ಮೈಸೂರು ಮಹಾನಗರ ಪಾಲಿಕೆ ವಾರ್ಡ್‍ಗಳ ಪುನರ್‍ವಿಂಗಡಣೆ
ಮೈಸೂರು

ಮೈಸೂರು ಮಹಾನಗರ ಪಾಲಿಕೆ ವಾರ್ಡ್‍ಗಳ ಪುನರ್‍ವಿಂಗಡಣೆ

May 29, 2018

ಮೈಸೂರು:  ಮೈಸೂರು ಮಹಾನಗರ ಪಾಲಿಕೆ ವಾರ್ಡ್‍ಗಳ ಪುನರ್ ವಿಂಗಡಣೆ ಸಂಬಂಧ ಅಂತಿಮ ಅಧಿಸೂಚನೆ ಹೊರಬಿದ್ದಿದ್ದು, ವಾರ್ಡ್‍ಗಳ ನಕ್ಷೆಯ ದಾಖಲೀಕರಣ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ಪ್ರಕ್ರಿಯೆಗಳಲ್ಲಿ ಪಾಲಿಕೆ ನಿರತವಾಗಿದೆ.

2011ರ ಜನಗಣತಿ ಆಧಾರದಲ್ಲಿ ಮೈಸೂರು ಮಹಾನಗರ ಪಾಲಿಕೆಯ ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಕರಡನ್ನು ಇದೇ ಫೆ.8ರಂದು ಪ್ರಕಟಿಸಿ, ಅಧಿಸೂಚನೆ ಹೊರಡಿಸಿತ್ತು. ಈ ಸಂಬಂಧ ಅಧಿಸೂಚನೆ ಪ್ರಕಟಿಸಿದ ದಿನದಿಂದ 15 ದಿನಗಳ ಒಳಗೆ ಸಲಹೆ ಹಾಗೂ ಆಕ್ಷೇಪಣೆಗೆ ಆಹ್ವಾನಿಸಲಾಗಿತ್ತು. ಅದರಂತೆ ಆಕ್ಷೇಪಣೆಗಳ ಪರಿಶೀಲಿಸಿ ಏ.23ರಂದು ವಾರ್ಡ್‍ಗಳ ಪುನರ್ ವಿಂಗಡಣೆ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸಿದೆ.

ಇದೀಗ ನಗರ ಪಾಲಿಕೆಯು ಮತದಾರರ ಪಟ್ಟಿ ಪರಿಷ್ಕರಣೆ, ವಿಂಗಡಣೆಗೊಂಡ ವಾರ್ಡ್‍ಗಳ ರೇಖಾಚಿತ್ರ ದಾಖಲೀಕರಣ ಸೇರಿದಂತೆ ಹಲವು ಪ್ರಕ್ರಿಯೆಗಳಲ್ಲಿ ನಿರತವಾಗಿದೆ. ಪುನರ್ ವಿಂಗಡಣೆಯಿಂದ ಒಟ್ಟು ವಾರ್ಡ್‍ಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲವಾದರೂ ವಾರ್ಡ್‍ಗಳ ಸಂಖ್ಯೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಅದರಂತೆ ಹೆಬ್ಬಾಳು ಲಕ್ಷ್ಮೀಕಾಂತನಗರ ಮೊದಲ ವಾರ್ಡ್ ಆಗಿ ರೂಪುಗೊಂಡಿದ್ದರೆ, ಶ್ರೀರಾಂಪುರ 65ನೇ ವಾರ್ಡ್ ಆಗಿದೆ.

