ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸಿ
ಮೈಸೂರು

ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸಿ

May 29, 2019

ನವದೆಹಲಿ: ತಮಿಳುನಾಡಿಗೆ ಜೂನ್ ನಲ್ಲಿ 9.19 ಟಿಎಂಸಿ ನೀರು ಬಿಡುಗಡೆ ಮಾಡು ವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಸಿ) ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ಆದರೆ ಮಳೆ ಮತ್ತು ಒಳ ಹರಿವು ಆಧರಿಸಿ ನೀರು ಬಿಡುಗಡೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿರುವುದು ರಾಜ್ಯದ ಆತಂಕ ತಪ್ಪಿಸಿದೆ.

ದೆಹಲಿಯ ಸೇವಾ ಭವನದಲ್ಲಿರುವ ಜಲ ಆಯೋ ಗದ ಕಚೇರಿಯಲ್ಲಿ ಇಂದು ಕಾವೇರಿ ನೀರು ನಿರ್ವ ಹಣಾ ಪ್ರಾಧಿಕಾರದ ಸಭೆ ನಡೆಯಿತು. ಕಾವೇರಿ ಕೊಳ್ಳದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಜೂನ್ ತಿಂಗಳಲ್ಲಿ ಬಿಡಬೇಕಾಗಿರುವ 9.19 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಸಿಡಬ್ಲ್ಯೂಸಿ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್, ತಮಿಳುನಾಡಿಗೆ ಜೂನ್ ತಿಂಗಳಲ್ಲಿ ಬಿಡಬೇಕಾದ ನೀರನ್ನು ಹರಿಸಲು ಅಧಿಕಾರಿಗಳು ಒಪ್ಪಿಕೊಂಡಿ ದ್ದಾರೆ. ಜೂನ್ ಮಾಸಾಂತ್ಯದೊಳಗೆ ಪ್ರತಿ 10 ದಿನಕ್ಕೊಮ್ಮೆ 3 ಟಿಎಂಸಿಯಂತೆ ನೀರು ಹರಿಸ ಬೇಕು. ಮುಂಗಾರು ಮಳೆ ತಡವಾದರೆ ಮುಂದೆ ಬಿಡಬೇಕಾದ ನೀರಿನ ಬಗ್ಗೆ ಚರ್ಚೆ ಮಾಡಲಾ ಗುವುದು ಎಂದು ತಿಳಿಸಿದರು.

ಪುದುಚೇರಿ ಹಾಗೂ ತಮಿಳುನಾಡಿನ ಕೋಟಾ ಮೊದಲಿನಂತೆ ಉಳಿಯಲಿದೆ. ಈ ಬಾರಿ ಕರ್ನಾ ಟಕದಲ್ಲಿ ಮುಂಗಾರು ಎಂದಿನಂತೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕರ್ನಾಟಕ ಕೂಡ ತಕರಾರಿ ಲ್ಲದೆ ನೀರು ಬಿಡುಗಡೆಗೆ ಸಮ್ಮತಿಸಿದೆ ಎಂದು ಮಸೂದ್ ಹುಸೇನ್ ತಿಳಿಸಿದರು. ಕಾವೇರಿ ನದಿಯಲ್ಲಿ ಒಳ ಹರಿವು ಸಾಮಾನ್ಯವಾಗಿರುತ್ತದೆ ಎಂದು ಭಾವಿಸಿಕೊಂಡು ನೀರು ಹರಿಸಲು ಪ್ರಾಧಿಕಾರ ಆದೇಶ ಮಾಡಿದೆ ಎನ್ನಲಾಗಿದೆ. ಇಂದಿನ ಆದೇಶವನ್ನು ಒಳ ಹರಿವಿನ ಆಧಾರ ದಲ್ಲಿ ಮುಂದಿನ ಸಭೆಯಲ್ಲಿ ಚರ್ಚಿಸಿ ಪರಿ ಶೀಲಿಸಲಾಗುತ್ತದೆ

ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಒಟ್ಟು 14.5 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ. ಕೆಆರ್‍ಎಸ್ ಜಲಾಶಯದಿಂದ 6.9 ಟಿಎಂಸಿ, ಕಬಿನಿಯಿಂದ 2.93 ಟಿಎಂಸಿ, ಹಾರಂಗಿಯಿಂದ 1.35 ಟಿಎಂಸಿ, ಹೇಮಾವತಿಯಿಂದ 3.51 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ.

