ದಾಂಪತ್ಯದ ಸವಿ ಅನುಭವಿಸಿದ ದಂಪತಿ ಬಗ್ಗೆ ಬರೆದಿದ್ದೆ. ಇವತ್ತಿನ ಕಾಲಕ್ಕೆ ಅಂತಹ ದಂಪತಿ ಅಪರೂಪವೇ ನಿಜ. ಆಧು ನಿಕರ ಮಾತಿನಲ್ಲಿ ಹೇಳುವುದಾದರೆ ಅವರು ‘ಹಳೆಯ ಕಾಲದವರು’. ಇಂದಿನ ಯುವ ಜನಾಂಗಕ್ಕೆ ದಂಪತಿ ಐದು ವರ್ಷ ಒಟ್ಟಾಗಿದ್ದರೆ ಅದೇ ದೊಡ್ಡದು! ಖಾಸಗಿ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿಸಿಕೊಂಡು ಮನಸೋ ಇಚ್ಛೆ ಕಿತ್ತೆಸೆಯುವ ‘ಊiಡಿe & ಈiಡಿe’ ಪಾಲಿಸಿ ಇದ್ದಂತೆ. ಅಲ್ಲಿ ಏನಿದ್ದರೂ ಓಡುವ ಕುದುರೆಗೆ ಮಾತ್ರ ಬೆಲೆ. ಸ್ವಲ್ಪ ವ್ಯತ್ಯಾಸವಾದರೂ ಅಂತಹ ಕುದುರೆ ಯನ್ನು ಹೊರಗೆ ಹಾಕಿಬಿಡುತ್ತಾರೆ. ಯಾವುದೇ ಮುಲಾಜು ಮತ್ತು ಅನು ಕಂಪಕ್ಕೆ ಆಸ್ಪದ ಇರುವುದಿಲ್ಲ.
ಇಂತಹ ನಿಯಮ ಇಂದು ಮನೆ ಗಳಿಗೂ ಹಬ್ಬಿರುವುದು ಮಾತ್ರ ದುರಂತ. ಇದು ಪಾಶ್ಚಿಮಾತ್ಯರ ಕೊಡುಗೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯ ವಿಲ್ಲ. ಯೂರೋಪ್ ದೇಶಗಳಲ್ಲಿ ಗಂಡ ಹೆಂಡತಿ ಹತ್ತಿಪ್ಪತ್ತು ವರ್ಷ ಒಟ್ಟಿಗೆ ಸಂಸಾರ ಮಾಡಿದರೆ ಹುಬ್ಬೇರಿಸುತ್ತಾರೆ. ‘ಒಬ್ಬನೇ ಗಂಡನೊಂದಿಗೆ ಇಡೀ ಜೀವನ ಹೇಗೆ ಸಂಸಾರ ಮಾಡುವುದು’? ಎಂದು ಪ್ರಶ್ನಿಸುತ್ತಾರೆ. ಇವತ್ತು ನಮ್ಮ ಮನೆಗಳಲ್ಲಿ ಮದುವೆಗಿಂತ ಹೆಚ್ಚು ಚರ್ಚೆಯಾಗುತ್ತಿರುವುದು ಡೈವೊರ್ಸ್ ಬಗ್ಗೆ! ಸುಖವಾಗಿ ಸಂಸಾರ ಮಾಡಿ ಕೊಂಡು ಹೊಸಬಾಳು ಕಟ್ಟಿಕೊಳ್ಳ ಬೇಕಾದವರು ಇಂದು ಕೋರ್ಟ್‍ಗೆ ಅಲೆಯುತ್ತಿರುವುದನ್ನು ನೋಡಿದರೆ ಸಮಸ್ಯೆಯ ಗಂಭೀರತೆ ಅರ್ಥವಾಗು ತ್ತದೆ. ಎಷ್ಟೋ ಸಂದರ್ಭಗಳಲ್ಲಿ ಮದುವೆಗಳು ಕಲ್ಯಾಣ ಮಂಟಪಗಳ ಲ್ಲಿಯೇ ಕೊನೆಯಾಗಿರು ವುದುಂಟು!
