ಇನ್ನು ಮುಂದೆ ಡಿಎಲ್ ಪಡೆಯಲು 8ನೇ ತರಗತಿ ವಿದ್ಯಾರ್ಹತೆ ಕಡ್ಡಾಯವಿಲ್ಲ
ಮೈಸೂರು

ಇನ್ನು ಮುಂದೆ ಡಿಎಲ್ ಪಡೆಯಲು 8ನೇ ತರಗತಿ ವಿದ್ಯಾರ್ಹತೆ ಕಡ್ಡಾಯವಿಲ್ಲ

July 25, 2019

ಮೈಸೂರು, ಜು. 24(ಆರ್‍ಕೆ)- ವಾಹನ ಚಾಲಕರಿಗಿದು ಸಿಹಿ ಸುದ್ದಿ. ಇನ್ನು ಮುಂದೆ ಚಾಲನಾ ಪರವಾನಗಿ (ಡಿಎಲ್) ಪಡೆಯಲು 8ನೇ ತರಗತಿ ವಿದ್ಯಾರ್ಹತೆ ಕಡ್ಡಾಯವಿಲ್ಲ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರವು, ಆಟೋ, ಲಾರಿ, ಟ್ಯಾಕ್ಸಿ ಹಾಗೂ ಇನ್ನಿತರ ವಾಹನಗಳ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಜಾರಿಯಲ್ಲಿದ್ದ 8ನೇ ತರಗತಿ ಓದಿರ ಬೇಕೆಂಬ ನಿಯಮವನ್ನು ತೆಗೆದು ಹಾಕಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಮಂಡಿಸಿದ್ದ ತಿದ್ದುಪಡಿ ಕಾಯ್ದೆಗೆ ಮಂಗಳವಾರ ಲೋಕಸಭೆ ಅನುಮೋದನೆ ನೀಡಿದೆ ಎಂದಿರುವ ಸಂಸದರು, ಈ ನಿಯಮ ತೆಗೆದುಹಾಕಬೇಕೆಂದು ಸಾರಿಗೆ ಸ್ಥಾಯಿ ಸಮಿತಿ ಸದಸ್ಯರಾಗಿದ್ದ ತಮಗೆ ಚಾಲಕರು ಮನವಿ ಮಾಡಿದ್ದರಲ್ಲದೆ, ಶಾಸಕ ಎಸ್.ಎ. ರಾಮದಾಸ್ ಅವರು ಮೈಸೂರಿನಲ್ಲಿ ಜನಾಂದೋಲನವನ್ನೇ ಮಾಡಿದ್ದರು ಎಂದು ತಿಳಿಸಿದ್ದಾರೆ.

ತಮ್ಮ ಮನವಿಯನ್ನು ಪುರಸ್ಕರಿಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರತಾಪ್ ಸಿಂಹ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

 

 

 

Translate »