ಕಾವೇರಿ ನೀರು ಬಿಡುಗಡೆ ಆದೇಶವನ್ನು ಪುನರ್ ಪರಿಶೀಲಿಸಲಿ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಜೂನ್ ತಿಂಗಳಲ್ಲಿ 9 ಟಿಎಂಸಿ ನೀರು ಬಿಡುಗಡೆ ಮಾಡಲು ಆದೇಶಿಸಿರುವುದು ಸರಿಯಾದ ಕ್ರಮವಲ್ಲ. ರಾಜ್ಯದಲ್ಲಿ ತೀವ್ರ ಬರಗಾಲ, ಕುಡಿಯುವ ನೀರಿನ ಅಭಾವ, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಹವಾಮಾನ ಇಲಾಖೆ ಪ್ರಸಕ್ತ ಸಾಲಿನಲ್ಲಿ ಮಳೆ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿರುವುದು ಗಮನಾರ್ಹ ವಿಚಾರ. ಬೆಂಗಳೂರಿಗೂ ನೀರಿಗೆ ಆಹಾಕಾರವಾಗಲಿದೆ. ತಮಿಳುನಾಡಿಗೆ ಹರಿಸಿದ ನೀರನ್ನು ವಾಪಸ್ಸು ತರಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಮರುಪರಿಶೀಲನೆಗೆ ಒತ್ತಾಯಿಸಬೇಕು. ಕಾವೇರಿ ಅಚ್ಚುಕಟ್ಟು ಭಾಗದ ಸಂಸದರು ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾದ ಮಾಹಿತಿ ನೀಡಬೇಕು. -ಕುರುಬೂರು ಶಾಂತಕುಮಾರ್, ಅಧ್ಯಕ್ಷ ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಗೌರವಿಸುತ್ತೇವೆ. ಆದರೆ ನಮ್ಮ ರಾಜ್ಯದ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳಬೇಕು. ಕಬಿನಿ, ಕೆಆರ್‍ಎಸ್ ಅಣೆಕಟ್ಟೆಗಳಲ್ಲಿ ನೀರಿಲ್ಲ. ಹಳ್ಳಿಗಳಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ, ವಾಸ್ತವ ಸ್ಥಿತಿಯನ್ನು ಅರಿತು ಮುಂದುವರೆಯಬೇಕು. ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದವರು ಅಲ್ಲಿಯೇ ಆದೇಶವನ್ನು ವಿರೋಧಿಸಿ, ಪುನರ್ ಪರಿಶೀಲನೆಗೆ ಒತ್ತಾಯಿಸಬೇಕಿತ್ತು. ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯ. ಜನ ಸ್ವಯಂ ಪ್ರೇರಿತರಾಗಿ ಪ್ರತಿಭಟನೆಗೆ ಮುಂದಾಗುತ್ತಾರೆ. -ಹೊಸಕೋಟೆ ಬಸವರಾಜು, ರೈತ ಮುಖಂಡ

ಮಂಡ್ಯ ಜಿಲ್ಲೆಯಲ್ಲಿ ರೈತರಿಂದ ರಸ್ತೆ ತಡೆ

ಮಂಡ್ಯ: ತಮಿಳುನಾಡಿಗೆ ಕೆಆರ್‍ಎಸ್ ನಿಂದ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ (ಪ್ರಾಧಿಕಾರ) ನೀಡಿರುವ ಆದೇಶವನ್ನು ವಿರೋಧಿಸಿ ಮಂಡ್ಯ ಮತ್ತು ಪಾಂಡವಪುರದಲ್ಲಿಂದು ರೈತರು ಹಾಗೂ ಕನ್ನಡಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಂಡ್ಯ ವರದಿ: ಇಂದು ಬೆಳಿಗ್ಗೆ ನಗರದ ಸರ್‍ಎಂವಿ ಪ್ರತಿಮೆ ಎದುರು ಸಮಾವೇಶಗೊಂಡ ಜಿಲ್ಲಾ ರೈತ ಸಂಘ, ಕನ್ನಡಸೇನೆ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ನೀಡಿರುವ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಮತ್ತು ಕಾವೇರಿ ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಬರದ ನಡುವೆಯೂ ತಮಿಳುನಾಡಿಗೆ ನೀರು ಬಿಡುವಂತೆ ನೀಡಿರುವ ಆದೇಶವನ್ನು ಖಂಡಿಸಿದರು. ಇದೇ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಕಾವೇರಿ ನೀರಿನ ತೀರ್ಮಾನ ದಲ್ಲಿ ಈಗಾಗಲೇ ನಮಗೆ ಮೋಸವಾಗಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿ ಸ್ಥಾಪನೆಯಾದಾಗÀಲೇ ಕರ್ನಾಟಕಕ್ಕೆ ಅನ್ಯಾಯ ಪ್ರಾರಂಭವಾಯಿತು. ನಿರಂತರವಾಗಿ ನೀರಿನ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ. ನಮ್ಮ ಸರ್ಕಾರ ಕೂಡ ರಾಜ್ಯದ ಹಿತ ಕಾಪಾಡುವ ವಿಚಾರದಲ್ಲಿ ವಿಫಲವಾಗಿದೆ ಇದರ ನಡುವೆ ತಮಿಳುನಾಡಿಗೆ ಮತ್ತೆ ಮತ್ತೆ ನೀರು ಬಿಡಿ ಎನ್ನುತ್ತಿರುವುದು ಖಂಡನೀಯ ಎಂದರು. ಮಂಡ್ಯ ಜಿಲ್ಲೆಯ ಬಯಲು ಪ್ರದೇಶಗಳಿಗೆ ಈಗಲೂ ನೀರು ಹರಿಸಿಲ್ಲ. ಇರೋ ಭೂಮಿಯನ್ನು ನಮ್ಮ ಜನ ತೆಕ್ಕಲು ಬಿಟ್ಟಿದ್ದಾರೆ. ನ್ಯಾಯಾಲಯ 14 ಟಿಎಂಸಿ ನೀರಿನ ಒಳಹರಿವು ಬಂದ್ರೆ ನೀರು ಬಿಡಬೇಕೆಂದು ಹೇಳಿದೆ. ಅಷ್ಟು ಪ್ರಮಾಣದ ನೀರು ಬಂದ್ರೆ ನಾವೂ ಕೊಡದೆ ಇರೋಕೆ ಮನುಷ್ಯತ್ವ ಇಲ್ಲದವರೇನೂ ಅಲ್ಲ. ನಾವೂ ಕೂಡ ತಮಿಳುನಾಡಿಗೆ ನೀರು ಕೊಡ್ತೀವಿ. ಆದರೆ ಇದೀಗ ಮಂಡ್ಯ ಜನ ನೀರಿ ಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ

