ಮೈಸೂರು ಎನ್‍ಆರ್ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಶೇ.60.83 ಮತದಾನ
ಮೈಸೂರು

ಮೈಸೂರು ಎನ್‍ಆರ್ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಶೇ.60.83 ಮತದಾನ

April 19, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಚುನಾವಣೆ ಸಂಬಂಧ ಎನ್‍ಆರ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಶೇ.60.83ರಷ್ಟು ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆಯಿತು.

ಗಾಂಧಿನಗರ, ಉದಯಗಿರಿ, ಕ್ಯಾತ ಮಾರನಹಳ್ಳಿ, ಗೌಸಿಯಾನಗರ, ಶಕ್ತಿನಗರ ಸೇರಿದಂತೆ ಕ್ಷೇತ್ರದ ವಿವಿಧೆಡೆಯಲ್ಲಿ ಒಟ್ಟು 282 ಮತಗಟ್ಟೆಗಳಲ್ಲಿ ಕ್ಷೇತ್ರದ ಮತ ದಾರರು ಮತ ಚಲಾಯಿಸಿದರು.

ಬೆಳಿಗ್ಗೆ 9 ಗಂಟೆ ವೇಳೆ ಶೇ.4.48 ಮತ ಚಲಾವಣೆ ಆಗುವ ಮೂಲಕ ನಿಧಾನಗತಿಯಲ್ಲಿದ್ದ ಮತದಾನ, ಬೆಳಿಗ್ಗೆ 11ರ ವೇಳೆಗೆ ಶೇ.10.17ರಷ್ಟು ಹೆಚ್ಚಳ ಗೊಂಡಿತು. ಆ ಬಳಿಕ ಮತದಾನದ ಬಿರುಸು ಗೊಂಡಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.29.36ಕ್ಕೆ ಏರಿಕೆ ಕಂಡಿತು. ಅದೇ ರೀತಿ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಶೇ. 41.15ರಷ್ಟು, 5 ಗಂಟೆ ವೇಳೆಗೆ ಶೇ.52.55 ಮತದಾನ ದಾಖಲಾಯಿತು.

ಬೆಳಿಗ್ಗೆ 7 ಗಂಟೆ ಹೊತ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗಳತ್ತ ಸುಳಿಯದ ಮತದಾರರು, 9 ಗಂಟೆಯ ವೇಳೆಗೆ ಮಂದಗತಿಯಲ್ಲಿ ಮತಗಟ್ಟೆಯ ಬಳಿ ಕಾಣಿಸಿ ಕೊಂಡರು. ಬಹುತೇಕ ಎಲ್ಲಾ ಮತಗಟ್ಟೆ ಬಳಿಯಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ಸುಗಮ ವ್ಯವಸ್ಥೆ ಕಲ್ಪಿಸಲಾಗಿತ್ತು. ಕ್ಷೇತ್ರದ ಹಲವು ಮತಗಟ್ಟೆಗಳ ಬಳಿ ಪೊಲೀಸ್ ಭದ್ರತೆಯೊಂದಿಗೆ ಅಶ್ವಾರೋಹಿ ದಳದ ಪೊಲೀಸರನ್ನು ನಿಯೋಜಿಸಲಾಗಿತ್ತು.

ಮತಗಟ್ಟೆ ಸ್ಥಳದಿಂದ 200 ಮೀ. ದೂರ ದಲ್ಲಿ ಅಭ್ಯರ್ಥಿ ಕಡೆಯವರು ಬೂತ್ ತೆರೆಯಲು ಅವಕಾಶ ನೀಡಲಾಗಿತ್ತು. ಈ ಬೂತ್‍ಗಳಲ್ಲಿ ಮತದಾರರು ತಮ್ಮ ತಮ್ಮ ಓಟರ್ ಸ್ಲಿಪ್ ಪಡೆದುಕೊಳ್ಳುತ್ತಿದ್ದರು. ಕ್ಷೇತ್ರದಲ್ಲಿ 5206 ಯುವ ಮತದಾರರಿದ್ದು, ಇದೇ ಮೊದಲ ಬಾರಿಗೆ ಮತ ಚಲಾ ಯಿಸುವ ಯುವ ಜನರಲ್ಲಿ ಉತ್ಸಾಹ ಕಂಡು ಬಂದಿತು. ಸಂತ ಫಿಲೋಮಿನಾ ಪ್ರೌಢ ಶಾಲೆಯ ಮತಗಟ್ಟೆಗಳು, ಉದಯ ಗಿರಿಯ ಡಿ.ಬನುಮಯ್ಯ ಪಾಲಿಟೆಕ್ನಿಕ್ ಕಾಲೇಜಿನ ಮತಗಟ್ಟೆಗಳು, ಅಜೀಜ್ ಸೇಠ್ ನಗರದ ಮತಗಟ್ಟೆಗಳಲ್ಲಿ ಮಧ್ಯಾಹ್ನದ 12 ಗಂಟೆಯ ವೇಳೆಗೆ ಸರತಿ ಸಾಲಿನಲ್ಲಿ ಹೆಚ್ಚಿನ ಮತದಾರರು ಕಂಡು ಬಂದರು.

ಮತಯಂತ್ರಗಳಲ್ಲಿ ದೋಷ ಕಾಣಿಸಿ ಕೊಂಡ ಬಗ್ಗೆ ಕ್ಷೇತ್ರದ ಯಾವುದೇ ಮತ ಗಟ್ಟೆಗಳಿಂದಲೂ ವರದಿಯಾಗಿಲ್ಲ. ಮತ ದಾರರ ಪಟ್ಟಿ ಬಗ್ಗೆಯೂ ಯಾವುದೇ ಅಪಸ್ವರ ಕೇಳಿಬರಲಿಲ್ಲ. ಕ್ಷೇತ್ರದಲ್ಲಿ 1,29,637 ಪುರುಷರು, 1,33,769 ಮಹಿಳೆಯರು ಹಾಗೂ 42 ಮಂದಿ ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,63,448 ಮತದಾರರು ಪಟ್ಟಿಯಲ್ಲಿದ್ದಾರೆ. ಕ್ಷೇತ್ರದ ಮತದಾನ ಪ್ರಕ್ರಿಯೆ ಸಂಬಂಧ ಮಸ್ಟರಿಂಗ್ ಹಾಗೂ ಡಿ-ಮಸ್ಟ ರಿಂಗ್ ಕಾರ್ಯಕ್ಕೆ ಮೈಸೂರಿನ ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರದ ಮತಗಟ್ಟೆಗಳಿಗೆ 657 ಬ್ಯಾಲೆಟ್ ಯೂನಿಟ್, 335 ಕಂಟ್ರೋಲ್ ಯೂನಿಟ್ ಹಾಗೂ 353 ವಿವಿಪ್ಯಾಟ್ ವ್ಯವಸ್ಥೆ ಮಾಡಲಾಗಿತ್ತು. ಚುನಾವಣಾ ಆಯೋಗದ ಗುರುತಿನ ಚೀಟಿ ಮಾತ್ರವ ಲ್ಲದೆ, ಆಯೋಗ ಅನುಮತಿ ನೀಡಿದ್ದ ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿ ದಂತೆ ಆಯೋಗ ಅನುಮತಿ ನೀಡಿದ್ದ ವಿವಿಧ ದಾಖಲೆಗಳೊಂದಿಗೆ ಮತ ದಾರರು ತಮ್ಮ ಹಕ್ಕು ಚಲಾಯಿಸಿದರು.

Translate »