ಪ್ರತಿ ವಾರ್ಡ್‍ನಲ್ಲಿ 12 ರಿಂದ 14 ಸಾವಿರ ಜನಸಂಖ್ಯೆಯಂತೆ ನಿಗದಿ ಮಾಡಲಾಗಿದೆ. ವಾರ್ಡ್‍ಗಳ ಪ್ರದೇಶದಲ್ಲಿ ಹಲವು ರೀತಿಯ ವ್ಯತ್ಯಯ ಆಗಲಿರುವ ಹಿನ್ನೆಲೆಯಲ್ಲಿ ಹಾಲಿ ಪಾಲಿಕೆ ಸದಸ್ಯರು ಮುಂಬರುವ ಚುನಾವಣೆಯಲ್ಲಿ ವಾರ್ಡ್ ವ್ಯಾಪ್ತಿಯ ಮತದಾರರ ಮನದಾಳ ಅರಿಯಲು ತಯಾರಿ ನಡೆಸುವುದು ಅನಿವಾರ್ಯವಾಗಿದೆ. ಸೆಪ್ಟೆಂಬರ್‍ನಲ್ಲಿ ಹಾಲಿ ಇರುವ ಜೆಡಿಎಸ್-ಬಿಜೆಪಿ ಮೈತ್ರಿ ಆಡಳಿತಾವಧಿ ಅಂತ್ಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ನೂತನ ವಾರ್ಡ್‍ಗಳ ಅನುಸಾರ ಚುನಾವಣೆ ನಡೆಸಲಿದೆ. ಹೀಗಾಗಿ ವಾರ್ಡ್‍ಗಳ ಹಾಗೂ ಆ ವ್ಯಾಪ್ತಿಯ ಮತದಾರರ ಅಂತರಾಳ ಅರಿಯಲು ಮುಂಬರುವ ಪಾಲಿಕೆ ಚುನಾವಣೆಯ ಅಭ್ಯರ್ಥಿಯಾಗಲಿರುವ ಆಕಾಂಕ್ಷಿಗಳು ಹಲವು ಸವಾಲುಗಳನ್ನು ಎದರಿಸಲು ಸಜ್ಜಾಗಬೇಕಿದೆ. ಸದ್ಯ ವಾರ್ಡ್‍ಗಳು ಮೀಸಲು ಪಟ್ಟಿ ಪ್ರಕಟಣೆಯನ್ನು ಸರ್ಕಾರ ಬಾಕಿ ಉಳಿಸಿಕೊಂಡಿದ್ದು, ಆ ಬಳಿಕ ವಾರ್ಡ್‍ಗಳಲ್ಲಿ ಚುನಾವಣಾ ರಾಜಕೀಯ ಚಟುವಟಿಕೆ ರಂಗೇರಲಿದೆ.

ಈ ಹಿಂದೆ 25ರಿಂದ 30 ಸಾವಿರ ಜನಸಂಖ್ಯೆಯಿಂದ ಹಿಡಿದು 5ರಿಂದ 6 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‍ಗಳು ರಚನೆ ಮಾಡಲಾಗಿತ್ತು. ಕಳೆದ ವರ್ಷ ಪಾಲಿಕೆ ಆಯುಕ್ತರಾಗಿದ್ದ ಜಿ.ಜಗದೀಶ್ 12ರಿಂದ 14 ಸಾವಿರದಷ್ಟು ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‍ಗಳ ಮರುವಿಂಗಡಣೆ ಮಾಡಿ ಜಿ¯್ಲÁಡಳಿತದ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಪುನರ್ ಪರಿಶೀಲನೆ ಅಗತ್ಯ: ಪುನರ್ ವಿಂಗಡಣೆ ಸಂಬಂಧ ಪ್ರತಿಕ್ರಿಯೆ ನೀಡಿದ ಮಾಜಿ ಮೇಯರ್ ಹಾಗೂ ಹಾಲಿ ಪಾಲಿಕೆ ಸದಸ್ಯ ಬಿ.ಎಲ್.ಭೈರಪ್ಪ, ಈ ಪ್ರಕ್ರಿಯೆಯಲ್ಲಿ ಮುಡಾ ಬಡಾವಣೆ ಹಾಗೂ ಮುಡಾ ಅಂಗೀಕರಿಸಿದ ಬಡಾವಣೆ ಸೇರಿ ಒಟ್ಟು 62 ಬಡಾವಣೆಗಳು ಸೇರ್ಪಡೆಗೊಂಡಿಲ್ಲ. ಆದರೆ ಇವುಗಳನ್ನು ಈಗಾಗಲೇ ಪಾಲಿಕೆಗೆ ಮುಡಾ ಹಸ್ತಾಂತರ ಮಾಡಿದೆ. ಜೊತೆಗೆ ರಿಂಗ್ ರಸ್ತೆ ಆಚೆಗೂ ಬಡಾವಣೆಗಳು ನಿರ್ಮಾಣ ಆಗಿದ್ದು, ಇವುಗಳೂ ಸೇರ್ಪಡೆ ಆಗಿಲ್ಲ. ಇವುಗಳನ್ನೂ ಒಳಗೊಂಡಂತೆ ವಾರ್ಡ್‍ಗಳ ರಚನೆಯಾದಲ್ಲಿ ಅಲ್ಲಿನ ನಾಗರಿಕರಿಗೂ ಸಮರ್ಪಕ ಮೂಲ ಸೌಲಭ್ಯ ದೊರೆಯಲಿದೆ. ಹೀಗಾಗಿ ಪುನರ್ ಪರಿಶೀಲನೆ ಮೂಲಕ 65ಕ್ಕೂ ಹೆಚ್ಚು ವಾರ್ಡ್‍ಗಳ ರಚನೆಯೇ ಸೂಕ್ತ. ಈ ಹಿನ್ನೆಲೆಯಲ್ಲಿ ಸರ್ಕಾರ ಪುನರ್ ಪರಿಶೀಲನೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಕೈ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಮಾಡಿದೆ: ಪ್ರತಿ 10 ವರ್ಷಕ್ಕೊಮ್ಮೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಪುನರ್ ವಿಂಗಡಣೆ ಸಹಜ ಪ್ರಕ್ರಿಯೆ. ಆದರೆ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಈ ವಾರ್ಡ್‍ಗಳ ಪುನರ್ ವಿಂಗಡಣೆ ಮಾಡಲಾಗಿದ್ದು, ಪುನರ್ ವಿಂಗಡಣೆಯಲ್ಲಿ ಹಸ್ತಕ್ಷೇಪ ಮಾಡಿರುವ ಕಾಂಗ್ರೆಸ್ ಸರ್ಕಾರ, ತನ್ನ ಅನುಕೂಲಕ್ಕೆ ತಕ್ಕಂತೆ ವಾರ್ಡ್‍ಗಳ ರಚನೆ ಮಾಡಿಸಿದೆ. ಈ ಹಿನ್ನೆಲೆಯಲ್ಲಿ ಸದರಿ ವಿಂಗಡಣೆ ಪ್ರಕ್ರಿಯೆ ರದ್ದುಗೊಳಿಸಿ ಪುನರ್ ಪರಿಶೀಲನೆ ಮೂಲಕ ಮತ್ತೊಮ್ಮೆ ವಿಂಗಡಣೆ ಪ್ರಕ್ರಿಯೆ ನಡೆಸಬೇಕು ಎಂದು ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಒತ್ತಾಯಿಸಿದರು.