ಇದರ ನಡುವೆ ತಮಿಳುನಾಡಿಗೆ ನೀರುಬಿಡಿ ಎನ್ನುತ್ತಿರುವುದು ಎಷ್ಟು ಸರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ನಮಗೇ ಕುಡಿಯೋದಕ್ಕೆ ನೀರಿಲ್ಲ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡೋ ಮಾತೆಲ್ಲಿದೆ. ಯಾವುದೇ ಕಾರಣಕ್ಕೂ ಒಂದೇ ಒಂದೇ ಹನಿ ನೀರನ್ನೂ ಕೂಡ ಬಿಡಬಾರದು. ನಮ್ಮ ಜನರ ಕುಡಿಯುವ ನೀರಿಗೆ ಮೊದಲ ಆದ್ಯತೆ ನಿಡಬೇಕು. ತಪ್ಪಿದ್ದಲ್ಲಿ ರೈತರು ಉಗ್ರ ಹೋರಾಟಕ್ಕಿಳಿಯ ಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರೈತಸಂಘದ ಮಹಿಳಾ ಮುಖಂಡೆ ಲತಾ ಶಂಕರ್, ಕನ್ನಡ ಸೇನೆ ಮುಖಂಡ ಮಂಜುನಾಥ್ ಮತ್ತಿತರರು ಇದ್ದರು.

ಪಾಂಡವಪುರ ವರದಿ: ಕೆಆರ್‍ಎಸ್‍ನಿಂದ ತಮಿಳುನಾಡಿಗೆ 9 ಟಿಎಂಸಿ ನೀರು ಹರಿಸುವಂತೆ ಆದೇಶ ನೀಡಿರುವ ಕಾವೇರಿ ನದಿ ನೀರು ನಿರ್ವಹಣೆ ಮಂಡಳಿ ವಿರುದ್ಧ ತಾಲೂಕು ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ 5 ದೀಪ ವೃತ್ತದಲ್ಲಿ ಜಮಾಯಿಸಿ ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ರೈತ ಸಂಘದ ಕಾರ್ಯಕರ್ತರು, ಸರಿಯಾದ ಸಮಯಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ಕೆಆರ್‍ಎಸ್ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಎದುರಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವಂತೆ ಆದೇಶ ನೀಡಿರುವುದು ಖಂಡನೀಯ ಎಂದು ಕಿಡಿಕಾರಿದರು.

ಕೆಆರ್‍ಎಸ್ ಡ್ಯಾಂನಲ್ಲಿ ಕುಡಿಯಲು ನೀರು ಇರುವುದು ಕೇವಲ 3 ಟಿಎಂಸಿ ಮಾತ್ರ. ಹವಾಮಾನ ವೈಪರಿತ್ಯದಿಂದ ಸರಿಯಾಗಿ ಮಳೆಯಾಗುತ್ತಿಲ್ಲ. ಇಂತಹ ಸಂದರ್ಭ ಮನವರಿಕೆ ಮಾಡಿಕೊಳ್ಳದ ಕಾವೇರಿ ನದಿ ನೀರು ನಿರ್ವಹಣೆ ಮಂಡಳಿ ತೀರ್ಪು ಅವೈಜ್ಞಾನಿಕ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಬಹುಮತ ಪಡೆದು ಬಿಜೆಪಿ ಅಧಿಕಾರ ಪಡೆದಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಕಾವೇರಿ ನದಿ ನೀರು ವಿವಾದದಲ್ಲಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಜೊತೆಗೆ ರಾಷ್ಟ್ರೀಯ ಜಲನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲ್ಲಿ ರೈತ ಮುಖಂಡರಾದ ಕೆಂಪೂಗೌಡ, ಗೌಡೇಗೌಡ, ಹರೀಶ್, ಮಂಜುನಾಥ್, ರವಿಕುಮಾರ್, ಶಿವಣ್ಣ, ರಘು, ರಾಜೇಶ್ ಸೇರಿದಂತೆ ಹಲವರಿದ್ದರು.

Translate »