ಇವತ್ತಿನ ದಿನಮಾನದಲ್ಲಿ ನಮ್ಮ ಮದುವೆಗಳ ಆಯಸ್ಸು ಏಕೆ ಕ್ಷೀಣಿಸು ತ್ತಿದೆ ಎಂಬುದರ ಬಗ್ಗೆ ಒಂದಷ್ಟು ಸಂಶೋ ಧನೆ ನಡೆಸುವುದು ಒಳಿತು. ಏಕೆಂದರೆ ಆತ್ಮಾವಲೋಕನ ಮಾಡಿ ಕೊಳ್ಳಲು ಪುರು ಸೊತ್ತಿಲ್ಲ. ಅದ ರಿಂದಲಾದರೂ ‘ಇವತ್ತೇ ಡ್ರಾ, ಇವತ್ತೇ ಬಹುಮಾನ’ ಎಂಬ ‘ಲಾಟರಿ ಮದುವೆ’ಗಳ ಹಣೆಬರಹಕ್ಕೆ ಕೊಂಚ ಕಡಿವಾಣ ಹಾಕಬಹುದೇನೋ?
ಬಾಳಿ ಬದುಕಿದವರನ್ನು ನೋಡಿ ದ್ದೇವೆ. ಹಾಗೆಯೇ, ಬದುಕಿ ಬಾಳಿದ ವರನ್ನೂ ಕಂಡಿದ್ದೇವೆ. ಆದರೆ ಬಾಳದೇ ಬದುಕಿರುವವರನ್ನು ನೋಡುತ್ತಿರು ವುದು ನಮ್ಮ ಕಾಲದಲ್ಲಿಯೇ ಎನಿಸು ತ್ತದೆ. ಇದು ಆಧುನಿಕ ಜೀವನ ಶೈಲಿಯ ವಿಡಂಬನೆ ಎನ್ನದೇ ವಿಧಿಯಿಲ್ಲ. ನಮ್ಮ ಬದುಕು ಎಷ್ಟು ಬಾಳಿಕೆ ಬರುತ್ತದೆ ಎಂಬ ತೀರ್ಮಾನ ನಮ್ಮದು. ತಪ್ಪು ತೀರ್ಮಾನಗಳು ಮತ್ತು ಆದ್ಯತೆಗ ಳಿಂದ ಪ್ರಮಾದಗಳು ಹೆಚ್ಚಾಗುತ್ತವೆ.
ಇರುವ ಒಂದು ಬದುಕನ್ನು ಸೂಕ್ಷ್ಮ ವಾಗಿ ನಿಭಾಯಿಸುವುದಕ್ಕೆ ಬಾಳು ವುದು ಎನ್ನುತ್ತಾರೆ. ಇದನ್ನು ಸಮರ್ಪಕ ವಾಗಿ ಮಾಡದವರನ್ನು ಹೇಡಿಗಳು ಹಾಗೂ ಪಲಾಯನವಾದಿಗಳು ಎನ್ನ ಬಹುದು. ಹಾಗಾದರೆ, ನಾವು ನಮ್ಮ ಬದುಕನ್ನು ನಿಭಾಯಿಸಿ, ನಿರ್ವಹಿ ಸಲು ಸೋತಿರುವುದು ಅಕ್ಷರಶಃ ಸತ್ಯ. ಆದರೂ ಸೋಲು ಶಾಶ್ವತವಲ್ಲ ಎಂಬುದು ನೆನಪಿರಲಿ. ಅದರ ಹಿಂದೆ ಗೆಲುವು ಇದ್ದೇ ಇರುತ್ತದೆ ಎಂಬ ಸತ್ಯವನ್ನು ಮಾತ್ರ ಮರೆಯಬಾರದು.
