ಕೆಎಸ್‍ಆರ್‍ಪಿಯ 21 ಪೇದೆ ಸೇರಿ ಮೈಸೂರಲ್ಲಿ 51 ಮಂದಿಗೆ ಸೋಂಕು
ಮೈಸೂರು

ಕೆಎಸ್‍ಆರ್‍ಪಿಯ 21 ಪೇದೆ ಸೇರಿ ಮೈಸೂರಲ್ಲಿ 51 ಮಂದಿಗೆ ಸೋಂಕು

July 2, 2020

ಮೈಸೂರು, ಜು. 1- ಬೆಂಗಳೂರಿನ ಪಾದರಾಯನಪುರಕ್ಕೆ ಕರ್ತವ್ಯದ ಮೇಲೆ ತೆರಳಿದ್ದ 21 ಕೆಎಸ್‍ಆರ್‍ಪಿ ಸಿಬ್ಬಂದಿ ಸೇರಿದಂತೆ ಮೈಸೂರಿನಲ್ಲಿ 51, ಜಿಲ್ಲಾ ಎಸ್ಪಿ ಕಾರು ಚಾಲಕ ಸೇರಿದಂತೆ ಚಾಮರಾಜನಗರದಲ್ಲಿ 22, ಹಾಸನದಲ್ಲಿ 28, ಕೊಡಗಿನಲ್ಲಿ 13 ಮತ್ತು ಮಂಡ್ಯದಲ್ಲಿ 5 ಕೊರೊನಾ ಸೋಂಕು ಪ್ರಕ ರಣಗಳು ಬುಧವಾರ ದಾಖಲಾಗಿವೆ. ಈ ಮಧ್ಯೆ ಹಾಸನದಲ್ಲಿ 30 ವರ್ಷದ ಸೋಂಕಿತ ಮೃತಪಟ್ಟಿ ದ್ದಾನೆ. ಮೈಸೂರು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ದಾಖಲೆಯ 51 ಮಂದಿಗೆ ಸೋಂಕು ಪತ್ತೆಯಾಗಿದ್ದು,

ಸೋಂಕಿತರ ಸಂಖ್ಯೆ 321ಕ್ಕೆ ಏರಿಕೆಯಾಗಿದೆ. ಇಂದು 13 ಮಂದಿ ಸೇರಿದಂತೆ 191 ಮಂದಿ ಗುಣಮುಖರಾಗಿದ್ದು, 127 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾದರಾಯನ ಪುರಕ್ಕೆ ಕರ್ತವ್ಯದ ಮೇಲೆ ತೆರಳಿದ್ದ ಕೆಎಸ್‍ಆರ್‍ಪಿ 5ನೇ ಬೆಟಾಲಿಯನ್‍ನ 21 ಸಿಬ್ಬಂದಿ ಹಿಂತಿರುಗಿದ ನಂತರ ಅವರನ್ನು ವರಕೋಡು ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿ ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಅವರೆಲ್ಲರಿಗೂ ಇಂದು ಸೋಂಕು ದೃಢಪಟ್ಟಿದೆ. ಪಿರಿಯಾಪಟ್ಟಣ ತಾಲೂಕಿನ ಮಹಿಳಾ ಕೆಎಎಸ್ ಅಧಿಕಾರಿಯ 13 ವರ್ಷದ ಪುತ್ರಿಗೆ ಸೋಂಕು ತಗುಲಿದೆ. ಮೈಸೂರಿನ ವಿಶ್ವೇಶ್ವರನಗರದ ಕೈಗಾರಿಕಾ ಪ್ರದೇಶದಲ್ಲಿರುವ ಅಪಾರ್ಟ್‍ಮೆಂಟ್‍ನ ಮನೆಯೊಂದರಲ್ಲಿ ವಾಸಿಸುತ್ತಿದ್ದ 6 ಮಂದಿ, ಎನ್.ಆರ್. ಮೊಹಲ್ಲಾ ಕೆಇಬಿ ಕ್ವಾರ್ಟರ್ಸ್ ಬಳಿಯ ಮೂವರು, ನಂಜನಗೂಡು ತಾಲೂಕು ಚಾಮಲಾಪುರಹುಂಡಿಯ ಮೂವರು, ಹುರಾ ಗ್ರಾಮದ ಮೂವರು ಇಂದು ಸೋಂಕಿಗೆ ಒಳಗಾಗಿದ್ದಾರೆ. ಬೆಂಗಳೂರಿನಿಂದ ಹುಣಸೂರು ತಾಲೂಕಿನ ದಲ್ಲಾಳ್‍ಕೊಪ್ಪಲು ಗ್ರಾಮಕ್ಕೆ ಬಂದಿದ್ದ ಯುವಕ, ರಾಜೀವ್‍ನಗರದ ವೃದ್ಧ, ಯಾದವಗಿರಿಯ 38 ವರ್ಷದ ವ್ಯಕ್ತಿ, ವಾಸು ಬಡಾವಣೆಯ ವೃದ್ಧ ಇಂದು ಸೋಂಕಿಗೆ ಒಳಗಾಗಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ ಮೈಸೂರು ನಗರದ ವಾಸು ಲೇಔಟ್ 4ನೇ ಕ್ರಾಸ್, ಹೆಬ್ಬಾಳ್ 1ನೇ ಹಂತದ ಬಸವನಗುಡಿ ಬಳಿ, ಎನ್.ಆರ್. ಮೊಹಲ್ಲಾದ ಕೆಇಬಿ ಕ್ವಾರ್ಟರ್ಸ್, ಯಾದವಗಿರಿಯ 1ನೇ ಮುಖ್ಯ ರಸ್ತೆ, ಕುವೆಂಪುನಗರ 1ನೇ ಕ್ರಾಸ್, ರಾಜೀವ್‍ನಗರ 2ನೇ ಹಂತ, ಹುಣಸೂರಿನ ದಲ್ಲಾಳ್‍ಕೊಪ್ಪಲು, ಕೆ.ಆರ್.ನಗರದ ಸಾಲಿಗ್ರಾಮ, ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಕ್ವಾರ್ಟರ್ಸ್, ನಂಜನಗೂಡಿನ ದೇವರಸನಹಳ್ಳಿ ಪ್ರದೇಶಗಳನ್ನು ಕಂಟೇನ್ಮೆಂಟ್ ಝೋನ್‍ಗಳೆಂದು ಘೋಷಿಸಲಾಗಿದೆ.

