ಕೊಡಗು ಸೇರಿ ರಾಜ್ಯದ ಅತಿವೃಷ್ಟಿ ಹಾನಿಗೆ ಕೇಂದ್ರದಿಂದ 546.21 ಕೋಟಿ ನೆರವು
ಮೈಸೂರು

ಕೊಡಗು ಸೇರಿ ರಾಜ್ಯದ ಅತಿವೃಷ್ಟಿ ಹಾನಿಗೆ ಕೇಂದ್ರದಿಂದ 546.21 ಕೋಟಿ ನೆರವು

November 20, 2018

ನವದೆಹಲಿ: ಕೊಡಗು ಸೇರಿ ದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅತಿ ವೃಷ್ಟಿಯಿಂದ ಉಂಟಾದ ಹಾನಿಗೆ ಕೇಂದ್ರ 546.21 ಕೋಟಿ ಹೆಚ್ಚುವರಿ ನೆರವನ್ನು ಪ್ರಕಟಿಸಿದೆ. ಕೇಂದ್ರ ಗೃಹ ಸಚಿವ ರಾಜ ನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಉನ್ನತ ಮಟ್ಟದ ಸಮಿತಿ ಈ ನೆರವನ್ನು ಪ್ರಕಟಿಸಿದ್ದು, ಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಇತರರು ಪಾಲ್ಗೊಂಡಿದ್ದರು.

ದೇಶದಲ್ಲೇ ಅತ್ಯಂತ ಹೆಚ್ಚು ಕಾಫಿ ಬೆಳೆಯುವ ಪ್ರದೇಶವಾದ ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಭಾರೀ ಮಳೆ ಹಾಗೂ ನೆರೆಯಿಂದ ಉಂಟಾದ ಭೂಕುಸಿತ ದಿಂದ ಸಾಕಷ್ಟು ಜೀವ ಹಾಗೂ ಭಾರೀ ಪ್ರಮಾಣದ ಆರ್ಥಿಕ ಹಾನಿ ಉಂಟಾಗಿತ್ತು. ಹೀಗೆ ನೆರೆಪೀಡಿತ ಮತ್ತು ಭೂಕುಸಿತ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಅಧಿಕಾರಿಗಳ ತಂಡ ನೀಡಿದ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ
ಈ ನೆರವು ಪ್ರಕಟಿಸಿದೆ.

ಕೊಡಗಿನಲ್ಲಿ ಆಗಸ್ಟ್ ನಲ್ಲಿ ಇತಿಹಾಸದಲ್ಲೇ ಕಂಡರಿಯದಂತಹ ಮಳೆ, ನೆರೆಯಿಂದ ಭಾರೀ ಭೂಕುಸಿತ ಉಂಟಾಗಿತ್ತು. 18 ಮಂದಿ ಬಲಿಯಾಗಿ 4 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯ 22 ಗ್ರಾಮಗಳು ಸಂಪೂರ್ಣ ಹಾನಿಗೊಳಗಾಗಿ ದ್ದವು. ಸಾವಿರಕ್ಕೂ ಮನೆಗಳು ಕುಸಿದಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು. ಹಲವು ದಿನಗಳ ಕಾಲ ಈ ಜನ ನಿರಾಶ್ರಿತರ ತಾಣಗಳಲ್ಲಿ ಆಶ್ರಯ ಪಡೆದಿದ್ದರು.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕೊಡಗಿನಲ್ಲಿ ಸಂತ್ರಸ್ತರ ಪುನರ್ವಸತಿಗಾಗಿ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿ ಕೇಂದ್ರ ಹೆಚ್ಚುವರಿ ಪರಿಹಾರವನ್ನು ಪ್ರಕಟಿಸಿದೆ.

Translate »