ದಿನ ಕಳೆದಂತೆ ಎಲ್ಲರಿಗೂ ವಯ ಸ್ಸಾಗುತ್ತದೆ. ಇದರಲ್ಲಿ ಯಾವ ಪವಾ ಡವೂ ಇಲ್ಲ. ಜೀವವಿರುವ ಎಲ್ಲಾ ಜೀವಿಗಳಿಗೆ ಇದು ಅನ್ವಯವಾಗು ತ್ತದೆ. ಮನುಷ್ಯನ ಹುಟ್ಟು-ಸಾವು ಹಗಲು-ರಾತ್ರಿಯಷ್ಟೇ ಸತ್ಯ. ಹಗಲು ರಾತ್ರಿ ಪ್ರತಿನಿತ್ಯ ಸಂಭವಿಸುತ್ತದೆ. ಆದರೆ ಹುಟ್ಟು ಸಾವು ಒಮ್ಮೆ ಮಾತ್ರ ನಡೆಯುವಂಥದ್ದು. ಮೇಲಾಗಿ, ಹುಟ್ಟು ಸಾವು ನಮ್ಮ ದೇಹಕ್ಕೆ ಸಂಬಂಧಪಟ್ಟ ವಿಚಾರವೇ ಹೊರತು ಆತ್ಮಕ್ಕೆ ಮತ್ತು ಮನಸ್ಸಿಗೆ ಸಂಬಂಧಿಸಿದ್ದಲ್ಲ. ಏಕೆಂದರೆ ಸಾವು ದೇಹಕ್ಕೆ ವಿನಾ ಆತ್ಮಕ್ಕಲ್ಲ. ದೇಹ ತನ್ನ ಕಾರ್ಯಮುಗಿಸಿ ಮಣ್ಣು ಸೇರಿದರೆ, ಆತ್ಮ ತನ್ನ ಪ್ರಯಾಣವನ್ನು ಮುಂದುವರೆಸುತ್ತದೆ ಎಂದು ಅಧ್ಯಾತ್ಮ ಹೇಳುತ್ತದೆ. ಆದ್ದರಿಂದಲೇ, ಮನಸ್ಸಿನ ಭಾವನೆಗಳಿಗೆ ಹಾಗೂ ಚಿಂತನೆಗಳಿಗೆ ವ್ಯಕ್ತಿ ಸತ್ತ ಮೇಲೂ ಬದುಕುವ ತಾಕ ತ್ತಿರುತ್ತವೆ ಎಂಬುದನ್ನು ಒಪ್ಪಿ ಕೊಳ್ಳಬೇಕು.
ಈ ಹಿನ್ನೆಲೆಯಲ್ಲಿಯೇ ಮೌಲ್ಯ ಗಳು ಸಾರ್ವಕಾಲಿಕವಾಗಿ ಹೆಚ್ಚು ಮಹತ್ವ ಪಡೆಯುತ್ತವೆ. ಶತಮಾನ ಗಳು ಕಳೆದರೂ, ಯುಗಗಳು ಬದಲಾ ದರೂ ಮೌಲ್ಯಗಳು ಮಾತ್ರ ಬದಲಾ ಗುವುದಿಲ್ಲ. ಕಾಲ ಕಾಲಕ್ಕೆ ಮಹಾ ಪುರುಷರು ಬದಲಾದರೂ, ಮೌಲ್ಯ ಗಳು ಹಾಗೆಯೇ ಮುಂದುವರೆಯು ತ್ತವೆ. ಅದೇ ಜೀವನದ ವೈಶಿಷ್ಟ್ಯ. ಹೊಸ ಬದುಕು ಇಂತಹ ಮೌಲ್ಯ ಗಳನ್ನು ಕಟ್ಟಿ, ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದುದರಿಂದಲೇ, ಬದುಕಿನಲ್ಲಿ ಪ್ರೀತಿ ಮತ್ತು ನಂಬಿಕೆ ಮಹತ್ತರವಾದುದು. ‘ಎಷ್ಟು’ ವರ್ಷ ಬದುಕಿದ್ದೇವೆ ಎನ್ನು ವುದಕ್ಕಿಂತ ‘ಹೇಗೆ’ ಬದುಕಿದ್ದೇವೆ ಎನ್ನುವುದು ಈ ಕಾರಣದಿಂದಲೇ ಮಹತ್ವ ಪಡೆದುಕೊಳ್ಳುತ್ತದೆ. ಆದು ದರಿಂದಲೇ, ದಂಪತಿಗಿಂತ ದಾಂಪತ್ಯ ಮುಖ್ಯವಾಗುತ್ತದೆ. ಪ್ರೇಮಿಗಳಿಗಿಂತ ಪ್ರೀತಿ ಮುಖ್ಯವಾಗುತ್ತದೆ.