ಎಸ್ಪಿಯ ಕಾರು ಚಾಲಕ, ಚೆಸ್ಕಾಂನ ಇಬ್ಬರು ಸಿಬ್ಬಂದಿ ಸೇರಿದಂತೆ ಚಾಮರಾಜನಗರ ಜಿಲ್ಲೆಯಲ್ಲಿ ಇಂದು 22 ಪ್ರಕರಣ ದಾಖಲಾಗಿವೆ. ಇವರಲ್ಲಿ 16 ಮಂದಿ ಗುಂಡ್ಲುಪೇಟೆ ಯವರು. ಚಾಮರಾಜನಗರ ತಾಲೂಕು ನಾಗವಳ್ಳಿ ಗ್ರಾಮದ ಇಬ್ಬರು ಸೇರಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ತಮ್ಮ ಕಾರು ಚಾಲಕ ಕಳೆದ ಒಂದು ವಾರದಿಂದ ರಜೆಯಲ್ಲಿದ್ದು, ಕರ್ತವ್ಯಕ್ಕೆ ಹಾಜರಾಗಿಲ್ಲ. ಇದರಿಂದಾಗಿ ತಮ್ಮ ಕಚೇರಿ ಹಾಗೂ ನಿವಾಸ ಸೀಲ್‍ಡೌನ್ ಮಾಡಬೇಕಾದ ಅಗತ್ಯವಿಲ್ಲ. ಆದರೂ ತಾವು ಗಂಟಲು ದ್ರವದ ಮಾದರಿ ಪರೀಕ್ಷಿಸಿಕೊಳ್ಳಲು ತೀರ್ಮಾನಿಸಿದ್ದು, ಪರೀಕ್ಷಾ ಬರುವವರೆಗೆ ಮನೆಯಲ್ಲೇ ಇರಲು ನಿರ್ಧರಿಸಿದ್ದೇನೆ ಎಂದು ಚಾಮರಾಜನಗರ ಎಸ್ಪಿ ಹೆಚ್.ಡಿ. ಆನಂದಕುಮಾರ್ ತಿಳಿಸಿದ್ದಾರೆ.

ಕೊಡಗಿನಲ್ಲಿ ಇಂದು 13 ಮಂದಿಗೆ ಸೋಂಕು ಪತ್ತೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 10, ವಿರಾಜಪೇಟೆ ತಾಲೂಕಿನಲ್ಲಿ 1 ಪ್ರಕರಣ ಇದರಲ್ಲಿ ಸೇರಿದೆ. ಇದರೊಂದಿಗೆ ಕೊಡಗಿನ ಸೋಂಕಿತರ ಸಂಖ್ಯೆ 60ಕ್ಕೆ ಏರಿಕೆಯಾಗಿದ್ದು, ಈಗಾಗಲೇ ಮೂವರು ಗುಣಮುಖರಾಗಿ, ಉಳಿದ 57 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಡ್ಯದಲ್ಲಿ ಇಂದು ಐವರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಸೋಂಕಿತರ ಸಂಖ್ಯೆ 421ಕ್ಕೆ ಏರಿಕೆಯಾಗಿದ್ದು, ಈಗಾಗಲೇ 341 ಮಂದಿ ಗುಣಮುಖರಾಗಿ, ಉಳಿದ 80 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Translate »