ವಾರ್ಡ್‍ಗಳ ಸಂಖ್ಯೆಗಳ ಬದಲಾವಣೆ ಬಗ್ಗೆ ನನ್ನ ಆಕ್ಷೇಪವಿದೆ. ಕಾರಣ, ಮೈಸೂರು ನಗರದ `0’ ಪಾಯಿಂಟ್ ದೊಡ್ಡ ಗಡಿಯಾರದಿಂದ ಆರಂಭವಾಗುತ್ತದೆ. ಅದರಂತೆ ಅರಮನೆ ಮನೆ ಸಂಖ್ಯೆ 1 ಆಗುತ್ತದೆ. ಆದರೆ ಈ ಪುನರ್ ವಿಂಗಡಣೆ ಸಂಬಂಧ ಸರ್ವೇ ನಡೆಸಿರುವ ಸರ್ವೇ ಇಲಾಖೆಯವರು ಹೆಬ್ಬಾಳಿನ ಲಕ್ಷ್ಮೀಕಾಂತನಗರಕ್ಕೆ ವಾರ್ಡ್ ಸಂಖ್ಯೆ 1 ಅನ್ನು ನೀಡಿದ್ದಾರೆ. ಈ ರೀತಿ ಮಾಡಲು ಅವರಿಗೆ ಯಾವುದೇ ಅವಕಾಶವಿಲ್ಲ. ಪುನರ್ ವಿಂಗಡಣೆ ಸಂಬಂಧ ಈಗಾಗಲೇ ಆಕ್ಷೇಪಣೆಗಳನ್ನು ತಿರಸ್ಕರಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ವಾರ್ಡ್ ಸಂಖ್ಯೆ ಬದಲಾವಣೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಜಿಯೋ ಮ್ಯಾಪಿಂಗ್ ತಂತ್ರಜ್ಞಾನ ಅಳವಡಿಕೆ

ಪುನರ್ ವಿಂಗಡಣೆ ಆದ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ, ವಾರ್ಡ್ ವ್ಯಾಪ್ತಿಯ ನಕ್ಷೆಯ ದಾಖಲೀಕರಣ ಸೇರಿದಂತೆ ಹಲವು ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಅಲ್ಲದೆ, ವಾರ್ಡ್‍ಗಳನ್ನು ಗುರುತಿಸಲು ಜಿಯೋ ಮ್ಯಾಪಿಂಗ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಈಗಲೂ ಮತದಾರರ ಸೇರ್ಪಡೆ, ಕೈಬಿಡುವುದು ಹಾಗೂ ತಿದ್ದುಪಡಿ ಸೇರಿದಂತೆ ಹಲವು ಪ್ರಕ್ರಿಯೆಗಳು ಏಕಕಾಲದಲ್ಲಿ ನಡೆಯಲಿವೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಸಂಬಂಧ ಪಾಲಿಕೆ ಆಕ್ಷೇಪಣೆಗಳನ್ನು ಆಹ್ವಾನಿಸಲಿದೆ. – ಕೆ.ಹೆಚ್.ಜಗದೀಶ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರು.