ಪ್ರೀತಿಗೆ ಸಾವಿಲ್ಲ. ಅದು ನಿರಂತರ, ನಿತ್ಯ ನೂತನ. ಅದು ಎಲ್ಲ ಕಾಲ ದಲ್ಲಿಯೂ ಒಂದೇ ರೀತಿ ಇರುವಂಥದ್ದು. ಅದೊಂದು ಗಟ್ಟಿ ಬಂಗಾರ ಇದ್ದಂತೆ. ಎಂದೂ ಕರಗುವುದಿಲ್ಲ. ಜೀವನಕ್ಕೆ ಅಗತ್ಯವಿದ್ದಷ್ಟನ್ನು ಮಾತ್ರ ನಾವು ಕರ ಗಿಸಿಕೊಂಡು ಪ್ರಿಯವಾದ ಆಭರಣ ಮಾಡಿಸಿ ಮೈಮೇಲೆ ಧರಿಸಿ ಸಂಭ್ರಮಿ ಸುತ್ತೇವೆ. ಇಂತಹ ಪ್ರೀತಿಯನ್ನು ಸಂಭ್ರಮಿಸುವಾಗ ರೀತಿ, ನೀತಿ, ಪ್ರಖರತೆ, ತೀವ್ರತೆ ಮತ್ತು ಬಾಳಿಕೆ ಯಲ್ಲಿ ಮಾತ್ರ ವ್ಯತ್ಯಾಸವಾಗಿರುತ್ತದೆ. ಆದರೆ ಪ್ರೀತಿ ಮಾತ್ರ ಹಾಗೆಯೇ ಇರುತ್ತದೆ. ಯೋಗ್ಯ ಬದುಕಿನ ಯೋಗ್ಯ ಸೂತ್ರ ಇದೇ ಅಲ್ಲವೇ?
‘ಸಂಸಾರದ ಗುಟ್ಟು ವ್ಯಾಧಿ ರಟ್ಟು’ ಎಂಬುದು ಪ್ರಚಲಿತ ಗಾದೆ ಮಾತು. ಹಿಂದಿನಿಂದಲೂ ಸಂಸಾರದ ರಹಸ್ಯ ಗಳನ್ನು ಜತನವಾಗಿ ಕಾಪಾಡುವ ಪರಿಪಾಠವಿತ್ತು. ಆದರೆ ಬಹುತೇಕ ಸಂದರ್ಭಗಳಲ್ಲಿ ಅಲ್ಲಿ ಗಂಡಸರ ಅಥವಾ ಯಜಮಾನರ ಗುಟ್ಟು ಗಳನ್ನು ಮುಚ್ಚಿಡುವುದೇ ಆಗಿತ್ತು. ಎಲ್ಲಿಯವರೆಗೆ ಗುಟ್ಟು ಗುಟ್ಟಾಗಿರು ತ್ತಿತ್ತೋ ಅಲ್ಲಿಯವರೆಗೆ ಎಲ್ಲವೂ ಬೂದಿಮುಚ್ಚಿದ ಕೆಂಡದಂತೆ ಇರು ತ್ತಿತ್ತು. ಒಳಗೊಳಗೆ ಕುದಿಯು ತ್ತಿದ್ದರೂ ಸ್ಫೋಟಗೊಳ್ಳದೆ ಬೀಸೋ ದೊಣ್ಣೆ ಯಿಂದ ತಪ್ಪಿಸಿಕೊಳ್ಳುವ ಕಾರ್ಯ ತಂತ್ರವಾಗಿತ್ತು. ಕೊನೆಗೆ ಆ ಗುಟ್ಟು ಅವನೊಂದಿಗೆ ಸುಟ್ಟು ಬೂದಿ ಯಾಗುವ ಸಾಧ್ಯತೆಗಳೇ ಹೆಚ್ಚಿರು ತ್ತಿತ್ತು. ಆದರೂ ಸತ್ತ ಮೇಲೆ ಎಷ್ಟೋ ಗುಟ್ಟುಗಳು ರಟ್ಟಾಗಿರುವುದೂ ಉಂಟು. ಆದರೆ ‘ಸಾಬರೆ ಹೋದ ಮೇಲೆ ಅವರ ಗಡ್ಡಕ್ಕೆ ಏನು ಬೆಲೆ’? ಎಂದು ಆಗ ಎಲ್ಲವನ್ನು ಮಾಫಿ ಮಾಡ ಲಾಗುತ್ತಿತ್ತು!
