ಮೈಸೂರಿನ ಕರ್ನಾಟಕ ಮುಕ್ತ ವಿವಿಗೆ  ಈ ವರ್ಷ ಮಾನ್ಯತೆ ನಿರೀಕ್ಷೆ
ಮೈಸೂರು

ಮೈಸೂರಿನ ಕರ್ನಾಟಕ ಮುಕ್ತ ವಿವಿಗೆ  ಈ ವರ್ಷ ಮಾನ್ಯತೆ ನಿರೀಕ್ಷೆ

June 14, 2018

ಮೈಸೂರು: ಬಹು ನಿರೀಕ್ಷಿತ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ 2018-19ನೇ ಸಾಲಿಗೆ ಮಾನ್ಯತೆ ಸಿಗಬಹುದೆಂದು ನಿರೀಕ್ಷಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೋರ್ಸುಗಳನ್ನು ನಡೆಸಲು ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಪಡೆಯುವ ಬಗ್ಗೆ ಸಿದ್ಧತೆ ನಡೆಸುವಂತೆ ದೆಹಲಿಯ ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗದಿಂದ (ಯುಜಿಸಿ) ಜೂನ್ 6 ರಂದು ಪತ್ರ ಬಂದಿದೆ ಎಂದು ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ನಿಮ್ಮ ಮನವಿ ಪತ್ರ ಹಾಗೂ ಪ್ರಸ್ತಾವನೆಯನ್ನು ಪರಿಗಣಿಸಲಾಗಿದೆ. 2018-19ನೇ ಸಾಲಿನಲ್ಲಿ ಕೋರ್ಸುಗಳನ್ನು ನಡೆಸಲು ಮಾನ್ಯತೆ ನೀಡುವ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಲಿಖಿತ ಮೂಲಕ ಅಧಿಸೂಚನೆ ಹೊರಡಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.ಕಳೆದ ಎರಡು ತಿಂಗಳ ಹಿಂದೆಯಷ್ಟೇ ರಾಜ್ಯ ಹೈಕೋರ್ಟ್ ಮುಕ್ತ ವಿಶ್ವವಿದ್ಯಾನಿಲಯಕ್ಕೆ 2018-19ನೇ ಸಾಲಿಗೆ ಮಾನ್ಯತೆ ನೀಡುವಂತೆ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಜೂನ್ 4ರಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ 16 ಮಂದಿ ಸಂಸತ್ ಸದಸ್ಯರ ಒಳಗೊಂಡ ಸ್ಥಾಯಿ ಸಮಿತಿ, ಮೈಸೂರಿಗೆ ಭೇಟಿ ನೀಡಿತ್ತು. ಅವರೊಂದಿಗೆ ಯುಜಿಸಿ ಜಂಟಿ ಕಾರ್ಯದರ್ಶಿಗಳೂ ಇದ್ದರು. ಆ ವೇಳೆ ಮೈಸೂರು ರ್ಯಾಡಿಸನ್ ಬ್ಲ್ಯೂ ಹೋಟೆಲ್‍ನಲ್ಲಿ ನಾನು 20 ನಿಮಿಷಗಳ ಕಾಲ ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಮಾನ್ಯತೆಗೆ ತಾವು ಮಾಡಿರುವ ಪ್ರಯತ್ನಗಳನ್ನು ಸಮಿತಿ ಸದಸ್ಯರಿಗೆ ವಿವರಿಸಿದ್ದೆ ಎಂದು ತಿಳಿಸಿದರು.

ಆ ವೇಳೆ ಮಾನ್ಯತೆ ನೀಡುವ ಬಗ್ಗೆ ಯುಜಿಸಿ ಜಂಟಿ ಕಾರ್ಯದರ್ಶಿಗಳು ಒಪ್ಪಿಕೊಂಡಿದ್ದರು. ಅದರಂತೆ ಈಗ ನಮಗೆ ಯುಜಿಸಿಯಿಂದ ಭರವಸೆಯ ಪತ್ರ ತಲುಪಿರುವುದರಿಂದ ಈ ವರ್ಷ ನಮಗೆ ವಿಶ್ವಾಸ ಮೂಡಿದೆ ಎಂದು ಪ್ರೊ. ಶಿವಲಿಂಗಯ್ಯ ತಿಳಿಸಿದರು.

2017-18ನೇ ಸಾಲಿನ ಇನ್ ಹೌಸ್ ಕೋರ್ಸುಗಳಿಗೆ ಮಾನ್ಯತೆ ನೀಡುವ ಪ್ರಸ್ತಾವನೆ ಸಂಬಂಧ ರಾಜ್ಯ ಹೈಕೋರ್ಟ್ ಆದೇಶ ನೀಡಿತ್ತಾದರೂ ಪಾಲನೆ ಮಾಡದ ಯುಜಿಸಿ, ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದೆ. ನಾವೂ ಯುಜಿಸಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ ಎಂದು ತಿಳಿಸಿದರು.

2015ರ ಜೂನ್ 16ರಂದು ಸಾರ್ವಜನಿಕ ತಿಳುವಳಿಕೆ ನೀಡುವ ಮೂಲಕ 2013-14ರ ಅವಧಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ರದ್ದುಗೊಳಿಸಲಾಗಿದೆ ಎಂದು ಯುಜಿಸಿ ತಿಳಿಸಿದ್ದರಿಂದ ಈ ಬೆಳವಣಿಗೆಗಳು ನಡೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Translate »