ಮೈಸೂರಲ್ಲಿ ಸಾರಿಗೆ ಬಸ್ ತಡೆದ ಸಂಸದ, ಶಾಸಕರೂ ಸೇರಿದಂತೆ 75 ಮಂದಿ ಬಂಧನ
ಮೈಸೂರು

ಮೈಸೂರಲ್ಲಿ ಸಾರಿಗೆ ಬಸ್ ತಡೆದ ಸಂಸದ, ಶಾಸಕರೂ ಸೇರಿದಂತೆ 75 ಮಂದಿ ಬಂಧನ

May 29, 2018

ಮೈಸೂರು:  ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್ ಅನ್ನು ಮೈಸೂರಿನಲ್ಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರಕ್ಕೆ ಅಡ್ಡಿ ಪಡಿಸಲು ಮುಂದಾದ ಸಂಸದ ಪ್ರತಾಪ ಸಿಂಹ, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಸೇರಿದಂತೆ ಬಿಜೆಪಿಯ 75ಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೋಮವಾರ ಬೆಳಿಗ್ಗೆ ಪೊಲೀಸರು ಬಂಧಿಸಿ, ಮಧ್ಯಾಹ್ನ ಬಿಡುಗಡೆ ಮಾಡಿದರು.

ರಾಜ್ಯ ಬಿಜೆಪಿ ಕರೆ ನೀಡಿದ್ದ ‘ಕರ್ನಾಟಕ ಬಂದ್’ ಹಿನ್ನೆಲೆಯಲ್ಲಿ ಮೈಸೂರಿನ ಬಸ್ ನಿಲ್ದಾಣ, ಬಸ್ ಡಿಪೋಗಳ ಮುಂದೆ ಪ್ರತಿಭಟನೆ ನಡೆಸಿ ಸಾರಿಗೆ ಸಂಸ್ಥೆಗಳ ಬಸ್ ಸಂಚಾರಕ್ಕೆ ತಡೆಯೊಡ್ಡುವುದಕ್ಕೆ ಮುಂದಾಗಿದ್ದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್ ಮೈದಾನದಲ್ಲಿ ವಶಕ್ಕೆ ಪಡೆದ ಬಿಜೆಪಿ ಕಾರ್ಯಕರ್ತರನ್ನು ಮಧ್ಯಾಹ್ನದವರೆಗೂ ಇಟ್ಟುಕೊಂಡು ಊಟದ ವ್ಯವಸ್ಥೆ ಮಾಡಿ, ಮಧ್ಯಾಹ್ನ 2.15ಕ್ಕೆ ಬಿಡುಗಡೆ ಮಾಡಿದರು.

ಬನ್ನಿಮಂಟಪ: ಇಂದು ಬೆಳಿಗ್ಗೆ ಮೈಸೂರಿನ ಬನ್ನಿಮಂಟಪದಲ್ಲಿರುವ ಸಾರಿಗೆ ಸಂಸ್ಥೆಯ ಬಸ್ ಡಿಪೋ ಮುಂದೆ ಬಿಜೆಪಿ ಕಾರ್ಯಕರ್ತರು ಸೋಮವಾರ ಬೆಳಗಿನಿಂದಲೇ ಪ್ರತಿಭಟನೆ ಆರಂಭಿಸಿದರು. ಈ ಪ್ರತಿಭಟನೆಯಲ್ಲಿ ಸಂಸದ ಪ್ರತಾಪ ಸಿಂಹ ಪಾಲ್ಗೊಂಡರು. ಇದೇ ವೇಳೆ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಬಸ್‍ಗಳು ಡಿಪೋದಿಂದ ಹೊರ ಬರುತ್ತಿದ್ದಂತೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಬಸ್ ಡಿಪೋಗೆ ಅಡ್ಡಲಾಗಿ ನಿಂತು ಬಸ್‍ಗಳು ಹೊರ ಬರದಂತೆ ಅಡ್ಡಿಪಡಿಸಿದರು. ಈ ವೇಳೆ ಪೊಲೀಸರು ಸಂಸದ ಪ್ರತಾಪಸಿಂಹ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮಾಜಿ ಉಪಮೇಯರ್ ರತ್ನ ಲಕ್ಷ್ಮಣ್, ಮುಖಂಡ ಸು.ಮುರುಳಿ ಸೇರಿದಂತೆ ಇನ್ನಿತರರನ್ನು ಬಂಧಿಸಿದರು.