ಇಂದು ಸಂಸಾರದ ಗುಟ್ಟನ್ನು ಟಿವಿಯಲ್ಲಿ ಲೈವ್ ಆಗಿ ರಟ್ಟು ಮಾಡು ವುದು ಕೆಲವರಿಗೆ ಶೌರ್ಯದ ಕೆಲಸ ದಂತಿದೆ! ಮನೆಯ ಮರ್ಯಾದೆ ಯನ್ನು ಖಿಗಿ ಷೋಗಳಲ್ಲಿ ಹರಾಜು ಹಾಕುವುದು ಫ್ಯಾಶನ್ ಆಗಿದೆ. ಇದನ್ನು ಕೆಲವರು ಮಹಾ ಕಾರ್ಯ ವೆಂದು ಬೀಗುವುದು ಹೇಸಿಗೆ ಹುಟ್ಟಿಸುತ್ತದೆ. ಪರಸ್ಪರ ಕೆಸರೆರ ಚಿಕೊಂಡು ಅರಚಾಡಿ, ಕೆಲವೊಮ್ಮೆ ಹಲ್ಲೆ ಮಾಡುವ ಹಂತಕ್ಕೆ ಹೋಗು ವುದಾದರೆ ಇದನ್ನು ಸಂಸ್ಕøತಿ ಎನ್ನ ಬೇಕೋ ಅಥವಾ ವಿಕೃತಿ ಎನ್ನ ಬೇಕೋ ಗೊತ್ತಿಲ್ಲ. ಯಾವುದೇ ಸಂಸಾರದಲ್ಲಿ ಮೂರನೇ ವ್ಯಕ್ತಿಯ ಪದಾರ್ಪಣೆ ಆದಲ್ಲಿ ಅಲ್ಲಿ ಎಲ್ಲವೂ ಸರ್ವನಾಶ ಎಂಬುದು ಅನುಭವ ಸತ್ಯ. ನಾಲ್ಕು ಗೋಡೆ ಮಧ್ಯೆ ಬಗೆ ಹರಿಸಿಕೊಳ್ಳಬೇಕಾದ ವಿಚಾರಗಳು ಬಹಿರಂಗವಾಗಿ ಚರ್ಚೆಯಾಗುತ್ತಿ ರುವುದು ಮಾತ್ರ ಈ ಸಮಾಜ ಸರಿ ದಿಕ್ಕಿನಲ್ಲಿ ಹೋಗುತ್ತಿಲ್ಲ ಎನ್ನು ವುದಕ್ಕೆ ಸಾಕ್ಷಿ.
ದಾಂಪತ್ಯ ಒಂದು ಸುಂದರ ಅನುಭವ. ಅದನ್ನು ಅನುಭವಿಸಬೇಕೇ ವಿನಾ ಚರ್ಚಿಸಿ ತರ್ಕ ಮಾಡುವು ದಲ್ಲ. ಹಾಗೆಯೇ, ಅದು ಶೈಕ್ಷಣಿಕ ವಿಚಾರ ಸಂಕಿರಣವಂತೂ ಅಲ್ಲವೇ ಅಲ್ಲ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಅಂತಹ ಘನ ವಿಚಾರವನ್ನು ಹರಾಜು ಹಾಕುವುದು ಸಂಸ್ಕಾರ ವಲ್ಲ. ಸಂಸಾರ ಎಂದ ಮೇಲೆ ಹುಳುಕು ಇದ್ದೇ ಇರುತ್ತದೆ. ಅಲ್ಲಿ ಯಾವುದೂ ಪರ್ಫೆಕ್ಟ್ ಇಲ್ಲ. ಯಾರೂ 100% ಶುದ್ಧ ರಲ್ಲ. ಹಾಗೆಂದು, ಅದನ್ನು ಜಗಜ್ಜಾಹೀರು ಗೊಳಿಸಿ ವಿನಾಕಾರಣ ಹಾದಿರಂಪ ಬೀದಿ ರಂಪ ಮಾಡುವುದು ಸಮಂಜಸವಲ್ಲ.
ಜೀವನ ವ್ಯವಹಾರವಲ್ಲ. ಅದ ರಲ್ಲಿ ಬಂಡವಾಳ ಹೂಡಿ ಲಾಭ ಮಾಡಲು ಹವಣಿಸುವುದು ಮೂರ್ಖ ತನ. ಹಾಗೆಯೇ, ದಂಪತಿ ಗ್ರಾಹಕ ರಲ್ಲ ಎಂಬುದನ್ನು ಮನಗಾಣಬೇಕು. ವಸ್ತುಗಳಿಗೆ ಮಾರುಕಟ್ಟೆ ಬೆಲೆ ಅನ್ನು ವುದು ಇರುತ್ತದೆ. ಆದರೆ ಮೌಲ್ಯ ಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ಕೊನೆಯದಾಗಿ, ಬಾಂಧವ್ಯಕ್ಕೆ ಬೆಲೆ ಕಟ್ಟುವುದು ಬೇಡ. ಏಕೆಂದರೆ, ಅದು ಸರಕಲ್ಲ. ಎಲ್ಲರನ್ನು ಪ್ರೀತಿ ಯಲ್ಲಿ ಬಂಧಿಸುವುದಷ್ಟೇ ನಮ್ಮ ಕೆಲಸ. ಇದರಲ್ಲಿ ಕಳೆದುಕೊಳ್ಳು ವುದು ಏನಿದೆ?