ನೂತನ ವಾರ್ಡ್‍ಗಳು

ವಾರ್ಡ್ ಸಂಖ್ಯೆ ಕ್ರಮವಾಗಿ 1-ಹೆಬ್ಬಾಳು ಲಕ್ಷೀಕಾಂತ ನಗರ, 2-ಮಂಚೇಗೌಡನಕೊಪ್ಪಲು, 3-ಮಹದೇಶ್ವರ ಬಡಾವಣೆ, 4-ಹೆಬ್ಬಾಳು ಲೋಕನಾಯಕನಗರ, 5-ಕುಂಬಾರಕೊಪ್ಪಲು, 6-ಗೋಕುಲಂ. 7-ಮೇಟಗಳ್ಳಿ, 8-ಬನ್ನಿಮಂಟಪ ಹುಡ್ಕೊ ಬಡಾವಣೆ, 9-ಕೆಸರೆ, 10-ರಾಜೀವನಗರ, 11-ಶಾಂತಿನಗರ (ಮಹದೇವಪುರ ರಸ್ತೆ), 12-ಶಾಂತಿನಗರ (ಇಂದಿರಾ ಗಾಂಧಿ ರಸ್ತೆ), 13-ಉದಯಗಿರಿ, 14-ಸತ್ಯನಗರ, 15-ರಾಜೇಂದ್ರನಗರ, 16-ಸುಭಾಷ್‍ನಗರ, 17-ಬನ್ನಿಮಂಟಪ, 18-ಯಾದವಗಿರಿ, 19-ಜಯಲಕ್ಷ್ಮೀಪುರಂ (ವಿವಿ ಮೊಹ¯್ಲÁ), 20-ವಿಜಯನಗರ, 21-ಗಂಗೋತ್ರಿ, 22-ಪಡುವಾರಹಳ್ಳಿ, 23-ಸುಬ್ಬರಾಯನಕೆರೆ, 24-ಮಂಡಿ ಮೊಹ¯್ಲÁ, 25-ತಿಲಕನಗರ, 26-ಮೀನಾ ಬಜಾರ್, 27-ವೀರನಗೆರೆ, 28-ಗಾಂಧಿನಗರ, 29-ಎನ್‍ಆರ್ ಮೊಹ¯್ಲÁ, 30-ಕ್ಯಾತಮಾರನಹಳ್ಳಿ, 31-ಕೆಎನ್ ಪುರ (ಗೌಸಿಯಾನಗರ), 32-ಗೌಸಿಯಾನಗರ `ಎ’ ಬ್ಲಾಕï (ಉಸ್ಮಾನಿಯಾ), 33-ಅಜೀಜ್ ಸೇಠ್ ನಗರ, 34-ಕಲ್ಯಾಣಗಿರಿ, 35-ಸಾತಗಳ್ಳಿ ಬಡಾವಣೆ 1ನೇ ಹಂತ, 36-ಯರಗನಹಳ್ಳಿ (ಅಂಬೇಡ್ಕರ್ ಕಾಲೋನಿ), 37-ರಾಘವೇಂದ್ರ ನಗರ, 38-ಗಿರಿಯಾಭೋವಿ ಪಾಳ್ಯ, 39-ಗಾಯತ್ರಿಪುರಂ 1ನೇ ಹಂತ, 40-ಲಷ್ಕರ್ ಮೊಹ¯್ಲÁ, 41-ದೇವರಾಜ ಮೊಹ¯್ಲÁ, 42-ಕೆಜಿ ಕೊಪ್ಪಲು, 43-ಟಿಕೆ ಬಡಾವಣೆ, 44-ಜನತಾ ನಗರ, 45-ಶಾರದಾದೇವಿ ನಗರ, 46-ದಟ್ಟಗಳ್ಳಿ, 47-ಕುವೆಂಪುನಗರ, 48-ಜಯನಗರ, 49-ಲಕ್ಷ್ಮೀಪುರಂ, 50-ಸುಣ್ಣದಕೇರಿ, 51-ಅಗ್ರಹಾರ, 52-ಇಟ್ಟಿಗೆಗೂಡು, 53-ಕುರುಬಾರಹಳ್ಳಿ, 54-ಗುಂಡೂರಾವ್ ನಗರ, 55-ಚಾಮುಂಡಿಪುರಂ, 56-ಕೃಷ್ಣಮೂರ್ತಿಪುರಂ, 57-ಕುವೆಂಪುನಗರ-ಸಿಐಟಿಬಿ, 58-ರಾಮಕೃಷ್ಣನಗರ, 59-ಕುವೆಂಪುನಗರ `ಎಂ’ ಬ್ಲಾಕ್, 60-ಅಶೋಕಪುರಂ, 61-ವಿದ್ಯಾರಣ್ಯಪುರಂ, 62-ವಿಶ್ವೇಶ್ವರನಗರ, 63-ಜೆಪಿ ನಗರ, 64-ಅರವಿಂದನಗರ, 65-ಶ್ರೀರಾಂಪುರ.

Translate »