ನಗರ ಬಸ್ ನಿಲ್ದಾಣದಲ್ಲಿ: ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಮೈಸೂರಿನ ನಗರ ಬಸ್ ನಿಲ್ದಾಣದ ಬಳಿ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ರಾಮದಾಸ್ ಮಾತನಾಡಿ, ನಾಡಿನ ರೈತರ ಹಿತ ಕಾಪಾಡುವುದಕ್ಕಾಗಿ ಬಿಜೆಪಿ ವತಿಯಿಂದ ‘ಕರ್ನಾಟಕ ಬಂದ್’ ನಡೆಸಲಾಗುತ್ತಿದೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ 53 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದಾಗಿ ಚುನಾವಣೆಗೂ ಮುನ್ನ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ ಮುಖ್ಯಮಂತ್ರಿಯಾಗಿ ಹಲವು ದಿನ ಕಳೆದರೂ ಸಾಲ ಮನ್ನಾ ಮಾಡಲು ಯಾವುದೇ ಕ್ರಮ ಕೈಗೊಳ್ಳದೆ ಇದೀಗ ಬಹುಮತವಿಲ್ಲದ ಕಾರಣ, ಕಾಂಗ್ರೆಸ್ ಬೆಂಬಲ ಪಡೆದು ಸರ್ಕಾರ ನಡೆಸುತ್ತಿದ್ದೇವೆ ಸದೇಕ್ಕೆ ಸಾಲ ಮನ್ನಾ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪಲಾಯನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ‘ಕರ್ನಾಟಕ ಬಂದ್’ಗೆ ಕರೆ ನೀಡುವ ಮೂಲಕ ಅನ್ನದಾತ ರೈತರ ಹಿತ ಕಾಪಾಡುವುದಕ್ಕೆ ಬಿಜೆಪಿ ತನ್ನ ಬದ್ದತೆ ಪ್ರದರ್ಶಿಸಿದೆ.

ಈ ನಡುವೆ ಶ್ರೀರಂಗಪಟ್ಟಣ ಸೇರಿದಂತೆ ಮೈಸೂರಿನ ವಿವಿಧ ಬಡಾವಣೆಗಳಿಗೆ ತೆರಳುತ್ತಿದ್ದ ಬಸ್‍ಗಳು ನಗರ ಬಸ್ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಅವುಗಳನ್ನು ತಡೆದರು. ಅಲ್ಲದೆ ಬಸ್‍ಗಳ ಮುಂದೆ ಬ್ಯಾನರ್ ಹಿಡಿದು ಪ್ರತಿಭಟನೆ ಮುಂದುವರೆಸಿದರು. ಅಂತಿಮವಾಗಿ ಪೊಲೀಸರು ಪ್ರತಿಭಟನೆಯಲ್ಲಿ ತೊಡಗಿದ್ದ ಎಸ್.ಎ.ರಾಮದಾಸ್, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಶಿವಕುಮಾರ್, ಮುಖಂಡ ಜೋಗಿ ಮಂಜು ಸೇರಿದಂತೆ ಹಲವು ಕಾರ್ಯಕರ್ತರನ್ನು ಬಂಧಿಸಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು.

ಗ್ರಾಮಾಂತರ ಬಸ್ ನಿಲ್ದಾಣ: ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಶಾಸಕ ಎಲ್. ನಾಗೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೆಲಕಾಲ ಬಸ್‍ಗಳನ್ನು ತಡೆದು, ಪ್ರತಿಭಟಿಸಿದರು. ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಪ್ರಯಾಣ ಕರನ್ನು ಕರೆದೊಯ್ಯಲು ನಿಲ್ದಾಣದಿಂದ ಹೊರ ಬಂದ ಕೆಲವು ಬಸ್‍ಗಳಿಗೆ ಬಿಜೆಪಿ ಕಾರ್ಯಕರ್ತರು ತಡೆಯೊಡ್ಡಿದರು. ಅಲ್ಲದೆ ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಬಂಧಿತ ಬಿಜೆಪಿ ಕಾರ್ಯಕರ್ತರನ್ನು ಸಿಎಆರ್ ಮೈದಾನಕ್ಕೆ ಕರೆದೊಯ್ದ ನಂತರ ಬಸ್ ಸಂಚಾರ ಸುಗಮವಾಯಿತು.

ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಶಾಸಕ ಎಲ್.ನಾಗೇಂದ್ರ ಅವರನ್ನು ಬಂಧಿಸಿ ಕರೆದೊಯ್ಯುತ್ತಿರುವುದು.

ಕುವೆಂಪುನಗರ ಬಸ್ ಡಿಪೋ: ಮೈಸೂರಿನ ಕುವೆಂಪುನಗರ ಬಸ್ ಡಿಪೋ ಬಳಿ ಪಾಲಿಕೆ ಸದಸ್ಯ ಜಗದೀಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಸ್‍ಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಡಿಪೋ ಗೇಟ್ ಬಳಿ ಕುಳಿತು ಧರಣ ಆರಂಭಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

Translate »